Tuesday 27 October 2015

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ

***
ಫ್ಲಾಪಿಬಾಯ್- ಬಾಬಾ ನೀವ್ ಅಘೋರಿಯಾಗಿದ್ರೂ ಮಾಂಸ ತಿನ್ನೋದು ನೋಡೇ ಇಲ್ಲ..! ನೀವ್ ತಿನ್ನೊಲ್ವಾ ಮಾಂಸಾಹಾರಗಳನ್ನ? ಕುಡಿಯೊಲ್ಲವಾ ಸುರಾಪಾನವನ್ನಾ?
ಲಗೋರಿಬಾಬಾ- ಅಯ್ಯೋ ಹುಚ್ಚಾಪ್ಪಾ? ನನಗೆ ಅನಿವಾರ್ಯವಲ್ಲದಿರುವಾಗ ತಿನ್ನೋದಾದ್ರೂ ಏಕೆ? ಕುಡಿಯೋದಾದ್ರೂ ಏಕೆ? ಬದುಕಲು ಆಹಾರ ಬೇಕು. ಅದಕ್ಕಾಗಿಯೇ ಸಸ್ಯಗಳಿವೆ. ಅವುಗಳ ಕಡಿದ್ರೆ ಮತ್ತೆ ಚಿಗುರಿಸಬಹುದು. ತಿಂದರೂ ಮತ್ತೆ ನೆಟ್ಟು ಹುಟ್ಟಿಸಬಹುದು. ಆದ್ರೆ ಮಾಂಸ ತಿಂದು ಮತ್ತೆ ನಮಗೆ ಆ ಜೀವಿಗಳಿಗೆ ಜೀವ ಕೊಡಕ್ಕಾಗ್ತದಾ? ಅದ್ಕೆ ತಿನ್ನೋದ್ ಬಿಟ್ಟೆ!
ಫ್ಲಾಪಿಬಾಯ್- ಓಹ್ ತಡಿರಿ ಘಮ್ ಅಂತಾ ಮಸಾಲ ಸ್ಮೆಲ್ ಬರ್ತಿದೆ... ಆಮೇಲೆ ಬರ್ತೆ
***
ಬೆಳ್ಬೆಳಿಗ್ಗೆ ತಿಂಡಿತಿನ್ನೋಕೆ ಅಂತಾ ನಮ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಪಟಾಲಮ್ಮನ ಹಟ್ಟಿ ಹೋಟೆಲ್ ಕಡೆ ಹೋದ್ರು.
"ಪಟಾಲಮ್ಮ ತಿಂಡಿ ಏನಿದೆ? ಬೇಗ ತಾ.. ಹಸಿವಾಗ್ತಿದೆ" ಆತುರ ಪಡಿಸಿದ ಫ್ಲಾಪಿಬಾಯ್.
"ದೋಸೆ ಬಿಟ್ರೆ ಬೇರೇನಿಲ್ಲ.. ಹೇಳಿ ಯಾವ ದೋಸೆ ಬೇಕು? ಮಸಾಲೆ, ಪ್ಲೇನ್, ಖಾಲಿ, ಆನಿಯನ್...??" ಪಟಾಲಮ್ಮ ಕೈಯಲ್ಲಿದ್ದ ದೋಸೆ ಹಿಟ್ಟು ಸೌಟು ಅಲ್ಲಾಡಿಸ್ತಾ ಕೇಳಿದಳು.
"ನಂಗೆ ತೂತಿಲ್ಲದೇ ಇರೋ ಯಾವ ದೋಸೆಯಾದ್ರೂ ಸರಿ" ಅಂದ ಲಗೋರಿಬಾಬಾ.
"ಹಾಗಿದ್ರೆ ಅದು ನಮ್ಮಲ್ಲಿಲ್ಲ. ನಮ್ಮಲ್ಲಿರೋ ಎಲ್ಲಾ ದೋಸೆಗೂ ತೂತಿರ್ತದೆ. ಫ್ಲಾಪಿ ಅಣ್ಣಾ ದೋಸೆಗೆ ಯಾಕೆ ತೂತಿರ್ತದೆ ಅಂತ ಹೇಳು ನೊಡುವ? ಯಾವಾಗಲೂ ಏನಾದ್ರೂ ಸಂಸೋಧನೆ ಮಾಡ್ತಾ ಇರ್ತೀಯಲ್ಲ.. ಅದ್ಕೆ ಕೇಳಿದೆ!" ಕುತೂಹಲಿಯಾಗಿದ್ದಳು ಪಟಾಲಮ್ಮ.
"ಅಯ್ಯೋ ಪಟಾಲು ಅದಕ್ಕೆ ಕಾರಣ ಇಷ್ಟೇ, ನೀನು ಕಲಿಸಿ ಇಟ್ಟ ದೋಸೆ ಹಿಟ್ಟು ಈಸ್ಟ್ ಮತ್ತು ಬ್ಯಾಕ್ಟೀರಿಯಾದ ಸಹಾಯದಿಂದ ಹುಳಿಯಾಗಿರ್ತದೆ. ಅದನ್ನ ಕಾದ ಹೆಂಚಿನ ಮೇಲೆ ಹಾಕ್ದಾಗ ಅಂಗಾರಾಮ್ಲ ಅಥವಾ ಕಾರ್ಬನ್ ಡೈ ಆಕ್ಸೈಡ್ ಉಂಟಾಗ್ತದೆ. ಆ ಅನಿಲ ಹೊರಗೋಗುವಾಗ ಆ ಸ್ಥಳದಲ್ಲಿ ರಂಧ್ರಗಳುಂಟಾಗ್ತದೆ ಅಷ್ಟೇ!" ಉತ್ತರಿಸಿದ ಫ್ಲಾಪಿಬಾಯ್
"ಓಹ್ ಹಂಗಾ ವಿಷ್ಯ, ಗೊತ್ತಾತು ಬಿಡು, ನಿಂಗಿವತ್ತು ಒಂದು ದೋಸೆ ಫ್ರೀ.." ಎನ್ನುತ್ತಾ ಕಾದ ಹೆಂಚಿನ ಮೇಲೆ ಚೋರ್ ಎಂದು ನೀರಾಕಿದಳು ಪಟಾಲಮ್ಮ.
***
ಫ್ಲಾಪಿಬಾಯ್- ಉಪೇಂದ್ರ ನಾನು, ನೀನು ಅಂತೆಲ್ಲಾ ಕ್ಯಾರೆಕ್ಟರ್ ಸೃಷ್ಟಿ ಮಾಡಿ ಹಿಟ್ ಆದ.. ಅದೇ ತರ ದೇವ್ರು ಕೂಡಾ ಒಂದು ಸೂಪರ್ ಕ್ಯಾರೆಕ್ಟರ್ ನಮ್ಮಗಳ ಮಧ್ಯೆ ಸೃಷ್ಟಿ ಮಾಡವ್ನೆ ಯಾರು ಅಂತಾ ಗೊತ್ತಾ ಬಾಬಾ?
ಲಗೋರಿಬಾಬಾ- ಎಷ್ಟೋಂದ್ ಜನ ಇದಾರೆ, ಒಬ್ರುಗಿಂತ ಒಬ್ರು ಮಸ್ತುಕಲಂದರ್ ತರದವು. ಯಾರು ಅಂತಾ ಹೇಳಲಿ?
ಫ್ಲಾಪಿಬಾಯ್- ಇನ್ಯಾರು ನಮ್ಮ ಭಗವಾನು... ಕಾಂಟ್ರಾವರ್ಸಿ ಸ್ಟೇಟ್ಮೆಂಟ್ ಕೊಟ್ಟೆ ಸಖತ್ ಫೇಮಸ್ ಆಗೋದ್ರು ಅವ್ರೀಗ. ಕಲಿಯುಗದ ಕರ್ಮಕಾಂಡ ನೋಡಿ ನಮ್ಮ ಜನ ಸಾಮಾನ್ಯರು 'ಹೇ ಭಗವಾನ್' ಅನ್ನೋ ಹಾಗೂ ಇಲ್ಲ ಪರಿಸ್ಥಿತಿ.. ಪಾಪ ಅನ್ನಿಸ್ತಿದೆ. 
ಲಗೋರಿಬಾಬಾ- ಹೌದು ಫ್ಲಾಪಿ, ಧರ್ಮಗ್ರಂಥ ಸುಡ್ತೀನಿ ಅಂತಾ ಹೇಳಿ, ಅದಕ್ಕೆ ಸರಿಯಾದ ಸಮಜಾಯಿಷಿಯನ್ನೂ ಕೊಡದೇ ಜಾರಿಕೊಳ್ತಾ ಇರುವ ಭಗವಾನ್ ಪಕ್ಕಾ ನಾಸ್ತಿಕ, ಅದಕ್ಕೆ ಅವನ ಹೆಸರನ್ನ ಸೈತಾನ್ ಅಂತಾ ಬದಲಾಯಿಸಿಕೊಳ್ಳಬೇಕಂತ ಕೆಲವರು ಗಲಾಟೆ ಮಾಡ್ತಾ ಇದಾರಂತೆ ಹೌದಾ??
ಫ್ಲಾಪಿಬಾಯ್- ಬಾಬಾ ಮೆತ್ತಗೆ ಯಾರ್ಯಾದ್ರೂ ಕೇಳಿಸಿಕೊಂಡು ಬಿಟ್ಟಾರು ಕಂಡೋರ್ ವಿಷ್ಯ ನಮಗ್ಯಾಕೆ ಅಲ್ವಾ?
***
ಲಗೋರಿಬಾಬಾ- ಕೆಲವು ಮಕ್ಕಳು ಲಘು ಬುದ್ಧಿಮಾಂದ್ಯರು. ಇಂತವರು ಎಲ್ಲರಂತೆ ಕಲಿಯಲಾರರು. ಆದ್ರೆ ಕುಶಲತೆಯ ಕೆಲಸದ ತಂತ್ರಗಳನ್ನು ತಿಳಿಯಬಲ್ಲರು. ನಮ್ಮ ಪ್ರಾಚೀನ ಯೋಗ, ಆಯುರ್ವೇದ ಪದ್ಧತಿಯಿಂದ ಖಂಡಿತವಾಗಿ ಇವರೂ ಸ್ವಾವಲಂಭನೆ ಜೀವನ ನಡೆಸಬಹುದು ಅನ್ನೋದು ನನ್ನ ಬಲವಾದ ನಂಬಿಕೆ."
ಫ್ಲಾಪಿಬಾಯ್- "ಹೌದು ಬಾಬಾ ಐಕ್ಯೂ ಮಟ್ಟ 35 ಇರೋವ್ರಿಗೆ ಜೊತೆಗೊಬ್ರು ಇರಲೇಬೇಕು. ಅಂತವರಿಗಾಗಿ ಒಂದು ಆಶ್ರಮ ಕಟ್ಟಿಸಬೇಕು ಅನ್ನೋ ಆಸೆ ಇದೆ ನಂಗೆ!"
ಲಗೋರಿಬಾಬಾ- "ಸರ್ವ ಸಿದ್ಧಿ ಪ್ರಾಪ್ತಿರಸ್ತು"
***
"ಬಾಬಾ ನೀವು ಮಾನಸಿಕವಾಗಿ ಇಷ್ಟು ಕೂಲಾಗಿರ್ತಿರಲ್ಲಾ ಹೇಗೆ ಸಾಧ್ಯ ಅದು?" ಪ್ರಶ್ನೆ ಎಸೆದ ಫ್ಲಾಪಿಬಾಯ್
"ಭಾವನಾತ್ಮಕ ಬುದ್ಧಿಮತ್ತೆ ಅಥವಾ ನಿಮ್ ಭಾಷೆಲಿ ಎಮೊಶನಲ್ ಇಂಟೆಲಿಜೆನ್ಸ್ ಅಂತಾ ಏನಂತಾರೋ ಅದನ್ನು ನಾನು ಹಿಂಬಾಲಿಸುತ್ತಿದ್ದೇನೆ ಅಷ್ಟೆ. ವಿದುರ ನೀತಿಯಲ್ಲಿಯೂ ಅದೇ ಇದೆ. ಪರಿಪೂರ್ಣನಾಗಬೇಕೆಂದುಕೊಂಡವ ಆಪತ್ತಿಗೆ ದುಃಖಿಸದೇ, ಸಮಸ್ಯೆಗೆ ಪ್ರಶಾಂತವಾಗಿ ಆಲೋಚಿಸುತ್ತಾನೆ. ಮಾಡುವ ಕೆಲಸವನ್ನ ಎಚ್ಚರಿಕೆಯಿಂದ ಮಾಡಿ ಯಶಸ್ಸು ಸಾಧಿಸುತ್ತಾನೆ." ಅಂದ ಲಗೋರಿಬಾಬಾ.
ಫ್ಲಾಪಿಬಾಯ್- "ಲವ್ ಯು ಬಾಬಾ smile emoticon "

***
"ಛೆ..! ಅಗೇನ್ ಫ್ಲಾಪ್.. ಹೇಗಾದ್ರೂ ಮಾಡಿ ಕರ್ನಾಟಕವನ್ನ ಕತ್ತಲೆ ಭಾಗ್ಯದಿಂದ ಮುಕ್ತ ಮಾಡೋಣ ಅಂತ ಹೊಸ ಹೊಸ ಪ್ರಯೋಗ ಮಾಡ್ತಾ ಇದ್ರೆ ಎಲ್ಲವೂ ಕೈ ಕೊಡ್ತಾ ಇದ್ಯಲ್ಲಪ್ಪಾ..!" ಹಳಹಳಿಸುತ್ತಾ ಬೇಸರದಿಂದ ಕುಳಿತ ಫ್ಲಾಫಿಬಾಯ್.
"ಏಯ್ ಬಾರೋ ಇಲ್ಲಿ!" ಕರೆದ ಲಗೋರಿಬಾಬಾ
"ಏನು ಬಾಬಾ ಕರೆದದ್ದು?"
"ನೋಡಿಲ್ಲಿ ಏನು ಕಾಣಿಸ್ತಿದೆ ಹೇಳು?" ಇರುವೆಗಳ ಸಾಲನ್ನು ತೋರಿಸುತ್ತಾ ಹೇಳಿದ ಲಗೋರಿಬಾಬಾ.
"ಇರುವೆಗಳು ಮರಳಕಣವನ್ನ ಹೊತ್ತು ಸಾಗುತ್ತಿವೆ. ಇದರಿಂದ ಹುತ್ತ ಕಟ್ಟುತ್ತವೆ."
"ನೋಡು ಫ್ಲಾಪಿ, ಇಷ್ಟು ಚಿಕ್ಕ ಇರುವೆಗಳೇ ಗಟ್ಟಿ ಮುಟ್ಟಾದ ಮನೆ ನಿರ್ಮಿಸಿಕೊಳ್ತಾವೆ ಅಂದ್ಮೇಲೆ ನಾವು ಎಲ್ಲಾ ಇದ್ದೂ ಆಗೊಲ್ಲ ಅಂತ ಹೇಳೋದು ಸರಿಯೇ? ನಮ್ಮಲ್ಲಿ ಅಡಗಿರುವ ಶಕ್ತಿಯ ಬಗ್ಗೆ ನಮಗೇ ಗೊತ್ತಿರಲ್ಲ. ಆಗಲ್ಲ ಅನ್ನೋ ಭ್ರಮೆಯಿಂದ ಹೊರಗೆ ಬಾ. ಆಗ ಮಾತ್ರ ಅದ್ಭುತವಾದುದನ್ನು ಸಾಧಿಸಬಹುದು." ಕೂಲಾಗಿ ಹೇಳಿದ ಲಗೋರಿಬಾಬಾ.
"ಹೌದಲ್ವಾ ಬಾಬಾ, ಥಾಂಕ್ಯೂ ನನ್ನೊಳಗಿನ ಶಕ್ತಿಯನ್ನು ಆಕ್ಟಿವ್ ಮಾಡಿದ್ದಕ್ಕೆ! ನೋಡ್ತಾ ಇರಿ ನಾನು ಇನ್ನೂ ಏನೇನ್ ಮಾಡ್ತೀನಿ ಅಂತಾ!" ಅತ್ಯುತ್ಸಾಹದಿಂದ ಕೆಲಸದಲ್ಲಿ ನಿರತನಾದ ಫ್ಲಾಪಿಬಾಯ್.
***


No comments:

Post a Comment