Saturday, 28 March 2015

Some ಮಾತು
ಸರಳ ಜೀವನ, ಲೈಫು ಪಾವನ
ನಮ್ಮ ಅಜೀಬು ದುನಿಯಾದಲ್ಲಿ ಎಲ್ಲವೂ ಕೈಪಿಡಿಯೊಂದಿಗೇ ಬರಲ್ಲ. ಯಾಕಂದ್ರೆ ಈ ನಮ್ ಲೈಫ್ ಅನ್ನೋದು ಯಂತ್ರ ಅಲ್ವಲ್ಲ. ಈ ನಮ್ಮ ಜೀವನ ತುಂಬಾನೆ ಸಿಂಪಲ್ ಆಗಿದೆ. ನಾವೇ ಅದನ್ನು ಕಾಂಪ್ಲೆಕ್ಸ್ ಮಾಡ್ಕೋಂಡು ಒದ್ದಾಡ್ತಾ ಇರ್ತೀವೆನೋ ಅಂತ ಬಹಳಷ್ಟು ಸಾರಿ ನಿಮಗೇ ಅನ್ನಿಸಿರತ್ತೆ! 'ಕಂಕುಳಲ್ಲೇ ಮಗೂನ ಇಟ್ಕೊಂಡು ಊರೆಲ್ಲಾ ಹುಡುಕಿದ್ರು' ಅನ್ನೋತರ ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. ಬೀ ಛೀಯರ್ ಅಪ್.. ನಾನು ಓದಿದ್ದು, ಕೇಳಿದ್ದು ಕೆಲವನ್ನ ನಿಮ್ಮತ್ರ ಹಂಚ್ಕೊತೀನಿ. ಅದರಿಂದ ನಿಮ್ಮಲ್ಲೂ ಏನಾದ್ರೂ ಕಿಂಚಿತ್ತಾದರೂ ಬದಲಾವಣೆ ಬಂದ್ರೆ ಅಥವಾ ಅಲ್ಪ ಕಾಲಕ್ಕಾದ್ರೂ ನಿಮ್ಮ ಮನಸ್ಸಿಗೆ ಖುಷಿ ಸಿಕ್ಕಿದ್ರೆ ಈ ಬರಹಕ್ಕೊಂದು ಅರ್ಥ.
ಜೀವನದಲ್ಲಿ ಹಾಗೆ ಬದುಕಬೇಕು, ಹೀಗಿರಬೇಕು. ಅವರು ನನ್ನ ಆದರ್ಶ. ಇವರೇ ನನ್ನ ರೋಲ್ ಮಾಡೆಲ್ ಅಂತೆಲ್ಲಾ ಅಂದ್ಕೊಳ್ಳೋದು ಸೆಕೆಂಡರಿ. ಮೊದಲು ನಾವು ಬೆರೆಯವರಿಗೆ ಇಂಪ್ರೆಸ್ ಮಾಡಿದ್ರೆ ತಾನೆ ಲೈಫಲ್ಲಿ ಮಜಾ! ಅದಕ್ಕಾಗಿ ನಾವೇನು ಸತತ ಸಾಧನೆ ಮಾಡಿಯೇ ಉದ್ಧಾರವಾಗಬೇಕಂತೇನಿಲ್ಲ. ಕೆಲವು ಸರಳ ವಿಚಾರಗಳನ್ನ ನಾವು ಮರೆತಿರ್ತೇವೆ, ಅದನ್ನು ಮಾಡ್ತಾ ಹೋದ್ರೆ ನಾವೇ ರೋಲು, ನಾವೇ ಮಾಡಲ್ಲು! ಅಪರಿಚಿತರಿದ್ರೂ ಸರಿ ಪರಿಚಯವಾಗ್ತಿದ್ದಂಗೆ ಗಟ್ಟಿಯಾಗೊಮ್ಮೆ ಅವರ ಹ್ಯಾಂಡ್ ಶೇಕ್ ಮಾಡಿ ನೋಡಿ, ಅವರು ಬಹುಬೇಗ ಆತ್ಮೀಯವಾಗಿ ಬಿಡ್ತಾರೆ. ಮಾತಾಡೋವಾಗ ಕಣ್ಣು ನೋಡಿ ಮಾತನಾಡಿ. ಇಂತಹ ಸರಳ ಸುಂದರ ಟೆಕ್ನಿಕ್ಗಳು ನಾವ್ಯಾರೂ ಆಚರಿಸೋದೇ ಇಲ್ಲ. ಅದಕ್ಕೇ ಮಗುವಾಗಿದ್ದಾಗ ಅರಾಮಾಗಿದ್ದ ಜೀವನ ಬೆಳೆದಂತೆಲ್ಲಾ ಮಾನಸಿಕವಾಗಿ ಲೈಫ್ ಹಳ್ಳ ಹಿಡಿಯೋದು. ಸ್ನಾನ ಮಾಡುವಾಗ ಹಾಡು ಹೇಳಬೇಕು. ಆಗಾಗ ಒಬ್ಬೊಬ್ರೆ ನಗ್ತಿರಬೇಕು. ಜನ ಹುಚ್ಚ ಅಂದ್ರೂ ಪರವಾಗಿಲ್ಲ. ಆ ಬಗ್ಗೆ ಪ್ರೂವ್ ಮಾಡೋ ಪರಿಸ್ಥಿತಿ ಬಂದಾಗ ನೋಡೋಣ. ಅಪ್ಪಿ ತಪ್ಪಿ ಜಗಳವಾಡುವ ಪರಿಸ್ಥಿತೀನೇ ಬಂತು ಅಂತಿಟ್ಕೊಳಿ, ಮುಲಾಜೇ ಬೇಡ, ನೀವೇ ಹೊಡಿರಿ ಮೊದ್ಲು. ಅದೂ ಹೆಂಗೆ? ಎದುರಾಳಿ ತಿರುಗಿಸಿ ಥಳಿಸಲಾರದಂತೆ..! ಬಿಟ್ಟು ಕೊಡ್ಲೇಬಾದರ್ು ಲೈಫಲ್ಲಿ ಏನನ್ನೂ! ಪವಾಡಗಳು ಯಾವಾಗ್ಲೂ ನಡಿತಾನೇ ಇರ್ತವೆ.
ಯಾರಾದ್ರೂ ಕೈ ಚಾಚಿದ್ರೆ ಸಹಾಯಮಾಡಣ. ನಾವು 'ಹ್ಯಾಂಡ್ಸಂ' ಇದೀವಿ ಅಂತ ಹೇಳಿಸ್ಕೋ ಬೇಕಾದ್ರೆ ಹ್ಯಾಂಡ್ ಕೊಡ್ಲೇ ಬೇಕು ಸಂಬಡಿಗೆ. ಹಾಗಂತ ಕಂಡಕಂಡವರಿಗೆಲ್ಲಾ ಕೈ ಕೊಡಬೇಕು ಅಂತಲ್ಲ, ಸಹಾಯ ಮಾಡಬೇಕು ಅಂತಾ! ಸಹಾಯ ಮಾಡಿದ್ರೆ ಮಾತ್ರ ನಮ್ಮ ವ್ಯಕ್ತಿತ್ವ ಹೊಳೆಯೋದು. ಒಬ್ಬೊಬ್ರೆ ಇದ್ದಾಗ ವಿಶಲ್ ಹೊಡ್ಯೋಣ. ಒಳ್ಳೊಳ್ಳೆ ಪುಸ್ತಕ ಓದಿ ತಿಳಿಯೋಣ. ಮಕ್ಕಳ ಜೊತೆ ಆಗಾಗ ಆಟ ಆಡೋಣ. ಅವರನ್ನೇ ಗೆಲ್ಲೋಕೆ ಬಿಡಣ. ಸೋತು ಗೆಲ್ಲೋದನ್ನ ನಾವೂ ಕಲಿಯೋಣ. ಜನರಿಗೆ ಎರಡನೇ ಅವಕಾಶ ಕೊಟ್ಟು ನೋಡೋಣ. ಆದ್ರೆ ಮೂರನೇ ಅವಕಾಶ ಖಂಡಿತಾ ಬೇಡ. ಲೈಫ್ ಲಿ ಕೊಂಚ ರೊಮ್ಯಾಂಟಿಕ್ ಆಗಿರೋಣ. ನಾವು ಜಾಸ್ತಿ ಖುಷಿ ಪಡೋ ಜಾಗದಲ್ಲಿ ಮೊಬೈಲ್ ಫೋನ್ ತೊಂದರೆ ಮಾಡದ ಹಾಗೆ ಸೈಲೆಂಟ್ಗೆ ಹಾಕೋಣ. ಇಂದು ಉತ್ತಮವಾಗಿ ಸೋತವ ಮಾತ್ರಾ ಅತ್ಯುತ್ತಮವಾಗಿ ಗೆಲ್ಲೋಕೆ ಸಾಧ್ಯ. ಮತ್ಯಾಕೆ ವರಿ ಮಾಡ್ಕೋಬೇಕು ಸೋತ್ರೆ?! ಯಾರಾದ್ರೂ ತುಂಬಾ ಇಷ್ಟ ಆದ್ರಾ ಹೋಗಿ ಅಪ್ಪಿಕೊಳ್ಳಿ. ಮುಂದೆನಾಗತ್ತೆ ಅನ್ನೋ ಬಗ್ಗೆ ತಿಳಿದು ಹಗ್ ಮಾಡಿದ್ರೆ ಉತ್ತಮ.
ಸ್ನೇಹಿತರೋ ಸಂಬಂಧಿಗಳೋ ಆಸ್ಪತ್ರೆಯಲ್ಲಿದ್ರೆ ಹೋಗಿ ನೋಡಿ ಬರೋಣ. ಅವರೊಂದಿಗಿನ ಆ ಸಮಯದಲ್ಲಿ ನಾವು ಕೆಲವೇ ಕ್ಷಣವಿದ್ದರೂ ಅದು ಅವರ ಪಾಲಿಗೆ ಮರೆಯಲಾರದ ಸಮಯವೇ! ಸಂಗೀತಕ್ಕೊಂದು ಶಕ್ತಿ ಇದೆ. ಶಕ್ತಿಯೊಂದಿಗೇ ಅರಂಭವಾಗಲಿ ದಿನ. ಪೋನಲ್ಲಿ ಮಾತಾಡೋವಾಗ ನಾವು ಹೆಂಗೆಂಗೋ ಮಾತಾಡ್ತೀವಿ. ಅದರ ಬಗ್ಗೆಯೂ ಗಮನ ಕೊಟ್ರೆ ಲೈಫ್ ಸೂಪರ್. ನಮ್ಮ ಸಿಂಪಲ್ ಲೈಫಲ್ಲಿ ಯಾವಾಗ್ಲೂ ಒಂದು ಪೆನ್ನು ಪೇಪರ್ರು ಇದ್ರೆ ಚೆನ್ನ. ನಮ್ ಮೈಂಡ್ ಯಾವ್ಯಾಗ್ಲೂ ಏನಾದ್ರೂ ಯೋಚನೆ ಮಾಡ್ತಾನೇ ಇರತ್ತೆ. ಯಾರಿಗೆ ಗೊತ್ತು, ಮಿಡ್ ನೈಟ್ ಮೂರು ಘಂಟೆಗೆ ಎಚ್ಚರವಾಗಿ ಏನಾದ್ರೂ ಹೊಳೆದ್ರೆನೂ ಬರೆಯೋಕೆ ಆಗಲೇ ರೆಡಿ ಇರ್ಬೇಕಲ್ವಾ?
ಇನ್ನು ಪ್ರೀತಿ ವಿಷಯಕ್ಕೆ ಬಂದ್ರೆ ಭಗ್ನ ಪ್ರೇಮಿಗಳೇ ಹೆಚ್ಚಾಗಿ ಕಾಣ ಸಿಗ್ತಾರೆ. ಪ್ರೀತಿ ಕಳೆದುಕೊಂಡು ಮನಸ್ಸಿನಲ್ಲಿಯೇ ನಗ್ನವಾಗಿ ರೊಧಿಸ್ತಾ ಇರ್ತಾರೆ. ಅಂತವರಲ್ಲಿ ಹೆಚ್ಚಿನವ್ರು ಒನ್ ಸೈಡ್ ಲವರ್ಸ್. ಅವರು ತಮ್ಮ ಮುಚ್ಚಿಟ್ಟ ಪ್ರೀತಿ ಎನ್ನುವ ಮೊಟ್ಟೆಗೆ ಸರಿಯಾಗಿ ಕಾವು ಕೊಡದೇ ಕೊಳೆತು ಹೋದ ಮೇಲೆ ಒಬ್ರೇ ಅಳ್ತಾರೆ. ಹೇಳ್ಕೊಬೇಕ್ರೀ ಓಪನ್ನಾಗಿ. ಅದೇ ಪ್ರೀತಿ ಸಿಕ್ರೆ ಚೆನ್ನಾಗಿ ನೋಡ್ಕೋಳೊದು. ಇಲ್ಲಾಂದ್ರೆ ಹೊಸತು ಹುಡ್ಕೋದು. ಎಲ್ಲಾ ನಮ್ಮ ನಮ್ಮ ತಲೆಯಲ್ಲೇ ಇದೆ ಅಷ್ಟೆ! ಯಾವಾಗ್ಲೂ ಲೈಫ್ ಬೆಳ್ಳಗೇ ಇರತ್ತೆ ಅಂತೇನಿಲ್ಲ. ಕಷ್ಟ, ದುಃಖ, ನೋವು ಎಲ್ಲಾ ಇದ್ರೂ ಅದನ್ನು ಎದುರಿಸೋ ಸ್ಥೈರ್ಯ ಅನ್ನೋ ಸ್ನೇಹಿತನನ್ನ ನಾವು ಯಾವಾಗಲೂ ನಮ್ಮ ಜೊತೆಗೇ ಇಟ್ಕೊಂಡಿರಬೇಕು. ಸಕ್ಸಸ್ ಅಂದ್ರೆ ಯಾವಾಗ್ಲೂ ನಾವೇ ಬೆಸ್ಟು, ಎಲ್ಲಾದ್ರಲ್ಲೂ ಗೆಲ್ತೀವಿ ಅನ್ನೋದಲ್ಲ. ಸಕ್ಸಸ್ ಅಂದ್ರೆ ಕೆಟ್ಟ ಪರಿಸ್ಥಿತಿಯನ್ನೂ ನಾವು ಹೆಂಗೆ ಎದುರಿಸಿದ್ವಿ ಮತ್ತು ಹೇಗೆ ಹೋರಾಡಿದ್ವಿ ಅನ್ನೋದು!
ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ. ಬೂಮರಾಂಗ್ ತರಾ ನಿಮ್ಮತ್ರಾನೇ ವಾಪಸ್ ಬರ್ತದೆ.!
Some ಮಾತು

ಹೆಚ್ಚಾಗದಿರಲಿ 'ಎಚ್1ಎನ್1' 

"ಅಯ್ಯೋ ಎಚ್1ಎನ್1 ಬಂದಿದೆ", "ಹಂದಿ ಜ್ವರ ಬಂದಿದೆ". "ಅಲ್ಲಿ ಇಷ್ಟು ಜನ ಹೊಗೆ ಹಾಕಿಸ್ಕೊಂಡ್ರು, ಇಲ್ಲಿ ಇಷ್ಟು ಜನ ಬಿದಿರು ಮೋಟಾರ್ ಹತ್ತಿದ್ರು" ಅಂತ ಎಲ್ಲಾರು ಮಾತಾಡ್ಕೊತಾ ಇರೋದನ್ನ ನಾವೆಲ್ಲಾ ಕೇಳಿಸ್ಕೊತಾನೆ ಇದೀವಿ. ಎಚ್1ಎನ್1 ಒಂದು ಜ್ವರ ಅಂತ ಹಲವರಿಗೆ ಗೊತ್ತು. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಮಾತ್ರ ಇಲ್ಲ. ಹಂದಿಜ್ವರವೆಂದು ಆಡು ಭಾಷೆಯಲ್ಲಿ ಕರೆಯಲ್ಪಡುವ ಈ ಜ್ವರ ಹಂದಿಗಳಿಗೆ ಮಾತ್ರ ಬರುವ ಶ್ವಾಸಕೋಶದ ಕಾಯಿಲೆಯಾಗಿತ್ತು. ಆದರೆ 2009ರಲ್ಲಿ ಅಮೇರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸಿನ ಸ್ಯಾನ್ ಆಂಟೋನಿಯೋದಲ್ಲಿ ಎಚ್1ಎನ್1 ವೈರಾಣು ಸೋಂಕು ತಗುಲಿದ ಪ್ರಕರಣ ವರದಿಯಾದವು. ಅಲ್ಲಿ ಸ್ವಲ್ಲ ಹರಡಿ ಹಲವು ಬಲಿ ಪಡೆದು ನಿಯಂತ್ರಣಕ್ಕೆ ಬಂದಿದ್ದ ಈ ಕಾಯಿಲೆ ಇದೀಗ ಧುತ್ತನೆ ಮತ್ತೆ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಈ ರೋಗಕ್ಕೆ ನಮ್ಮ ದೇಶವೊಂದರಲ್ಲೇ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಾದವರು ಲಕ್ಷಾಂತರ. ಈ ವಿಷಯದಲ್ಲಂತೂ ಶತಕೋಟ್ಯಾಂತರ ಜನರಿರೋ ನಮ್ಮ ದೇಶದಲ್ಲಿ ಕೇವಲ ಲಕ್ಷ ಮಾತ್ರಾನಾ ಅಂತ ಅಲಕ್ಷ್ಯ ಮಾಡುವಂತೆಯೇ ಇಲ್ಲ. ಏಕೆಂದರೆ ಇಷ್ಟೆಲ್ಲಾ ಸಾವು-ನೋವುಗಳು ಸಂಭವಿಸಿದ್ದು ಕೇವಲ ಎರಡು ತಿಂಗಳ ಅವಧಿಯಲ್ಲಿ! ಹಂದಿಜ್ವರಕ್ಕೆ ಸಾಮಾನ್ಯ ಜ್ವರದಂತೆ ಒಂದು ಕ್ರೋಸಿನ್ನೋ, ಡೋಲೋ650 ಮಾತ್ರೆಗಳನ್ನೋ ತಗೊಂಡು ಒಂದು ರಾತ್ರಿ ಮುಚ್ಚಾಕ್ಕೊಂಡ್ ಮಲಗಿದ್ರೆ ಜ್ವರ ಬಿಟ್ಟೊಗತ್ತೆ ಅನ್ನೋ ಹಾಗೆಯೂ ಇಲ್ಲ. ಹೀಗೆ ಮಾಡಿಯೇ ಈ ಹೆಮ್ಮಾರಿಯ ಉಪಟಳಕ್ಕೆ ಸಿಲುಕಿ ಬಹಳಷ್ಟು ಜನರು ಫೋಟೋ ಪ್ರೇಮ್ ಆಗಿದಾರೆ. ಹಾಗಂತ ಜಾಸ್ತಿ ದಿಗಿಲು ಬೀಳೋ ಅಗತ್ಯವೂ ಇಲ್ಲ. ಎಚ್1ಎನ್1 ಜ್ವರವೂ ಒಂದು ವೈರಸ್ ಆಗಿದ್ದು ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗ್ತಾರೆ ಭಯ ಬೇಡ.

ಈ ರೋಗದ ಲಕ್ಷಣಗಳು ಹೇಗಿರ್ತವೆ ಅಂದ್ರೆ- ತೀವ್ರ ಸ್ವರೂಪದ ಜ್ವರ ನಮ್ಮನ್ನು ಅಮರ್ಕೊಳ್ತಾವೆ. ಅತಿಯಾದ ವಾಂತಿ-ಭೇದಿ ನಮ್ ದೇಹದ ಶಕ್ತಿನೆಲ್ಲ ಕಿತ್ಕೊಳ್ತಾವೆ. ಮೈಕೈ ಎಲ್ಲಾ ವಿಪರೀತ ನೋವಕ್ಕೆ ಆರಂಭಿಸುತ್ತವೆ. ನೆಗಡಿ ಶುರುವಾಗತ್ತೆ, ಗಂಟಲ ಕೆರೆತ ಅತಿಯಾಗತ್ತೆ. ಕೆಮ್ಮು ಜಾಸ್ತಿಯಾಗಿ ಹಳದಿ ಕಫ ಬರೋಕೆ ಸ್ಟಾಟರ್ಾಗತ್ತೆ. ಉಸಿರಾಟಕ್ಕೂ ತೊಂದರೆ ಪಡಬೇಕಾಗತ್ತೆ. ಈ ತರಹದ ಲಕ್ಷಣಗಳು ನಿಮ್ಮಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ನೆರೆಹೊರೆಯ ಜನರಲ್ಲಿ ಎಲ್ಲಾದರೂ ಕಂಡುಬಂದರೆ ತ್ವರಿತವಾಗಿ ಚಿಕಿತ್ಸೆ ಕೊಡಿಸಲೇ ಬೇಕು. ಯಾಕೆಂದ್ರೆ ಈ ಜ್ವರವನ್ನು ಸಮರ್ಪಕವಾಗಿ ನಿಯಂತ್ರಣ ಮಾಡುವಲ್ಲಿ ನಾಗರೀಕರಾದ ನಮ್ಮ ಜವಾಬ್ದಾರಿಯೇ ಹೆಚ್ಚಾಗಿದೆ.
ಇಷ್ಟೊತ್ತಿಗಾಗಲೇ ನಮ್ಮ ನಿಮ್ಮಲ್ಲೇ ಯಾರಿಗಾದ್ರೂ ಮೇಲಿನ ಲಕ್ಷಣಗಳು ಕಂಡು ಬಂತು ಅಂದ್ಕೊಳಿ, ಹೆದರಿಕೊಳ್ಳೊದೇನು ಬೇಡ. ಮಾನಸಿಕವಾಗಿ ನಾವು ಧೈರ್ಯದಿಂದ ಇದ್ದಷ್ಟೂ ನಮ್ಮ ಶತೃಗಳು ದುರ್ಬಲರಾಗಿಯೇ ಇರ್ತಾರೆ. ಅದೇ ರೀತಿ ಈ ವೈರಾಣುಗಳೂ ಹೊರತಲ್ಲ. ಚಿಕಿತ್ಸೆಗೂ ಮುನ್ನವೇ ಧೈರ್ಯದಿಂದ ಕೆಲವೊಂದು ಅವಶ್ಯ ಕ್ರಿಯೆಗಳನ್ನು ಮಾಡುತ್ತಾ, ಕೆಲವು ಅನುಸರಿಸಬೇಕಾದವುಗಳು ಏನೆಂದ್ರೆ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಕಾಗದಗಳಿಂದ ಮುಚ್ಚಿಟ್ಟುಕೊಳ್ಳುವುದರಿಂದ ಈ ವೈರಾಣುಗಳು ಇತರರಿಗೆ ಸುಲಭವಾಗಿ ಹರಡುವುದಿಲ್ಲ. ಗಾಳಿಯಿಂದಲೇ ಬಹಳಷ್ಟು ಜನರಿಗೆ ಪಸರಿಸುವ ಈ ಕೀಟಾಣುಗಳನ್ನು ಪ್ರಾಥಮಿಕ ಹಂತದಲ್ಲಿಯೇ ಹರಡದಂತೆ ತಡೆಗಟ್ಟುವುದು ಮುಖ್ಯ. ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಲೇ ಬೇಕು. ಚೆನ್ನಾಗಿ ನಿದ್ರಿಸಿ, ದೇಹವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡರೆ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ನೀರನ್ನು ಹೆಚ್ಚಾಗಿ ಕುಡಿಯುತ್ತಾ ಇದ್ದರೆ ಯಾವಾಗಲೂ ಒಳ್ಳೆಯದು. ಪೌಷ್ಟಿಕಾಂಶ ಭರಿತ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ತನ್ನಿಂತಾನೆ ಹೆಚ್ಚಾಗುತ್ತೆ. ಈಗ ಎಲ್ಲಾ ಕಡೆ ಮದುವೆ, ಮುಂಜಿ, ಉತ್ಸವ, ಜಾತ್ರೆಗಳದ್ದೇ ಸೀಜನ್ನು! ಅದರಲ್ಲೂ ನಮ್ಮ ಶಿರಸಿಯಲ್ಲಿಗ ಹೋಳಿಯ ಬೇಡರವೇಷದ ಸಂಭ್ರಮ. ಎಂತಾ ಜ್ವರವಿದ್ದೂ ಇನ್ನೇನು ಟಿಕೇಟು ತೊಗೋಬೇಕು ಅನ್ನೋ ಸ್ಥಿತಿಲಿದ್ರೂ ಬೇಡರವೇಷ ನೋಡ್ಲೆ ಬೇಕು ಅಂತ ನಮಗೆಲ್ಲಾ ಅನ್ನಿಸುವುದು ಕೂಡಾ ಸಹಜ. ಅಂತ ಸಮಯದಲ್ಲಿ ಮಾಸ್ಕ್ ಹಾಕಿಕೊಂಡು ಹೋಗುವುದರಿಂದ ಸ್ವಲ್ಪ ಕಿರಿಕಿರಿಯಾದ್ರೂ ಆರೋಗ್ಯಕ್ಕೆ ಒಳ್ಳೆಯದು.

ಈಗ ಟೈಮ್ ಹೆಂಗಿದೆ ಅಂದ್ರೆ ಹಸ್ತಲಾಘವ ಮಾಡೋದಾಗಲಿ, ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವುದಾಗಲಿ ಮಾಡದೇ ಸನಾತನ ಸಂಸ್ಕೃತಿಯಂತೆ ದೂರ ನಿಂತು ಕೈ ಮುಗಿದು 'ನಮಸ್ಕಾರ' ಮಾಡುವುದೇ ಉತ್ತಮ. ಯಾರ್ ಬಾಡಿಲೀ ಯಾವ್ ವೈರಸ್ ಇರುತ್ತೋ ಯಾರಿಗೊತ್ತು? ಹಾಗೆಯೇ ಸ್ವಯಂ ವೈದ್ಯರಾಗದೆ ಡಾಕ್ಟರ್ಗಳ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಲೇಬಾರದು. ಅನಾವಶ್ಯಕವಾಗಿ ಜನಸಾಂದ್ರತೆ ಇರೋ ಕಡೆ ಹೋಗೋದು, ರಜಾ ದಿನ ಅಂತಾ ಅತಿಯಾಗಿ ಟೂರ್ ಮಾಡೋದು ಹಿಂಗೆಲ್ಲಾ ಮಾಡ್ತಾ ಇದ್ರೆ ಎಚ್1ಎನ್1 ಆವರಿಸಿಕೊಳ್ಳೋದು ಪಕ್ಕಾ! ಅಂತಾರೆ ತಜ್ಞರು.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಕಾರ್ಯಕರ್ತರು ಹೀಗೆ ಯಾರಲ್ಲಿ ಬೇಕಾದರೂ ವಿಚಾರಿಸಿ. ಅವರು ಅವಶ್ಯ ಮಾಹಿತಿಗಳನ್ನು ಕೊಡ್ತಾರೆ. ನಮ್ಮ ಉತ್ತರಕನ್ನಡ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ನಮ್ಮ ಜಿಲ್ಲೆಯ ಜನರಿಗಾಗಿ ಈ ವೈರಾಣು ಮತ್ತು ಜ್ವರದ ಕುರಿತಾಗಿ ಮಾಹಿತಿ ಕೊಡುವಲ್ಲಿ ಬಹಳವಾಗಿಯೇ ಶ್ರಮಿಸುತ್ತಿದೆ. ನಾವೆಲ್ಲಾ ಮಾಹಿತಿ ತಿಳಿದುಕೊಂಡು ಒಗ್ಗಟ್ಟಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಮತ್ತು ನಮ್ಮ ತಿಳುವಳಿಕೆಯಿಂದ ಜವಾಬ್ದಾರಿ ಅರಿತು ನಡೆದುಕೊಂಡ್ರೆ ಎಂತಾ ವೈರಸ್ ಬಂದ್ರೂ ಮಕಾಡೆ ಮಲಗಿಕೊಳ್ತದೆ.

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ


ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು ಬರುತ್ತಾರೆ.

ಹೋಳಿ ಹಬ್ಬದ ನಾಲ್ಕು ದಿನಗಳ ಮೊದಲೆಲ್ಲಾ ಬೆಳಿಗ್ಗೆ ಹುಲಿವೇಷಧಾರಿಗಳು ನಗರದಲ್ಲೆಲ್ಲಾ ಕಾಣಿಸಿಕೊಂಡ್ರೆ ರಾತ್ರಿಯಾಗುತ್ತಿದ್ದಂತೆ ಆರಂಭವಾಗುತ್ತದೆ ಬೇಡರ ನರ್ತನದ ರೌದ್ರಾವತಾರ. ಬೇಡರ ವೇಷ ಕುಣಿಯುವ ವೇಷಧಾರಿಯ ನೋಡುವುದೇ ಒಂದು ಚಂದ. ಬೇಡರವೇಷ ತೊಡುವ ವ್ಯಕ್ತಿ ಸಾಮಾನ್ಯವಾಗಿ ಕೆಂಪು ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಮೊಣಕಾಲವರೆಗಿನ ಕೆಂಪು ಚಡ್ಡಿ ಧರಿಸಿರುತ್ತಾನೆ. ಮುಖಕ್ಕೆ ಕೆಂಪು, ಹಳದಿ ಮತ್ತು ಕಪ್ಪು ಬಣ್ಣಗಳಿಂದ ಅಲಂಕರಿಸಿರುತ್ತಾರೆ. ನೊಡಿದರೇ ಭಯ ಹುಟ್ಟುವಂತಹ ಕಿಡಿ ಕಾರುವ ಕಣ್ಣು ರೌದ್ರತೆಯನ್ನು ಹೊಮ್ಮಿಸುತ್ತದೆ. ತಲೆ ಮೇಲೆ ಪುಕ್ಕದಾಕಾರದಲ್ಲಿ ಅಥವಾ ಕೋಡಿನ ಆಕಾರದ ಒಂದು ಕಿರೀಟ ಇರುತ್ತದೆ. ಬೆನ್ನಿಗೆ ನವಿಲುಗರಿಯ ಬೃದಹಾಕಾರದ ತಟ್ಟೆ ಇರುತ್ತದೆ. ಸೊಂಟಕ್ಕೆ ಮಾವಿನ ಎಲೆಯ ಮಾಲೆ, ಕುತ್ತಿಗೆಗೆ ನೋಟಿನ ಮಾಲೆ. ಒಂದು ಕೈನಲ್ಲಿ ಲೋಹದ ಖಡ್ಗ, ಅದರ ತುದಿಗೊಂದು ನಿಂಬೆಹಣ್ಣು. ಇನ್ನೊಂದು ಕೈಯಲ್ಲಿ ಪಳಪಳನೆ ಹೊಳೆವ ಢಾಳ ಇರುತ್ತದೆ. ಚರ್ಮದ ತಮಟೆಯ ‘ಡಂಕುಣಕ ಡಣ್, ಡಂಕುಣಕ ಡಣ್’ ಎನ್ನುವ ಲಯಬದ್ಧ ಬಡಿತಕ್ಕೆ ಸೇರುವ ಪಡ್ಡೆಗಳ ಸೀಟಿಯ ಸೌಂಡು ಬೇಡರ ನರ್ತನಕ್ಕೆ ವಿಶಿಷ್ಟ ಮೆರುಗನ್ನು ನೀಡುತ್ತವೆ. ಬೇಡರ ವೇಷ ಹಾಕಿದವನ ಹಿಂದೆ ಅವನಿಗೆ ಹಗ್ಗದಲ್ಲಿ ಬಂಧಿಸಿಟ್ಟ ಇಬ್ಬರು ಚಿತ್ರವಿಚಿತ್ರ ವೇಷದಲ್ಲಿ ಕಂಗೊಳಿಸುತ್ತಿದ್ದರೆ, ಪಂಜು ಹಿಡಿದ ವ್ಯಕ್ತಿ, ಬೇಡನನ್ನು ಕೆರಳಿಸುವ ವಿಧವೆ ವೇಷಧಾರಿಯ ಕೆಲಸ ನೋಡುಗರಿಗೆ ವಿಶೇಷ ಮನರಂಜನೆ ಒದಗಿಸುತ್ತದೆ. ತಮಟೆಯ ಬಡಿತದ ಲಯಕ್ಕೆ ತಕ್ಕಂತೆ ಗಾಂಭೀರ್ಯದ ಹೆಜ್ಜೆ ಇಡುತ್ತಾ ಸಾಗುವ ಬೇಡರವೇಷಧಾರಿಯ ಗತ್ತನ್ನು ನೋಡುವುದೇ ಒಂದು ಸೊಬಗು. ಆ ನೃತ್ಯದ ಸವಿಯನ್ನು ಸವಿಯಲು ಇಲ್ಲಿನ ಜನತೆ ಬೆಳಗಿನ ಜಾವದವರೆಗೂ ಕಣ್ತುಂಬಿಕೊಳ್ಳುತ್ತಾರೆ. ಯುವಕರೆಲ್ಲಾ ಸೇರಿ ರಸ್ತೆಯಲ್ಲಿಯೇ ಹಾಕುವ ಸ್ಟೆಪ್ಪು ಯಾವ ಹಿಪ್‍ಹೋಪ್‍ಗೂ ಕಮ್ಮಿಯಿಲ್ಲ.  ಬೇಡರ ವೇಷಧಾರಿಯ ಹಿಂದೆಯೇ ಸಾಗುವ ಬಂಡಿಯಲ್ಲಿ ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿಗಳ ಅಥವಾ ಸನ್ನಿವೇಷ ಪ್ರಸ್ತುತಪಡಿಸಿರುತ್ತಾರೆ. ಇನ್ನೊಂದರಲ್ಲಿ ನೃತ್ಯ ತಂಡ ಪ್ರದರ್ಶನವಿದ್ದು ರಾತ್ರಿಯಿಡೀ ಸಂಗೀತದ ಅಬ್ಬರದಲ್ಲಿಯೇ ಜನತೆ ತೇಲಿಹೋಗುತ್ತಾರೆ.
ಬೇಡರ ವೇಷದ ಜೊತೆಗೆ ಬಂಡಿ ಪ್ರದರ್ಶನವೂ ಇದ್ದು, ನಗರದ ವಿವಿಧ ಗಲ್ಲಿಗಳ, ಬೇರೆ ಬೇರೆ ಏರಿಯಾಗಳ ಬೇಡರ ವೇಷಧಾರಿಗಳ ತಂಡವು ನಗರದ ಶಕ್ತಿ ದೇವತೆ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ರಾತ್ರಿ 10ರಿಂದ ಬೆಳಗಿನ 4ರವರೆಗೆ ಶಿರಸಿಯ ಸಿದ್ಧಪ್ರದೇಶದಲ್ಲೆಲ್ಲಾ ಸಂಚರಿಸುತ್ತಾರೆ. ಈ ರೀತಿ ಬೇಡರ ವೇಷದ ಮೂವತ್ತನಾಲ್ಕು ತಂಡಗಳು ಈ ವರ್ಷ ಸಂಚರಿಸುತ್ತವೆ. ನೊಡುವುದಕ್ಕೆ ಚಂದ ಕಾಣುವ ಈ ವೇಷ ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಂತಲೇ ಕೆಲವು ಆಚಾರ ವಿಚಾರಗಳೂ ಇವೆ. ಈ ಬೇಡರವೇಷ ಕುಣಿತ ಯಾವ ದಿನ ಯಾರು ಮಾಡುವುದೆಂದು ಮೊದಲೇ ನಿರ್ಧರಿಸಿಕೊಳ್ಳುತ್ತಾರೆ. ಯಾವ ದಿನ ಯಾವ ಭಾಗದವ ವೇಷ ಹಾಕುತ್ತಾನೆಂದು ತಿಳಿದುಕೊಂಡು ಆ ಮೊದಲೇ ಕೆಲವು ಸಂಪ್ರದಾಯಗಳನ್ನು ಆಚರಿಸುತ್ತಾರೆ. ಬಣ್ಣ ತೊಡುವ ಮೊದಲು ಬೇಢರವೇಷಧಾರಿ ದೇವರಿಗೆ ಕಾಯಿ ಇಟ್ಟು ಪೂಜೆ ಮಾಡಿಕೊಳ್ಳುತ್ತಾನೆ. ಆ ದಿನ ಅವನು ಮಾಂಸಾಹಾರ ಸೇವಿಸುವಂತಿಲ್ಲ, ಕೇವಲ ಹಾಲು ಮತ್ತು ದೇವರ ಹಣ್ಣುಗಳೇ ಆತನಿಗೆ ಅಂದಿನ ಆಹಾರ. ನಂತರ ಬೇಢನಿಗೆ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳ ನೀಡಿ ಅಲಂಕಾರ ಮಾಡಲಾಗುತ್ತದೆ. ವೇಷ ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆ ಇರುವುದರಿಂದ ಆತನಿಗೆ ವಿಶೇಷ ಗೌರವ ಕೊಡುತ್ತಾರೆ. ಅಲಂಕಾರದ ನಂತರ ಬೇಡರ ವೇಷಧಾರಿ ಕನ್ನಡಿ ನೋಡುವಂತಿಲ್ಲ. ಹೀಗೆ ಶುರುವಾಗುವ ಬೇಡರ ನೃತ್ಯ ನಗರದ ಶ್ರೀ ಮಾರಿಕಾಂಬಾ ದೇವಾಲಯದ ಎದುರು, ಶಿವಾಜಿ ಚೌಕದ ವೀರಾಂಜನೇಯ ಕಟ್ಟೆ, ದೇವಿಕೆರೆಯ ಭೂತಪ್ಪನ ಕಟ್ಟೆ, ಹೀಗೆ ಎಲ್ಲೆಲ್ಲಿ ಕಾಮಣ್ಣ ಮತ್ತು ರತಿ ದೇವಿಯರನ್ನು ಪ್ರತಿಷ್ಠಾಪಿಸಿರುತ್ತಾರೋ ಅಲ್ಲೆಲ್ಲಾ ಸುಳಿಕಾಯಿ ಒಡೆದು ನಮಿಸಿ ಕುಣಿಯುತ್ತಾರೆ. ಮೊದಲೆಲ್ಲಾ ಸಂಪ್ರದಾಯಗಲು ಮತ್ತು ಆಚರಣೆಗಳು ಬಹಳಷ್ಟಿದ್ದವೂ ಬದಲಾದ ಕಾಲಘಟ್ಟದಲ್ಲಿ ಹಲವು ಅಳಿದು ಕೆಲವು ಮಾತ್ರ ಉಳಿದಿವೆ. ಅದೇನೆ ಇದ್ದರೂ ಈ ಬೇಡರ ವೇಷವನ್ನು ನೊಡಲು ಶಿರಸಿಯ ಹಳೇ ಬಸ್ ನಿಲ್ದಾಣದ ಜಾಗದಲ್ಲಿ, ಮಾರಿಗುಡಿಯ ಎದುರು, ಶಿವಾಜಿ ಚೌಕದ ಬಳಿ, ದೇವಿಕೆರೆ ಹತ್ತಿರ ಈ ನರ್ತನ ನೊಡಲೆಂದೇ ಸಾವಿರಾರು ಜನರು ಜಾಗ ಹಿಡಿದು ಕಾಯುತ್ತಿರುತ್ತಾರೆ. ಬೇಡರ ವೇಷ ತೊಡುವ ವ್ಯಕ್ತಿಗೆ ಅಪಾರ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಬೇಕಾಗುತ್ತದೆ. ಕುಣಿಯುತ್ತಾ ಶಿರಸಿ ತುಂಬೆಲ್ಲಾ ನಡೆಯುವಷ್ಟು ತಾಕತ್ತು ಬೇಕು. ಇದಕ್ಕಾಗಿ ಸಾಕಷ್ಟು ಶ್ರಮವೂ ಬೇಕು. ಆದ್ದರಿಂದಲೇ ವೇಷ ತೊಡುವುದು ಒಂದೇ ದಿನವಾದರೂ ಅದಕ್ಕಾಗಿ 20-22 ದಿನಗಳ ನಿರಂತರ ತಾಲೀಮು ನಡೆಸಿರುತ್ತಾರೆ ವೇಷಧಾರಿಗಳು.
ಈ ಬೇಡರವೇಷಕ್ಕೂ ಹಿನ್ನೆಲೆ ಇದೆ, ದಂತಕಥೆಗಳಿವೆ. 1569ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮಾಜ್ಯ ಪರಾಭವಗೊಂಡಿತ್ತು. ಆಗ ಅರಾಜಕತೆ ಶುರುವಾಗಿ, ದರೋಢೆಕೋರರ ಹಾವಳಿ ಮಿತಿಮೀರಿತ್ತು. ಶಿರಸಿ ಆಗಿನಿಂದಲೂ ಒಂದು ವ್ಯಾಪಾರೀ ಸ್ಥಳವಾಗಿದ್ದರಿಂದ ವರ್ತಕರಿಗೆ ದರೋಢೆಕೋರರು ತಲೆನೋವಾಗಿದ್ದರು. ಆದ್ದರಿಂದ ಅವರನ್ನು ನಿಯಂತ್ರಿಸಲು ಮಲ್ಲೇಶಿ ಎಂಬ ಕಟುಮಸ್ತಾದ ಬೇಡರ ಯುವಕನನ್ನು ನೇಮಿಸಿದರು. ಆದರೆ ಮಲ್ಲೇಶಿ ಒಬ್ಬ ಹೆಣ್ಣುಬಾಕ ಸ್ತ್ರೀಲಂಪಟನಾಗಿದ್ದ. ಅಂದಿನ ಶಿರಿಷಪುರದ ಗಣ್ಯವ್ಯಕ್ತಿಯಾದ ಮಲ್ಲಶೆಟ್ಟಿ ಎಂಬುವವನ ಮಗಳಾದ ಗಿರಿಜಾ ಎಂಬುವವಳನ್ನು ತನ್ನ ಬಳಿ ಕಳಿಸಿಕೊಡುವಂತೆ ಸುದ್ಧಿ ಕಳುಹಿಸುತ್ತಾನೆ. ಸುದ್ಧಿ ತಿಳಿದ ಮಲ್ಲಶೆಟ್ಟಿ, ಊರಿನ ರಕ್ಷಣೆಗಾಗಿ ಬಂದ ವ್ಯಕ್ತಿಯೇ ಈ ರೀತಿ ತಲೆನೋವಾಗಿ ಪರಿಣಮಿಸಿದ್ದು, ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾಗ, ಶೆಟ್ಟಿಯ ಮಗಳಾದ ಗಿರಿಜಾಳೆ ಪರಿಸ್ಥಿತಿ ಅರಿತು ಊರವರನ್ನು ಉಳಿಸಲು ತಾನೇ ಆ ಬೇಡನನ್ನು ಮದುವೆಯಾಗುತ್ತಾಳೆ. ಲಗ್ನವಾದರೂ ಆತನ ಲಂಪಟತನ ಮುಂದುವರೆದಾಗ ವ್ಯಥೆಪಟ್ಟುಕೊಳ್ಳುತ್ತಾಳೆ. ಆತನ ಕ್ರೌರ್ಯ ಅವನ ಕಣ್ಣುಗಳಲ್ಲಿ ಕಾಣುತ್ತಿರುತ್ತದೆ. ಹಾಗಿದ್ದವು ಆ ಬೇಡನ ಕಣ್ಣುಗಳು. ಊರಿನ ಹೆಣ್ಣುಮಕ್ಕಳ ಪಾಲಿಗೆ ಅಪಾಯಕಾರಿಯಾಗಿದ್ದ ಆತನನ್ನು  ಮುಗಿಸಲು ನಿರ್ಧರಿಸಿ ಸಮಯ ಸಾಧಿಸಿ ಆ ಬೇಡನ ಕಣ್ಣುಗಳಿಗೇ ಇರಿಯುತ್ತಾಳೆ. ಅಲ್ಲದೆ ಹೋಳಿ ಹುಣ್ಣಿಮೆಯ ದಿನ ಆತನನ್ನು ಹಗ್ಗದಲ್ಲಿ ಬಂಧಿಸಿ ಮೆರವಣಿಗೆಯಲ್ಲಿ ಒಯ್ದು ಸಜೀವ ದಹನ ಮಾಡುತ್ತಾರೆ ನಂತರ ಗಿರಿಜಾ ಸಹಗಮನ ಮಾಡಿಕೊಳ್ಳುತ್ತಾಳೆ ಎಂಬುದು ಕಥೆ. ಊರಿನ ಒಳಿತಿಗಾಗಿ ಗಿರಿಜಾಳ ತ್ಯಾಗ ಮತ್ತು ದುರಂತ ಅಂತ್ಯ, ಹಾಗೆಯೇ ಬೇಡ ಮಲ್ಲೇಶಿಯ ದುಷ್ಟತನಗಳು ಈ ಬೇಡರವೇಷದ ಹಿನ್ನೆಲೆಯಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಗಿರಿಜಾಳಿಗೆ ರುದ್ರಾಂಬೆ ಎಂದೂ ಹೇಳಲಾಗಿದೆ.
ಇನ್ನೊಂದು ಕಥೆಯ ಪ್ರಕಾರ ಜನರನ್ನು ಹೆದರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕಾಡಿನ ಬೇಡನನ್ನು ಸೊದೆಯ ಅರಸನ ಸೈನಿಕರು ಹಿಡಿಯಲು ಹರಸಾಹಸ ಪಡುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಬೇಡನು ಚಿತ್ರವಿಚಿತ್ರ ವೇಷ ತೊಟ್ಟು ಜನರನ್ನೂ, ಸೈನಿಕರನ್ನು ಹೆದರಿಸುತ್ತಾ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದರೂ ಸೈನಿಕರು ಕಷ್ಟಪಟ್ಟು ಆತನನ್ನು ಬಂಧಿಸುತ್ತಾರೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಲ್ಲಿ ಹೂಂಕರಿಸುತ್ತಾನೆ. ಆಗ ಹಗ್ಗದಿಂದ ಬಂಧಿಸಿದ ಸೈನಿಕರು ಊರಲ್ಲೆಲ್ಲಾ ಸುತ್ತಾಡಿಸಿದ್ದರಂತೆ! ಅವನ ಆ ದಿನದ ವೇಷವನ್ನೇ ಇಂದಿಗೂ ನಡೆಸಿಕೊಂಡು ಬರುತ್ತಿರಬಹುದು ಎನ್ನುವುದು ಕೆಲವರ ಅಭಿಪ್ರಾಯ. ಹಿನ್ನೆಲೆ ಇತಿಹಾಸ ಏನೇ ಇದ್ದರೂ ಇಂದಿಗೂ ಬೇಡರವೇಷ ತೊಟ್ಟು ಆಗಿನ ಬೇಡನ ದಾಷ್ಟತನವನ್ನೂ ರೌದ್ರಾವತಾರದ ಪ್ರಾತ್ಯಕ್ಷಿತೆಯನ್ನು ಈ ಮೂಲಕ ಈಗಲೂ ನೋಡಬಹುದು.
ನವಿಲುಗರಿ ಕಟ್ಟಿಕೊಂಡು ಕುಣಿದರೆ ಅದು ಬೇಡರವೇಷ ಆಗೊಲ್ಲ. ಬೇಡರವೇಷ ಶಿರಸಿಯಲ್ಲಿ ಮಾತ್ರ ಶತಮಾನಗಳಿಂದ ನಡೆದುಕೊಂಡು ಬಂದಿರುವ ವಿಸ್ಮಯ ಕಲೆ. ಸೋದೆಯ ಅರಸರ ಕಾಲದಿಮದಲೂ ಚಾಲ್ತಿಯಲ್ಲಿತ್ತು ಎಮದು ಹೇಳಲಾಗುತ್ತಿದೆ. ಇಂತಹ ಬೇಡರವೇಷವನ್ನು ನೊಡಲು ಎರಡು ವರ್ಷ ಕಾಯಬೇಕು. ಬೇಡರವೇಷ ನಮ್ಮ ಊರಿನ ಹೆಮ್ಮೆಯೂ ಹೌದು. ಈ ಮಣ್ಣಿನ ವಿಶೇಷತೆಯೂ ಹೌದು. ಈ ವಿಶಿಷ್ಟ ರಮಣೀಯ ಕಲೆಯನ್ನು ಎಲ್ಲೆಡೆ ತಿಳಿಸಿಕೊಡಬೇಕಾದದ್ದು ಶಿರಸಿಗರಾದ ನಮ್ಮ ಕರ್ತವ್ಯವೂ ಹೌದು. 
ಚಚ್ವಿ ಲೈನು
ನನ್ನವಳಿಗಾಗಿ ಕೊಂಡುಕೊಂಡೆ
ಆಕಾಶದಲ್ಲೊಂದು ಸೈಟು,
ಮೇಸ್ತ್ರಿ, ಗಾವಡಿ, ಕೆಲಸಗಾರರಿಲ್ಲದೆ
ನೆನೆಗುದಿಗೆ ಬಿದ್ದಿದೆ ಪ್ರಾಜೆಕ್ಟು..!

Self ಇ
ಸಾವು ನಿಶ್ವಿತ ಅತಿಥಿ
ಅವನಿಲ್ಲದೇ ವಿಧಿಯಿಲ್ಲ;
ಹೀಗೆಂದು ಸುಮ್ಮನೇ
ಕುಂತರೂ ನಡೆಯಲ್ಲ,
ಹೋರಾಟವೇ ಜೀವನ
ಅದುವೇ ಪೈಪೋಟಿಯಾ ವನ..!


ಚಚ್ಚಿ 3ಪದಿ
ವಾಹನಗಳು ನಮಗಾಗಿ, ವಾಹನಗಳಿಗಾಗಿ ನಾವಲ್ಲ;
ಜೀವನಕ್ಕಾಗಿ ಊಟ, ಊಟವೇ ಜೀವನವಲ್ಲ;
ತಿಳಿದಿಹುದು ಅಂದರೆ ತಿಳಿಸಿಕೊಡೆಲೋ ಮೂಢ ಚಚ್ಚೀನ |



Some ಮಾತು
ಇದೆಂತಾ ವಿಚಿತ್ರ?
ದೇಶದಲ್ಲಿ ಜನಸಂಖ್ಯಾ ಹೆಚ್ಚಳ ಅತಿಯಾಗಿದೆ. ಅದರ ನಿಯಂತ್ರಣಕ್ಕೆ ಹೊಸಹೊಸ ಯೋಜನೆಗಳ ಜಾರಿಗೂ ಯೋಚಿಸಲಾಗ್ತಿದೆ. ಆದರೆ ಜನಸಂಖ್ಯೆ ಇಷ್ಟೆಲ್ಲಾ ಹೆಚ್ಚಾದ್ರೂ ಎಲ್ಲೆಡೆ ಕೆಲಸಗಾರರ ಕೊರತೆ ಮಾತ್ರ ಎದ್ದು ಕಾಣ್ತಿದೆಯಲ್ಲ ಯಾಕೆ? ಪ್ರತಿಯೊಬ್ಬರಿಗೂ ವಿದ್ಯೆ ಅವಶ್ಯಕ ಅಂತಾರೆ. ಆದಕ್ಕಾಗಿ ಸಕರ್ಾರದಿಂದ ಬಹಳಷ್ಟು ಸೌಕರ್ಯಗಳೂ ಸಿಗುತ್ತಿವೆ. ಆದರೂ ಈ ಶಿಕ್ಷಣದಿಂದ ಪ್ರಜ್ಞಾವಂತರ ಸಂಖ್ಯೆ ಹೆಚ್ಚಾದಂತೆ ತೋರುತ್ತಿಲ್ಲ ಎಂಬುದೇ ಬಹಳಷ್ಟು ಜನರ ಅಭಿಪ್ರಾಯ, ಹೀಗೇಕೆ? ಬಡತನ ನಿವಾರಣೆಗಾಗಿ ಇಂದು ರೂಪಾಯಿಗೆ ಅಕ್ಕಿ ಕೊಡ್ತಾ ಇದ್ರೂ, ಅದರಲ್ಲಿ ಬಹಳಷ್ಟು ಕಾಳಸಂತೆಯಲ್ಲಿ ಬಿಕರಿಯಾಗ್ತಿವೆ. ಅದ್ನ ತಡಿಯೋಕಾಗ್ತಿಲ್ಲ ಏಕೆ? ಎಲ್ಲರೂ ಗ್ರಾಜುಯೇಟುಗಳಾಗಿ ಆಫೀಸ್ ಕೆಲಸವೇ ಬೇಕು, ಹೈಫೈ ಜೀವನವೇ ಬೇಕು. ಕುಲಕಸುಬು ಅಂತ ಏನ್ ಹೇಳ್ತೆವೊ ಆ ಮೂಲವೃತ್ತಿಯನ್ನು ಬೇಡವೇ ಬೇಡ ಅನ್ನುತ್ತಿದ್ದಾರಲ್ಲ ಯಾಕೆ? ಹೀಗೆ ಯೊಚಿಸುತ್ತಾ ಕುಂತರೆ ಇಂತಹ ಅನೇಕ ಪ್ರಶ್ನೆಗಳು ತಲೆ ಕೊರೆಯಲು ಆರಂಭಿಸ್ತಾವೆ. ಆದರೆ ಇವೆಲ್ಲಾ ಹಲವಾರು ವರ್ಷಗಳಿಂದ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ.
ಈಗ ನಮ್ಮ ಶಿರಸಿಯಂತ ನಗರದಲ್ಲಿಯೇ ಮರಹತ್ತಿ ಕಾಯಿ ಕೊಯ್ಯುವವ ಸರಿಯಾಗಿ ಸಿಕ್ತಿಲ್ಲ. ಮನೆಕೆಲಸ ಮಾಡುವ ಮಹಿಳೆ ಸಿಕ್ತಿಲ್ಲ. ಗುಡಿಗಾರಿಕೆ ಮಾಡುವವರು, ಕುಂಬಾರಿಕೆ ಮಾಡುವವರು, ಚಮ್ಮಾರಿಕೆಯವರು, ಕಳೆ ಕಿತ್ತು ಕ್ಲೀನ್ ಮಾಡುವವರು, ಹಮಾಲರು, ಗಾವಡಿಯವರು, ಕೃಷಿಯಲ್ಲಿ ತೊಡಗಿಸಿಕೊಂಡವರು, ನೇಕಾರರು, ಹೋಟೇಲ್ ಉದ್ಯಮದಲ್ಲಾದ್ರೆ ಅಡಿಗೆಯವರು, ಕ್ಲೀನರು, ಸಪ್ಲಾಯರು, ಫ್ಯಾಕ್ಟರಿಗಳಲ್ಲಿ ಹೆಲ್ಪಸರ್ು, ಮಾಕರ್ೆಟಿಂಗ್ ತಿರುಗೋಕೆ ಜನರು ಹೀಗೆ ನೂರಾರು ಕೆಲಸಗಳಿಗೆ ಕೆಲಸಗಾರರ ಕೊರತೆ ಬಹಳವೇ ಇದೆ. ಅಷ್ಟೇ ಯಾಕೆ ನಮ್ಮ ನಗರ ಸಭೆಯಲ್ಲಿಯೇ ಹಣ, ಕೆಲಸ ಎಲ್ಲಾ ಇದ್ದೂ ಕೆಲಸಕ್ಕೆ ಕಾಮರ್ಿಕರಿಲ್ಲ, ಕಸ ಎತ್ತಿಹಾಕುವವರಿಲ್ಲ ಎಂದು ನಗರಸಭಾ ಅಧ್ಯಕ್ಷರೇ ಹೇಳುತ್ತಿದ್ದಾರೆ. ಹಾಗಾದರೆ ಕೆಲಸಗಾರರೆಲ್ಲಾ ಎಲ್ಲಿ ಹೋದರು? ಜನರಿದ್ದಾರೆ, ಕೆಲಸವಿದೆ, ಕೆಲಸಗಾರರ ಕೊರತೆಯೂ ಬಹಳಿದೆ. ಇದೆಂತಾ ಸೂಜಿಗ??
ಎಲ್ಲರೂ ಅರಸನಾಗಿ ಆಳೋಕೆ ಬಯಸ್ತಾರೆ, ಆದ್ರೆ ಆಳಾಗಿ ದುಡಿಯೊರು ಯಾರು? ಎಲ್ಲರೂ ಕೆಲಸ ಮಾಡಿಸುವವರೇ ಆದರೆ, ಕೆಲಸ ಮಾಡುವವರು? ಎಲ್ಲರೂ ಡಿಗ್ರೀ ಹೋಲ್ಡರ್ಗಳೇ ಆಗಿ ಈ ಕೆಲಸ ನಮ್ಮದಲ್ಲ, ನಮ್ಮ ಓದಿಗೆ ಈ ಕೆಲಸ ಅವಮಾನಕಾರಿ ಎಂದೆಲ್ಲಾ ಬಿಂಕ ತೋರಿಸ್ತಾ ಇದ್ರೆ ಜೀವನ ನಡೆಯೋದಾದ್ರೂ ಹೇಗೆ? ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲರೂ ತಮ್ಮ ಕೆಲಸವನ್ನು ಸ್ವತ ತಾವೇ ಮಾಡುತ್ತಾರೆ. ಅವರೇ ಮನೆ ಸ್ವಚ್ಚಗೊಳಿಸುತ್ತಾರೆ, ಬಣ್ಣ ಬಳಿಯುತ್ತಾರೆ, ಕಾರ್ ತೊಳೆಯುತ್ತಾರೆ, ತಮ್ಮ ಉದ್ಯಾನವನವನ್ನೂ ಸಿಂಗರಿಸಿಕೊಳ್ಳಿತ್ತಾರೆ. ಅವರೇ ಮಾಲಿ, ಅವರೇ ಕೂಲಿ, ಅವರೇ ಹಮಾಲಿ ಹಾಗ ಅವರೇ ಯಜಮಾನರೂ ಸಹಾ. ಆ ಬಗ್ಗೆ ಅವರಿಗೆ ಮುಜುಗರವಿಲ್ಲ, ಬೇಸರವಿಲ್ಲ. ತಮ್ಮ ಕೈಲಾದ ಕೆಲಸ ತಾವೇ ಮಾಡಿ ಕಷ್ಟ ಎನಿಸಿದರೆ ಅದಕ್ಕೊಮದು ಯಂತ್ರ ತಯಾರಿಸುವ ಬಗ್ಗೆ ಯೊಚಿಸುತ್ತಾರೆ. ಹೊಸ ತಂತ್ರಜ್ಞಾನ, ಆಲೋಚನೆಗಳಿಗೆ ನಾಂದಿ ಹಾಡುತ್ತಾರೆ. ಆದರೆ ನಮಗಿಲ್ಲಿ ಹಾಗಾಗಲ್ಲ. ದುಡ್ಡು ಕೊಟ್ಟು ಕೆಲಸದವರ ಹತ್ತಿರವೇ ಮಾಡಿಸಬೇಕೆಂಬ ಖಯಾಲಿ ನಮಗೆ. ಆರಾಮು ಜೀವನ ಕೆಲಸದಲ್ಲಿದೆ ಎಂದು ಹುಡುಕುವ ನಾವು ಆರಾಮತನ ನಮ್ಮ ಮನದಲ್ಲಿದೆ ಎಂದು ತಿಳಿಯುವುದೇ ಇಲ್ಲ.
ಇನ್ನೊಂದು ಮುಖ್ಯವಿಚಾರವೆಂದರೆ ನಮ್ಮಲ್ಲಿ ಉಪದೇಶಗಳು ಮಾತ್ರ ದಂಡಿದಂಡಿಯಾಗಿ ಸಿಗ್ತವೆ. ಯಾರ್ ಕೇಳ್ತಾರೋ ಬಿಡ್ತಾರೋ, ಯಾರಿಗೆ ಬೇಕೋ ಬೇಡ್ವೋ ಕೊಡೋರಂತೂ ಧಾರಾಳವಾಗಿ ಕೊಡ್ತಾನೆ ಇರ್ತಾನೆ. ಯಾರ್ದು ಏನ್ ಹೋಗೊದಿದೆ? ನಮ್ಮಲ್ಲಿ ಸಮಯಕ್ಕಂತೂ ಕೊರತೆಯಿಲ್ಲ ಎಂಬ ಮನೋಭಾವ. ಯಾವುದೇ ಒಂದು ಕೆಲಸವನ್ನೂ ಇಷ್ಟ ಪಟ್ಟು ಮಾಡುವ ವರ್ಗವೇ ಕಡಿಮೆಯಾಗುತ್ತಿದೆ. ಓದು, ಅಂಕಗಳಿಸು, ಕ್ಯಾಂಪಸ್ಸಲ್ಲಿ ಸೆಲೆಕ್ಟ್ ಆಗು, ಇಲ್ಲದಿದ್ದರೆ ಇನ್ನೊಂದು ಕೋರ್ಸ್ ಮಾಡು, ಎಂ.ಎನ್.ಸಿ. ಯಲ್ಲಿ ನೌಕರಿ ಹಿಡಿ. ಸಿಗದಿದ್ದರೆ ರೆಫರೆನ್ಸೋ, ಲಂಚವೋ ಏನೋ ಒಂದು ಕೊಟ್ಟು ಕೆಲಸ ಹಿಡಿ. ಆಮೇಲೆ ತಿಂಗಳು ತಿಂಗಳು ಸಂಬಳ ಎಣಿಸ್ತಾ, ಮನೆಲಿ ಕುಂತು ಆರಾಮವಾಗಿದ್ದು, ಕೆಲಸ ಮಾಡೋಕೆ ಬೇಸರವಾಗಿ, ಕೆಲಸಗಾರ ಸಿಗೊಲ್ಲವೆಂದು ಶಪಿಸುತ್ತಾ ಜೀವನ ನೂಕುತ್ತಿರುವುದು ಬಹಳಷ್ಟು ಜನರ ಪರಿಸ್ಥಿತಿಯಾಗಿದೆ. ಪ್ಯಾಶನ್ಗಾಗಿ ಬದುಕುವವರಿಗಿಂತ ಫ್ಯಾಶನ್ ತೋರಿಸೋಕೆ ಇರುವವರೇ ಹೆಚ್ಚಿದ್ದಾರೆ. ಏನಾದ್ರೂ ಒಂದು ಗುರಿ ಇಟ್ಟುಕೊಂಡು ಜೀವಿಸುವವರಿಗಿಂತ ಬಂದದ್ದನ್ನು ಅನುಭವಿಸುತ್ತಾ ಕಾಲ ನೂಕೋಣ ಎನ್ನುವವರೇ ಅಧಿಕವಿದ್ದಾರೆ. ನನಗಂತೂ ಆ ರೀತಿ ಬದುಕೋಕೆ ಆಗಲ್ಲ. ಡಿಪ್ಲೋಮಾ ಇಲೆಕ್ಟ್ರಿಕಲ್ ಓದಿ, ಬಿ,ಟೆಕ್ ಮೆಕ್ಯಾನಿಕಲ್ ಮಾಡಿ, ಎಲ್ ಅಂಟ್ ಟಿ, ಕಿರ್ಲೊಸ್ಕರ್ ಗಳಂತಾ ಕಂಪನಿಯಲ್ಲಿ ಹಾರ್ಡ್ ವೇರ್ ಸೆಕ್ಷನ್ನಲ್ಲಿ ದುಡಿದು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕೆಲಸದ ಮಜಾವನ್ನೂ ಅನುಭವಿಸಿ, ಈ ಪತ್ರಿಕೋದ್ಯಮ ಎನ್ನುವ ಕ್ಷೇತ್ರಕ್ಕೆೆ ಬಂದು ಶಿರಸಿಯಲ್ಲಿ ಸ್ವಂತ ಪತ್ರಿಕೆ ಆರಂಭಿಸುವುದೆಂದರೆ ತಮಾಷೆಯಾ? ಇದೊಂತರಾ ನನ್ನ ಪ್ಯಾಷನ್. ನನ್ನ ಮುಂದಿನ ಗುರಿ ಸಾಧನೆಗೆ ಒಂದು ಮೆಟ್ಟಿಲಷ್ಟೆ..! ಯಾಕೋ ಮಾರ್ಚ್ ಬರ್ತಿದ್ದಂಗೆ ಇವೆಲ್ಲಾ ನೆನಪಾಯ್ತು. ಯಾಕಂದ್ರೆ ಈ ಯೋಚನೆ ಶುರುವಾದದ್ದೇ ಕಳೆದ ವರ್ಷದ ಮಾರ್ಚಲ್ಲಿ. ಅದಕ್ಕೆ ಸಹಾಯ ಮಾಡಿದವರು ಅನೇಕರು. ಯಾಕೋ ಸುಮ್ನೆ ನಿಮ್ಮ ಬಳಿ ಹೇಳಿಕೊಳ್ಳೋಣವೆನ್ನಿಸ್ತು.. ಕೊನೆಯದಾಗಿ ಪ್ರಶ್ನೆಗಳಾಗೇ ಉಳಿದವುಗಳಿಗೆ ಸಿಕ್ಕ ಪ್ರಶ್ನೆ ಇದೆಂತಾ ವಿಚಿತ್ರ?
Some ಮಾತು

ಮಕ್ಕಳ ಪರೀಕ್ಷಾ ಭಯಕ್ಕೆ ಕಾರಣರಾರು?

ಈ ಮಾರ್ಚ್ ತಿಂಗಳು ಬಂತೂ ಅಂದ್ರೆ ಬಹುತೇಕ ವಿದ್ಯಾರ್ಥಿಗಳಿಗೆ ಒಂಥರಾ ತಳಮಳ, ಇತ್ತ ಕಷ್ಟ ಹೇಳಿಕೊಳ್ಳಲಾರದ, ಅತ್ತ ಸುಖ ಅನುಭವಿಸಲಾರದ ವಿಚಿತ್ರ ಪರಿಸ್ಥಿತಿಯಲ್ಲಿ ಒದ್ದಾಡ್ತಾ ಇತರ್ಾರೆ. ವರ್ಷದ ಪರೀಕ್ಷೆಗಳ ಕೊನೆ ಘಟ್ಟದ ಸಮಯವದು. ಇನ್ನೇನು ಎಕ್ಸಾಮ್ ಎಲ್ಲಾ ಮುಗಿಸಿ ಮುಂದಿನ ರಜಾ ತಯಾರಿ ಮಾಡೋ ಯೋಚನೆ, ಮುಂದಿನ ತರಗತಿಗಳ ಬಗ್ಗೆ ಅವರದೇ ಆದ ಕಲ್ಪನೆಗಳು ಒಂದೆಡೆಯಾದ್ರೆ ಇದೇ ಮಾಚರ್್ ಅಲ್ಲಿ ಬರುವ, ಉತ್ಸವಗಳು, ಜಾತ್ರೆಗಳು, ಸಾಲು ಸಾಲು ಸಮಾರಂಭಗಳು ಜೊತೆಗೆ ವಿಶ್ವಕಪ್ ಕ್ರಿಕೇಟ್ ಮ್ಯಾಚುಗಳೂ ಒಂದಾ ಎರಡಾ..! ಇಷ್ಟು ಸಾಕಲ್ವಾ ಹಲವಾರು ಮಕ್ಕಳ ಚಿತ್ತ ಕಲಕಿ ತೋಳಲಾಟದಲ್ಲಿಯೇ ತೇಲಾಡಿಸೋಕೆ!?
ಎಕ್ಸಾಮ್ ಫೋಬಿಯಾ ಅಥವಾ ಪರೀಕ್ಷಾ ಜ್ವರಕ್ಕೆ ಬಹಳಷ್ಟು ಮಕ್ಕಳು ಬಲಿಯಾಗ್ತಾ ಇದ್ದಾರೆ. ಪರೀಕ್ಷೆ ಎಂದರೆ ಅದೊಂದು ದೊಡ್ಡ ಮಾರಣಾಂತಿಕ ಕ್ರಿಯೆ. ಫೇಲಾದ್ರೆ ಆಗೋ ಅವಮಾನ ಎದುರಿಸಲಾರದಷ್ಟು ಭಯಾನಕ ಅಂತೆಲ್ಲಾ ಎಣಿಸಿ ಸಾವಿಗೆ ಶರಣಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇದಕ್ಕೆ ಮಕ್ಕಳ ಅಮಾಯಕತೆ ಎಷ್ಟು ಕಾರಣವೋ ಅದಕ್ಕಿಂತಲೂ ಅತಿಯಾದ ನಿರೀಕ್ಷೆ ಇಟ್ಟ ಪಾಲಕರದ್ದೂ ಆಗಿರ್ತದೆೆ. ಪರೀಕ್ಷೆ ಸಮಯದ ಸ್ವಲ್ಪ ಮಟ್ಟಿಗಿನ ಆತಂಕ ಒಳ್ಳೆಯದೇ ಎನ್ನುತ್ತಾರೆ ಮನೋ ವೈದ್ಯರು! ಅದು ಮಕ್ಕಳ ನಿರ್ವಹಣೆಯನ್ನು ಉತ್ತಮಗೊಳಿಸುತ್ತಂತೆ. ಸಮಯವನ್ನು ಹಾಳು ಮಾಡದೆ, ವಿಧೇಯರಾಗಿ ಓದಿಕೊಳ್ಳುವುದರಿಂದ ಪರೀಕ್ಷೆಗಳಲ್ಲಿ ವಿದ್ಯಾಥರ್ಿಗಳ ನಿರ್ವಹಣೆ ಮಟ್ಟ ಹೆಚ್ಚತ್ತೆ. ಆದರೆ ಪರೀಕ್ಷೆಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಭಯವಿದ್ರೆ ಮಾತ್ರ ಪರೀಕ್ಷೆಯ ಮೇಲೂ ಹಾಗೂ ಮಕ್ಕಳ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರೋದ್ರಲ್ಲಿ ಸಂಶಯವೇ ಇಲ್ಲ. ಕೆಲವು ಮಕ್ಕಳಂತೂ ಸಧ್ಯದಲ್ಲೇ ಎದುರಿಸಲಿರುವ ಪರೀಕ್ಷೆಯ ಬಗ್ಗೆ ಕಿರಿಕಿರಿ ಮತ್ತು ಒಂದು ರೀತಿಯ ನಿಗೂಢ ಭಯ ಹೊಂದಿರುತ್ತಾರೆ. ಪರೀಕ್ಷೆಯ ಬಗೆಗಿನ ಈ ಹೆಚ್ಚುವರಿ ಆತಂಕವೇ ಎಕ್ಸಾಮ್ ಫೋಬಿಯಾ ಅಥವಾ ಪರೀಕ್ಷಾ ಭಯ.
ಈ ಭಯದ ಲಕ್ಷಣವೇ ಒಂಥರಾ ವಿಲಕ್ಷಣ, ವಿಚಿತ್ರ. ಅದು ಸಾಧಾರಣದಿಂದ ತೀವ್ರತರದಲ್ಲಿರುತ್ತವೆ. ಕೆಲವು ಮಕ್ಕಳಲ್ಲಿ ಪರೀಕ್ಷಾ ಭಯ ಸ್ವಲ್ಪ ಮಟ್ಟಿಗಿದ್ದಿದ್ದರೂ ಪರೀಕ್ಷೆಯಲ್ಲಿ ಚೆನ್ನಾಗಿಯೇ ಮಾಡಿರುತ್ತಾರೆ. ಇನ್ನು ಕೆಲವರಲ್ಲಿ ಆ ಸಾಮಥ್ರ್ಯ ಕಡಿಮೆ ಇದ್ದಲ್ಲಿ ಬೆವರುವುದು, ಕಂಪಿಸುವುದು, ಎದೆ ಜೊರಾಗಿ ಹೊಡೆದುಕೊಳ್ಳುವುದು, ಬಾಯಿ ಒಣಗುವುದು, ಪರೀಕ್ಷಾ ಕೊಠಡಿಯಲ್ಲಿಯೇ ತಲೆಸುತ್ತಿ ಬೀಳುವುದು ಇತ್ಯಾದಿಗಳಾಗುವ ಸಂಭವವೂ ಇದೆ. ಇನ್ನು ಕೆಲವು ಪ್ರಕರಣಗಳಲ್ಲಿ ಇಂತಹ ದೈಹಿಕ ತೊಂದರೆಗಳು ಕಾಣಿಸಿಕೊಳ್ಳದಿದ್ದರೂ ಉತ್ತರಗಳು ಮರೆತು ಹೋಗುವುದು, ಗೊಂದಲದಲ್ಲಿ ಬೀಳುವುದು ಮುಂತಾದವುಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗುವ ಪರಿಸ್ಥಿತಿಯನ್ನು ಮಕ್ಕಳು ಹೇಗೆ ಎದುರಿಸಬೇಕು ಅಂತಾ ತಿಳಿಸಿಕೊಡುವ ಜವಾಬ್ದಾರಿ ಪಾಲಕ ಮತ್ತು ಶಿಕ್ಷಕ ವರ್ಗದವರ ಮೇಲಿದೆ. ಯಾಕೆಂದರೆ ಖಿನ್ನತೆಯಿಂದ ನರಳುತ್ತಿರುವವರನ್ನು ವೈದ್ಯರಿಗಿಂತಲೂ ಹೆಚ್ಚಾಗಿ ಸರಿಪಡಿಸಬಲ್ಲವರು ಪಾಲಕರು ಮತ್ತು ಶಿಕ್ಷಕರು.
ಹಾಗಿದ್ರೆ ಪಾಲಕರು ಹಾಗೂ ಶಿಕ್ಷಕರು ಏನು ಮಾಡಬಹುದು? ಮಕ್ಕಳ ಜೊತೆ ಸ್ನೇಹಿತರಂತೆ ಸಲಹೆ ನೀಡಬಹುದು. ತಮ್ಮ ಅನುಭವಗಳನ್ನು ಹೇಳಿ, ಪರಿಸ್ಥಿತಿ ಎದುರಿಸುವುದು ಹೇಗೆ ಅನ್ನೋದು ತಿಳಿಸಬಹುದು. ಪರೀಕ್ಷೆಯ ಬಗ್ಗೆ ಮಕ್ಕಳಲ್ಲಿರುವ ನಕಾರಾತ್ಮಕತೆಯನ್ನು ಗುರುತಿಸಿ ಅವರ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಿ. ಅವರಲ್ಲಿನ ಧನಾತ್ಮಕತೆಯನ್ನು ಗುರುತಿಸಿ ಅದಕ್ಕೆ ನಿಕ್ಷಲ್ಮಶ ಹೊಗಳಿಕೆ ಅಥವಾ ಸಣ್ಣಪುಟ್ಟ ಬಹುಮಾನ ಕೊಡುವುದರಿಂದ ಉತ್ತೇಜಿಸಬಹುದಲ್ವೇ? ಶಿಸ್ತಿನ ಜೀವನ ನಾವು ಅಳವಡಿಸಿಕೊಂಡ್ರೆ ಅದನ್ನು ಮಕ್ಕಳೂ ಕಲಿತವೆ. ನಾವು ಮೊದಲು ನಮ್ಮ ಬಗ್ಗೆಯೇ ಗಮನ ಕೊಡಬೇಕಾದ ಜರೂರತ್ತಿದೆ. ಮಕ್ಕಳು ಹೊಸತನ್ನೇನಾದರೂ ಮಾಡಲಿ ಅದಕ್ಕೆ ಉತ್ತೇಜನಕಾರಿ ಸೂಕ್ತ ತಿದ್ದುಪಡಿ ಪಾಲಕರು ಮಾಡಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇತರ ಮಕ್ಕಳೊಂದಿಗೆ ಹೋಲಿಕೆಯನ್ನಂತೂ ಮಾಡಲೇಬಾರದು. ನಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದು ಎಷ್ಟು ಸರಿಯಾ? ಶಿಕ್ಷಕರೂ ಕೂಡಾ ಮಕ್ಕಳ ಪರಿಣಾಮಕಾರಿ ಅಭ್ಯಾಸ ಮತ್ತು ಸಂಯೋಜನೆಯ ವಿಧಾನವನ್ನು ಪರೀಕ್ಷೆಗೆ ಸಂಬಂಧಿಸಿದಂತೆ ಏನನ್ನು ಓದಬೇಕು ಮತ್ತು ಹೇಗೆ ಓದಬೇಕು ಅನ್ನೋದನ್ನ ಪ್ರೀತಿಯಿಂದ ಮನಮುಟ್ಟುವಂತೆ ಕಲಿಸಿಕೊಡಬೇಕಿದೆ. ಅಭ್ಯಾಸದ ತಂತ್ರಗಳನ್ನು ಹೇಳಿಕೊಡುವುದರ ಜೊತೆಗೆ ಪ್ರಶ್ನೆ ಮಾಡುವುದನ್ನು ಪ್ರೇರೇಪಿಸಿರಿ. ಟಿಪ್ಪಣಿ ಕೌಶಲ್ಯ, ಸಮಯ ನಿರ್ವಹಣೆಯ ಪಾಠಗಳ ಬಗ್ಗೆ ಶಿಕ್ಷಕರಲ್ಲದೆ ಮತ್ಯಾರು ಪರಿಣಾಮಕಾರಿಯಾಗಿ ವಿವರಿಸಬಲ್ಲರು? ಮಕ್ಕಳು ಖಿನ್ನತೆ ಅಥವಾ ಆತಂಕದಲ್ಲಿದ್ದಂತೆ ಕಂಡು ಬಂದರೆ, ನಿದ್ದೆ, ಹಸಿವು ಕಡಿಮೆ ಮಾಡುತ್ತಿದ್ದರೆ, ಭಾವನಾತ್ಮಕವಾಗಿ ಬಳಲಿದಂತೆ ಕಂಡುಬಂದರೆ ಕೂಡಲೇ ಮಾನಸಿಕ ತಜ್ಞರು ಅಥವಾ ಸಮಾಲೋಚಕರನ್ನು ಭೇಟಿಮಾಡಿಸಿ.
ಪಾಲಕರಾದವರು ಮಕ್ಕಳ ಯಶಸ್ಸಿಗೆ ಜಾಸ್ತಿ ಬೀಗದೆ, ಹಿನ್ನೆಡೆಗೆ ಹೊಡೆದುಬಡಿದು ಮಾಡದೇ ಸಮಾನತೆ ಕಾಯ್ದುಕೊಳ್ಳುವುದು ಕಷ್ಟವಾದರೂ ಮಾಡಲೇಬೇಕು. ಜೀವನ ನಾವಂದುಕೊಂಡಂಗೆ ನಡೆಯೋದು ತುಂಬಾನೇ ವಿರಳ. ನಮ್ಮಿಚ್ಛೆಯಂತೆ ನಮ್ಮ ಮಗು ಉನ್ನತ ಅಂಕಗಳಿಸಿ ಅತ್ಯುತ್ತಮ ಕೆಲಸದಲ್ಲಿದ್ದರೂ, ಜೀವನದಲ್ಲಿ ಸಕಲ ಸವಲತ್ತುಗಳು ಇದ್ದರೂ ಜಿಗುಪ್ಸೆಗೆ ಒಳಗಾಗಬಾರದೆಂದೇನಿಲ್ಲ. ಅಂಕಗಳಿಕೆಯು ಜೀವನದ ಮಾನದಂಡ ಖಂಡಿತವಾಗಿಯೂ ಅಲ್ಲ. ಇಂದು ಪರೀಕ್ಷೆಯಲ್ಲಿ ಸೋತವರು ಜೀವನದಲ್ಲಿ ಗೆಲ್ಲಲಾರರೆಂದು ಖಂಡಿತಾ ಹೇಳಲಾಗದು. ಪರೀಕ್ಷೆಯಲ್ಲಿ ರ್ಯಾಂಕ್ ತಗಂಡೂ ಕೆಲಸಕ್ಕಾಗಿ ಅಲೆಯುತ್ತಿದ್ದವರು ನಮ್ಮಲ್ಲಿ ಕಡಿಮೆಯೇನಿಲ್ಲ. ಪರೀಕ್ಷೆ ಒಂಥರಾ ಆಟದ ತರ. ಆದರೆ ಇಲ್ಲಿನ ಅಂಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಬೇಡ. ಕಷ್ಟಪಟ್ಟರೆ ಯಾವುದಕ್ಕೆ ಯಾಕೆ ಹೆದರಬೇಕು? ಜೀವನಕ್ಕೊಂದು ಕನಸು ಕಟ್ಟಿ ಅದರ ಸಾಧನೆಗಾಗಿ ಕಷ್ಟಪಡಿ. ಸಣ್ಣಪುಟ್ಟ ಗುರಿಗಳನ್ನು ಇಟ್ಟುಕೊಂಡು ಈಡೇರಿಸಿಕೊಳ್ಳುತ್ತಾ ಗಮ್ಯಸಾಧನೆಯತ್ತ ಮುಂದುವರಿಯೋಣ. ಚಿಕ್ಕಪುಟ್ಟ ಕ್ಷಣಗಳಲ್ಲೂ ಸಂತೋಷವಿದೆ. ನೋವನ್ನೂ ಎಂಜಾಯ್ ಮಾಡೋದರ ಬಗ್ಗೆ ಯೋಚಿಸೋಣ. ಭಯಕ್ಕೂ ಭಯಬೀಳಿಸೋತರ ನಾನ್ ಸ್ಟಾಪ್ ನಡಿತಾ ಇರೋಣ ದಾರಿ ಸಿಕ್ಕೇ ಸಿಗತ್ತೆ. ಉತ್ತಮ ಸಮಾಜಕ್ಕಾಗಿ ಮಕ್ಕಳನ್ನ ಬೆಳೆಸೋಣ, ಅಂಕಗಳಿಕೆಗಾಗಿ ಅಲ್ಲ. ಪರೀಕ್ಷೆಯ ಮಹತ್ವ ಕೇವಲ ಭೌದ್ಧಿಕ ಮಟ್ಟ ಸುಧಾರಿಸೋಕೆ ವಿನಃ ಕಡಿಮೆ ಅಂಕಗಳಿಸಿದ ಎಲ್ಲರೂ ಜೀವನ ನಡೆಸಲಾರದ ದಡ್ಡರಂತೂ ಅಲ್ಲವೇ ಅಲ್ಲ.
ಮನ್ಮಥನಾಮ ಸಂವತ್ಸರ ಯುಗಾದಿ

ಯಾಂತ್ರಿಕ ಜೀವನದಿಂದ ಬೇಸತ್ತಿರುವ ಮನಸ್ಸನ್ನು ಪ್ರಫುಲ್ಲವಾಗಿಡಲು ಸ್ವಲ್ಪ ಬದಲಾವಣೆ, ಚೂರು ಹೊಸತನ ಸಿಕ್ಕರೂ ಸಾಕು. ಏನೋ ಒಂದು ತರಹದ ಉಲ್ಲಾಸ, ಉತ್ಸಾಹ. ಸ್ವಲ್ಪ ಸಮಾಧಾನಿಸಿ ಹೊರಗೆ ನೋಡಿ! ಎಲೆ ಕಳಚಿಕೊಂಡು ಮರಗಳು ಚಿಗುರಲು ಆರಂಭಿಸಿವೆ. ಓಡುತ್ತಿರುವ ಮೋಡ ಏನೋ ಸಂಚಲನ ಸೃಷ್ಟಿಸುವಂತೆ ಭಾಸವಾಗುತ್ತಿದೆ. ಕೋಗಿಲೆಯ ಕೂಗು ವಿಶೇಷವಾಗಿ ಕೇಳುತ್ತಿವೆ. ಏನೋ ಒಂದು ರೀತಿಯ ಅದ್ಭುತ ತಳಮಳದ ಮಧ್ಯೆಯೇ ಹೊಸತನ್ನು ಸ್ವಾಗತಿಸಲು ಪ್ರಕೃತಿಯೇ ನಿಂತಂತಿದೆ. ಆರಂಭ ಶುಭದೊಂದಿಗೆ ಶುರುವಾದರೆ ಎಂಥಾ ಕಷ್ಟದ ಸವಾಲುಗಳನ್ನು ಕೂಡಾ ಎದುರಿಸುವ ಆತ್ಮವಿಶ್ವಾಸ ತನ್ನಿಂತಾನೇ ಬರುತ್ತದೆ. ಈಗ ಅಂತಹುದೇ ಆರಂಭ ಮತ್ತೆ ಬಂದಿದೆ. ಅಂದರೆ ಹಳೆಯ ದುಃಖಗಳನ್ನು ಮರೆತು ಸುಖಗಳನ್ನು ನೆನೆಯುತ್ತಾ ಹೊಸತನ್ನು ಹಬ್ಬದ ಮೂಲಕ ಸ್ವಾಗತಿಸೋಣ. ಭಾರತವು ಹಬ್ಬಗಳ ತವರು. ಇಲ್ಲಿ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ಕಾರಣಗಳು, ಆಚರಿಸುವ ವಿಧಾನಗಳು, ಅದರ ಹಿಂದಿರುವ ವೈಜ್ಞಾನಿಕ ಸತ್ಯ ಸಂಗತಿಗಳು ಅಡಕವಾಗಿದೆ. ನಮ್ಮ ಪೂರ್ವಿಕರಿಗೆ ಖಗೋಳ ಗಣಿತದ ಬಗ್ಗೆಯೂ ಅಪಾರ ಪಾಂಡಿತ್ಯ. ಹೀಗೆ ಭೂಮಿ, ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಮಂಡಲದ ಚಲನವಲನ, ವೇದಾಂಗ ಜ್ಯೋತಿಷ್ಯದ ಬಗ್ಗೆ ಸುಧೀರ್ಘ ಆಳ ಅಧ್ಯಯನದಿಂದ ಹಿಂದೂ ಪಂಚಾಂಗದ ಚಂದ್ರಮಾನ ರೀತಿಯಾಗಿ ಚೈತ್ರಮಾಸದ ಮೊದಲ ದಿನ ಅಂದರೆ ಪ್ರಚಲಿತ ಜಾಗತಿಕ ಕ್ಯಾಲೆಂಡರ್ ಪ್ರಕಾರ ಮಾರ್ಚ್ 21ರಂದು ನಮಗೆಲ್ಲಾ ಹೊಸವರ್ಷ ಆರಂಭವಾಗುತ್ತದೆ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಮೊದಲಿನಿಂದಲೂ ರೂಢಿಯಲ್ಲಿದೆ.

ಹೊಸವರ್ಷ ಅಂದರೆ ಯುಗದ ಆರಂಭ. ಅದೇ ಯುಗಾದಿ ಕನ್ನಡಿಗರೆಲ್ಲರಿಗೂ ಇದು ಬಹಳ ಮುಖ್ಯವಾದ ಹಬ್ಬ. ಮನೆಮನೆಯಲ್ಲೂ ಸಡಗರ ಸಂಭ್ರಮ. ಎಲ್ಲೆಲ್ಲೂ ಹಸಿರು ತೋರಣಗಳ ಅಲಂಕಾರ. ಪಂಚಾಂಗ ಪೂಜೆ ನಂತರ ಬೇವು-ಬೆಲ್ಲದ ಮಿಶ್ರಣವನ್ನು ಹಂಚಿ ತಿನ್ನುವ ಸಂಪ್ರದಾಯ. ಮುಂಬರುವ ಸುಖ-ದು:ಖಗಳನ್ನೂ ಸಮನಾಗಿ ಸ್ವೀಕರಿಸುತ್ತೇನೆ ಎನ್ನುವ ವಾಗ್ದಾನದ ಸಂಕೇತ.

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರತಮೇಹನಿ
ಶುಕ್ಲಪಕ್ಷೇ ಸಮಗ್ರಂ ತು ತದಾ ಸೂರ್ಯೋದಯೇ ಸತಿ

ಅಂದರೆ ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಠಿ ಪ್ರಾರಂಭಿಸಿದನಂತೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು. ಹಿಂದೂ ಜನಾಂಗಕ್ಕೆ ಯುಗಾದಿಯಂದು ಹೊಸವರ್ಷ ಪ್ರಾರಂಭವಾಗುತ್ತದೆ. ಹೊಸ ಪಂಚಾಂಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರುಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು;ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಇನ್ನು ಹಬ್ಬದ ಆಚರಣೆಯೂ ವಿಶೇಷವಾಗಿಯೇ ಇರುತ್ತದೆ. ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ- ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರಪ್ರದೇಶದಲ್ಲಿ ಹುಣಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ಕರ್ನಾಟಕದಲ್ಲಿಯೇ ಹಲವು ಕಡೆ ಹಲವು ತೆರನಾಗಿ ಆಚರಿಸುತ್ತಾರೆ. ಮಲೆನಾಡು ಕರಾವಳಿ ಭಾಗದಲ್ಲಿ ವಿಶೇಷ ಪೂಜೆಯ ಜೊತೆಗೆ ಶೋಭಾಯಾತ್ರೆ ಮುಖಾಂತರ ವಿವಿಧ ರೂಪಕಗಳ ಮೂಲಕ ಧರ್ಮ ಜಾಗೃತಿ, ಏಕತೆಯ ಪ್ರತೀಕ ಸಾರುವ ಸಂದೇಶ ತಿಳಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಯುಗಾದಿಯನ್ನು ಆಟ ಆಡಿ ಮೋಜಿನೊಂದಿಗೆ ಆಚರಿಸುವುದನ್ನು ಕಾಣಬಹುದು. ಆದರೆ ಇವೆಲ್ಲದರ ಹಿಂದೆ ಸಂಘಟಿತರಾಗುವ, ಒಂದೆಡೆ ಸೇರುವ ಭಾಂದವ್ಯ ಬೆಳೆಸುವ ಉದ್ದೇಶ ಇದ್ದಂತೆ ತೋರುತ್ತದೆ. ಈ ಯುಗಾದಿಯ ವಿಶೇಷ ದಿನದಂದು ಉಷಾಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತಾ, ದೇವರ ಮನೆ ಮತ್ತು ಮನೆಯ ಮುಖ್ಯದ್ವಾರಗಳಲ್ಲಿ ರಂಗವಲ್ಲಿ ಮತ್ತು ಮಾವಿನ ಎಲೆ, ಹೂವಿನ ತೋರಣಗಳಿಂದ ಸಿಂಗರಿಸಿ, ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಹೊಸ ವರ್ಷದ ಪಂಚಾಂಗವನ್ನು ದೇವರ ಸಮೀಪ ಇಟ್ಟು ಪೂಜಿಸಿ, ಸನ್ಮಿತ್ರರು ಇರುವ ಸಭೆಯಲ್ಲಿ ಪುರೋಹಿತರು ಪಟಿಸುವ ಪಂಚಾಂಗ ಶ್ರವಣವನ್ನು ಆಲಿಸಬೇಕು. ಆಗ ನೂರು ವರ್ಷಗಳ ಆಯುಷ್ಯ, ದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆಂದು ಸೇವಿಸಬೇಕು. ಇದು ಪ್ರತೀತಿ. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೆಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಇದು ವಾಸ್ತವ.

ಹಬ್ಬ ಅಂದಮೇಲೆ ಊಟಕ್ಕೆ ಕೂಡಾ ಪ್ರಾಮುಖ್ಯತೆ ಇರಲೇಬೇಕು. ಇನ್ನು ಯುಗಾದಿಯ ವಿಶೇಷ ಭಕ್ಷ್ಯಗಳಲ್ಲಿ ಒಬ್ಬಟ್ಟು ಅಥವಾ ಹೋಳಿಗೆಗೆ ಅಗ್ರಸ್ಥಾನ. ಕಾಯಿ ಒಬ್ಬಟ್ಟು, ಬೇಳೆ ಒಬ್ಬಟ್ಟು, ಸಕ್ಕರೆ ಒಬ್ಬಟ್ಟು, ಮಂಡಿಗೆ ಒಬ್ಬಟ್ಟು ಇತ್ಯಾದಿಗಳನ್ನು ವಿಶೇಷವಾಗಿ ಮಾಡಿ ಬಡಿಸುವರು ಎಲ್ಲಾ ಮನೆ ಮಂದಿಗೆ..!

ಒಟ್ಟಾರೆ ಎಲ್ಲರೂ ಖುಷಿಯಿಂದ ಆಚರಿಸುವ ಯುಗಾದಿ ಹಬ್ಬವು ಇಂದು ಮತ್ತೊಮ್ಮೆ ಬಂದಿದೆ. ಜೀವನದಲ್ಲಿ ಕಷ್ಟ ಸುಖ ಇದ್ದದ್ದೇ, ಹೊಸ ವರ್ಷವನ್ನು ಹೊಸ ಧ್ಯೇಯದಿಂದ ಸ್ವಾಗತಿಸಿ, ಬಂದಿದ್ದನ್ನು ಸ್ಥೈರ್ಯವಾಗಿ ಎದುರಿಸಿ, ಎಂದೂ ನಿಲ್ಲದ ಈ ಸಮಯಕ್ಕೆ ಒಂದು ಸಲಾಮು ಹಾಕುತ್ತಾ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ ಎನ್ನುವ ಬೇಂದ್ರೆ ಕವಿವಾಣಿಯಂತೆ, ಹೊಸತನ್ನು ಹೊಸತಗಿ ಸ್ವಾಗತಿಸುತ್ತಾ ನಮ್ಮೆಲ್ಲರ ಜೀವನ ರಸಮಯವಾಗಿ ಹೆಚ್ಚೆಚ್ಚು ಖುಷಿಯ ಸಿಂಪರಣೆಯಾಗಲಿ, ಎಲ್ಲರ ಮೊಗದಲ್ಲೂ ಇದೇ ಸಂಭ್ರಮ ಮಿನುಗುತ್ತಿರಲಿ ಎಂದು ಆಶಿಸುತ್ತಾ
ಎಲ್ಲರಿಗೂ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..!!