Friday 22 March 2013


1 *ಪೋರಿ - ಲಾರಿ...!!

ಮದುವೆಯ ಮೊದಲು....
ನನ್ನ ನಾರಿ - ಪುಟ್ಟ ಪೋರಿ...!! 
ಮದುವೆಯ ನಂತರ....
ಹೆಮ್ಮಾರಿ ಮತ್ತು ಮಿನಿ ಲಾರಿ..!! 

2*ಕಾರು-ಬಾರು 

ಅಂದಿನ ಉದ್ಯಾನನಗರಿಯ ರಸ್ತೆಯ ಇಕ್ಕೆಲಗಳಲ್ಲಿ
ಭಾರೀ ಮರಗಳು ಮತ್ತು ಹಸಿರಿನದೇ ಕಾರು-ಬಾರು...
ಇಂದಿನ ಸಿಲಿಕಾನ್ ಸಿಟಿಯ ರಸ್ತೆಯ ಇಕ್ಕೆಲಗಳಲ್ಲಿ
ಕಾಣಸಿಗುವುದು ಬರೀ ಕಾರು ಮತ್ತು ಬಾರು..!!

3*ಪಾಶ್ಚಾತ್ಯಕರಣ 

ಪಾಶ್ಚಾತ್ಯ ಸಂಸ್ಕೃತಿಗೆ ಬೇಸತ್ತು,
ಹುಡುಕಿಕೊಂಡು ಉದ್ದ ಜಡೆ,
ಹೊರಟೆ ನಾನು ಹಳ್ಳಿ ಕಡೆ..
ಎದುರುಗೊಂಡ ಮಾವನ ಮಗಳು,
ಮುತ್ತ ಕೊಟ್ಟು ಹೇಳಿದಳು,
ಡಾರ್ಲಿಂಗ್-ವಿಶ್ ಯು ಹ್ಯಾಪಿ ಕಿಸ್ ಡೇ..!!

4*ಆಯಸ್ಸು 

ಆಸೆ, ಅಸೂಯೆ ಮತ್ತು ಜಗಳಗಳಿಗೆ
ಹೆಂಗಸರು ತಾನೇ ಫೇಮಸ್ಸು..?
ಅದಕ್ಕೆ ಇರಬಹುದೇ,
ಅವರಿಗೆ ಜಾಸ್ತಿ ಆಯಸ್ಸು..?

5*ಸೈಕಲ್ಲು 

ಉಪನ್ಯಾಸದಲ್ಲಿ ವೈದ್ಯರೆಂದರು, "ಯುವಕರೇ
ಉತ್ತಮ ಆರೋಗ್ಯಕ್ಕೆ ನೀವು- ದಿನವೂ
ಹೊಡೆಯಬೇಕು ಸೈಕಲ್ಲು"
ಯುವಕರು ಗೊಣಗಿಕೊಂಡರು, 'ನಮ್ಮ ಅನಾರೋಗ್ಯಕ್ಕೆ
ಕೂಡ ಕಾರಣ, ಹುಡುಗಿಯರಿಗೊಸ್ಕರ ನಾವು
ದಿನವೂ ಹೊಡೆದ ಸೈಕಲ್ಲು'

6*ಆಕ್ರೋಶ - ತೂರಾಟ 

ಆಕ್ರೋಶಗೊಂಡಾಗ-
ಕೆಲ ಗಂಡಸರು ನೈಂಟಿ ಹಾಕಿಕೊಂಡು
ಚಿತ್ರ-ವಿಚಿತ್ರ ನಶೆಯಲ್ಲಿ ತೂರಾಡುತ್ತಾರೆ,
ಅದೇ ಕೆಲ ಮಹಿಳೆಯರು, ನೈಟಿ ಹಾಕಿಕೊಂಡು
ಮನೆಯಲ್ಲಿನ ಪಾತ್ರೆಗಳನ್ನು ತೂರಾಡುತ್ತಾರೆ..!!

7*ದಂಪತಿಗಳು 

ಅಂದಿನ ಜಮಾನಾದಲ್ಲಿ, ಮನೆ-ಮನೆಯಲ್ಲಿಯೂ
ಇರುತ್ತಿದ್ದರು, 'ಆದರ್ಶ ದಂಪತಿಗಳು'
ಆದರೆ ಇಂದು ಕಾಣಸಿಗುತ್ತಿರುವುದು,
ಬರೀ ಡೈವೊರ್ಸಿಗಳು ಮತ್ತು ದಂ-ಪತಿಗಳು..!

8*ನಗಬೇಕು 

ಮನಸ್ಸು ಉಲ್ಲಾಸಭರಿತವಾಗಿಡಲು
ಬಾಯ್ತುಂಬಾ ಆಗಾಗ, ನಗಬೇಕು
ಅದಿಕ್ಕೆ ಅಲ್ಲವೇ ಮಹಿಳೆಯರು
ಕೇಳುವುದು ಆಗಾಗ, 'ನಗ-ಬೇಕು'

9*..ಬಂದ್, ..ಬಂದ್, ..ಬಂದ್..!

ನಮ್ಮಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ
ಮುಷ್ಕರ, ಗಲಾಟೆ ಮತ್ತು
..ಬಂದ್, ..ಬಂದ್, ..ಬಂದ್..!
ಹಾಗಾಗಿ ಹಲವು ದಿನಗೂಲಿ ಬಡವರ
ಕೆಲಸ ಬಂದ್, ಊಟ ಬಂದ್,
ಕೆಲವು ಕಂದಮ್ಮಗಳ ಉಸಿರಾಟವೂ ಅಂದೇ ಬಂದ್..!!

10*ಪಂಥಾಹ್ವಾನ

ಅವಳೆಂದಳು,
'ನಾವು ನೀವ್ ಮಾಡುವ
ಎಲ್ಲಾ ಕೆಲಸಗಳನ್ನೂ ಮಾಡಬಲ್ಲೆವು,
ಪಂಥಾಹ್ವಾನ-ನೋಡುವಿಯೇನು?'
ನಾನೆಂದೆ,
ನಾವು ಆಗಾಗ ಶೇವಿಂಗ್
ಮಾಡುತ್ತಿರುತ್ತೇವೆ,
ಮತ್ತೆ ನೀವು??'

11*ರಾಜಕಾರಣ.

ಅಂದಿನ ಹಂಪೆಯ
ವೈಭವದ ಉತ್ತುಂಗಕ್ಕೆ
'ರಾಜ' ಕಾರಣ
ಇಂದು ಹಂಪೆ
ಹಾಳು ಕೊಂಪೆಯಾಗಲೂ ಕೂಡ
ಕಾರಣ, ನಮ್ಮವರ ರಾಜಕಾರಣ..!!

12*ಸ್ಥಿತಿ - ಗತಿ 

ಕಾಲೇಜಿನ ಆರಂಭಿಕ ದಿನಗಳಲ್ಲಿ,
ನಾವೇ ಹೀರೋ / ಹಿರೋಯಿನ್ನು..!
ಪರೀಕ್ಷೆಯ ಸಂದರ್ಭದಲ್ಲಿ ಮಾತ್ರ
ನಮ್ಮ ಸ್ಥಿತಿ, ಪಿನ್ನು ಚುಚ್ಚಿದ ಬಲೂನು..!!

13*ಬಾಲ್ಯ ಸಂಗಾತಿ 

ನಮ್ಮ ಬಾಲ್ಯದಲ್ಲಿ ಉತ್ತಮ ಸಂಗಾತಿಗಳಾಗಿದ್ದವು,
ಚಂಪಕ, ಬಾಲಮಂಗಳ, ಚಂದಾಮಾಮ..!!
ಈಗಿನ ಮಕ್ಕಳ ಕರುಮ
ಮೂರೊತ್ತು ಹಿಡಿದಿರುತ್ತವೆ, ವಿಡಿಯೋ ಗೇಮ..!!

14*ವಿಪರ್ಯಾಸ 

ಚಿಕ್ಕವರಿದ್ದಾಗ,
ಹೆಣ್ಣು ಮಕ್ಕಳು
ಕೇಳುತ್ತಿದ್ದರು ಬಾರ್ಬಿ ಡಾಲ್,
ಗಂಡು ಮಕ್ಕಳಿಗೆ ಆಟಿಕೆ ವೆಹಿಕಲ್..!
ದೊಡ್ಡವರಾದಾಗ,
ಹುಡುಗರು ಹುಡುಕುವುದು ಡಾಲ್,
ಹುಡುಗಿಯರು ಬಯಸುವುದು ವೆಹಿಕಲ್...!!

15*ಚಂದಾಮಾಮ 

ಆದಿ ಕಾಲದಿಂದಲೂ ಚಿಕ್ಕ ಮಕ್ಕಳೆಲ್ಲರಿಗೂ
ಮಾಮ ಆ ಚಂದ್ರ..!
ಅದಕ್ಕೆ ಇರಬೇಕು,
ಬೆಳೆದು ಮದುವೆ ಆದಮೇಲೆ
ಮಾಮನ ಆಶಿರ್ವಾದಕ್ಕೆಂದು
ಹೋಗುತ್ತಾರೆ- 'ಮಧು ಚಂದ್ರ'

17*ಸಾರಿಗೆ 

ಬೇಕೇ ಬೇಕು ಮಹಿಳೆಯರಿಗೆ
ಪ್ರತ್ಯೇಕ ಸಾರಿಗೆ...
ಯಾಕೆಂದರೆ ಅವರು ಚೆಂದ ಹಾಕ್ತಾರೆ
ವಗ್ಗರಣೆ, ಸಾರಿಗೆ...

18*ನನ್ನವಳು - ಆಗ ಈಗ 

ಮದುವೆಗೆ ಮೊದಲು 
ಅವಳು ರಸಗುಲ್ಲದಂತವಳು..
ಮದುವೆಯ ನಂತರ 
ರಸ ಹೀರುವ ಜಂತು ಹುಳು ... 


19*ಮಿನುಗುತಾರೆ

ಅಂದಿನ ಕಾಲದ ನಟಿಮಣಿಯರಲ್ಲಿ
ಕಲ್ಪನಾ 'ಮಿನುಗುತಾರೆ'... 
ಇಂದಿನ ಕಾಲದ ನಟಿಮಣಿಯರು
ತಮ್ಮ ಕಲ್ಪನೆಯಲ್ಲಿಯೇ ಮಿನುಗುತ್ತಾರೆ....

20*ನಾಚಿಕೆ 

ಅಂದು ನಾಚಿಕೆಯೇ ಮಹಿಳೆಯರ 
ಆಸ್ತಿ, ಸಂಪತ್ತಿನ ಗಣಿ 
ಇಂದು ಕೆಲವರಲ್ಲಿ ಸ್ವಲ್ಪವೂ ಕಾಣುವುದಿಲ್ಲ 
ಅವರು ಹಾಕಿಕೊಂಡಿದ್ದರೂ ಕೂಡ ಬಿಕಿನಿ..!!

21*ನೆಕ್ಲೇಸು

ಮಹಿಳೆಯರು ಅಂದ ಹೆಚ್ಚಿಸಿಕೊಳ್ಳಲು 
ಧರಿಸುತ್ತಾರೆ ಆರ್ಟಿಫಿಶಿಯಲ್ ನೆಕ್ಲೇಸು..! 
ಗಂಡಸರೇ ಸುಂದರರು, ಅದಕ್ಕೆ 
ಅವರಿಗೆ ನ್ಯಾಚುರಲ್  'ನೆಕ್' ಲೇಸು..!!

22* ಬುಗುರಿ-ಲಗೋರಿ ಮತ್ತು ಗೋರಿ 

ಒಂದು ಕಾಲದಲ್ಲಿ ಆಟವೆಂದರೆ, 
ಬುಗುರಿ ಮತ್ತು ಲಗೋರಿ..! 
ದುರಂತ ನೋಡಿ 
ಇಂದಿನ ಕ್ರಿಕೆಟ್ ಆರ್ಭಟದಲ್ಲಿ 
ಅವು ತೊಡಿಕೊಂಡಿವೆ ಗೋರಿ..!!

23* ಅಂಗಿ -ಲುಂಗಿ 
ಮಾಡ್ರನ್ ಮಹಿಳೆಯರಿಂದ
ಬೆಲೆ ಕಳೆದುಕೊಂಡಿದೆ
'ನಮ್ಮದು' ಎನ್ನುವಂತಿದ್ದ
ಪ್ಯಾಂಟು ಮತ್ತು ಅಂಗಿ..!!
ಏನನ್ನೂ ಬಿಟ್ಟಿಲ್ಲ ಅವರು
ಹೇಳಿಕೊಳ್ಳಲೂ
ನಾಚಿಕೆಯಾಗುತ್ತಿದೆ,
ಇದಿನ್ನೂ 'ನಮ್ಮದೇ ', ಲುಂಗಿ..!

24* ನಾವೇನ್ ಕಮ್ಮಿ ?

ವಿದೇಶಿಯರೂ ಕಲಿಯುತ್ತಿದ್ದಾರೆ ಯೋಗಾ,
ಧರಿಸುತ್ತಿದ್ದಾರೆ ಸೀರೆ..
ರೀ ಸ್ವಾಮೀ,,
ನಾವೇನು ಕಮ್ಮಿ,,?
ಇತ್ತೀಚಿಗೆ ನಮ್ಮವರೂ
ಹಾಕಿಕೊಳ್ಳುತ್ತಿಲ್ಲವೇ 'ಬಿಕಿನಿ' 

25*ಕಲ್ಲಂಗಡಿ-ಅಂಗಡಿ

ಸಾಲ-ಸೋಲ ಮಾಡಿ 
ರೈತನೋರ್ವ ಅಂಗಡಿ
ತುಂಬಾ ತುಂಬಿಸಿದ ಕಲ್ಲಂಗಡಿ..!!
ವಿಧಿಯ ಆಟ,
ದಲ್ಲಾಳಿಗಳ ಕಾಟ,
ಸಾವಿಗೆ ಶರಣಾದ ರೈತ,
ಈಗ ಪಳೆಯುಳಿಕೆಯಾಗಿ ಉಳಿದದ್ದು ಮಾತ್ರ 
ಪಾಳುಬಿದ್ದ ಆ ಕಲ್- ಅಂಗಡಿ  
  
26* ಹಿರಿಯರಿಗೆ ಅರ್ಪಣೆ 

ಚುಟುಕು, ಹನಿಗವನಗಳ ರಾಜ 
ನಮ್ಮ 'ಚುಟುಕು ರತ್ನ'- 'ದುಂಡಿರಾಜ'
ಅವರಿಗೆ ಎಲ್ಲಿಂದ ಹೊಳೆಯುತ್ತೆ ಇವೆಲ್ಲಾ??
ಅವರಿಗೆ ಮಾತ್ರ , 
ಎಳೆದಿರಬಹುದೇ ಆಶಿರ್ವಾದದ ಕೈಯಿ 
'ಚುಟುಕುಬ್ರಹ್ಮ' - ದಿನಕರ ದೇಸಾಯಿ 


27*UK-ನಮ್ಮ ಉತ್ತರ ಕನ್ನಡ..!!

ಅದೊಂದು ಬೆಂಗಳೂರಿನ ಪ್ರತಿಷ್ಟಿತ ಖಾಸಗೀ ಕಂಪನಿ
ಕನ್ನಡಿಗರಿಗೆ ಕೆಲಸ ಕೊಡಲು ಅವರ ಕಣ್ಣಲ್ಲಿ ಕಂಬನಿ..
ಆನ್-ಲೈನ್ ನಲ್ಲಿ ಸಂದರ್ಶನ
ಆಫ್ -ಲೈನ್ ಅಲ್ಲಿ ರಿಜೆಕ್ಷನ..
ಕಾರಣ- ಕನ್ನಡಿಗರಿಗೆ ಕೆಲಸ ಕೊಡಲು
ಅಳಕುತ್ತಿತ್ತು ಅವರ ಮನ ...

ಅಚಾನಕ್ ಆಗಿ ನನ್ನ CV ಸೆಲೆಕ್ಟ್ ಆಯ್ತು...
ಇಂಟರ್ ವ್ಯೂ ಕೂಡ ಮುಗಿತು...
ಕೆಲಸ ಕೂಡಾ ಸಿಕ್ಕಿತು..

ನನ್ನ ಕೆಲಸದ ಮೊದಲ ದಿನ,
ಬಾಸ್ ಅಂದ ಒಹ್ ಕಮ್..
ಆರ್ ಯು ಫ್ರಾಮ್ ಯುನೈಟೆಡ್ ಕಿಂಗ್ ಡಮ್...!!?
ನಾನಂದೆ ನೋ
ಅವನೆಂದ, ಬಟ್ ಇನ್ ಯುವರ್ CV ಅಡ್ರೆಸ್ ಇಸ್ UK..
ನಾನಂದೆ (ಒಹ್ ಮಂಕೇ-ಮನದಲ್ಲಿ)
ಐ ಯಾಮ್ ಫ್ರಾಮ್ ಕರ್ನಾಟಕದ ಕಾಶ್ಮೀರ
ನಮ್ಮ ಉತ್ತರ ಕನ್ನಡ..!!

28*ಹಿಂದಿಂದ ಸುಂದರಿ 

ಹಿಂದಿನಿಂದ ನೋಡಿ ತಿಳಿದೆ,
ಇರಬೇಕು ಇವಳ್ಯಾರೋ 
ಅಪ್ರತಿಮ ಸುಂದರಿ..!!
ಮುಂದಿನಿಂದ ಮುಖ 
ನೋಡಿದ ಮೇಲೆ ಗೊತ್ತಾತು,
ಥೋ, ಅವ ಮೋಟು ಜಡೆಯ ಹುಡುಗಾ ರೀ..!!

29*ವಾಟರ್ ಡೇ 

ಇಂದು 'ವಿಶ್ವ ಜಲ ದಿನ'
ಬನ್ನಿ ಒಟ್ಟಾಗಿ ಆಚರಿಸೋಣ,
ಘೋಷಣೆಗಳನ್ನ ಕೂಗೋಣ,
ಭಾಷಣಗಳನ್ನ ಮಾಡೋಣ..!
ಹೇಗಿದ್ರೂ ನಾಳೆ ಇಂದ ಇದ್ದೇ ಇದೆಯಲ್ಲ,
ಬೋರುವೆಲ್ಲು ಕೊರಿಯೋದು,
ನೀರು ಪೋಲು ಮಾಡೋದು...!!

30*ಕವ ಕವ ಕವನ 
ನಾನೂ ಯತ್ನಿಸಿದೆ ಬರೆಯಲೊಂದು ಕವನ 
ಆ ಒಂದು ದಿನ..
ಬೆವರೂ ಬಂತು ಅಳುವೂ ಬಂತೂ, 
ಆದರೂ ಮೂಡಲಿಲ್ಲ ಒಂದು ಕವನ..!!
ಕೆರೆದು ಕೊಂಡೆ ನನ್ನ ತಲೆಯನ್ನ, ಗಡ್ಡವನ್ನ..
ಹರಿದರಿದು ಬಿಸಾಕಿದೆ ಬುಕ್ಕಿನ ಪುಟವನ್ನ..!!
ಆದರೂ ಹೊಳೆಯಲಿಲ್ಲಾ ಒಂದೇ ಒಂದು ಲೈನು...
ಥೋ ಇದು ಸಾವಾಸಲ್ಲ ಎಂದು ಹೊರಟೆ ನಾನು... !!

ಆಕಾಶದಲ್ಲಿ ಹಾರುತ್ತಿತ್ತು ಮೀನು...
ಸಮುದ್ರದಲ್ಲಿ ಓಡುತ್ತಿತ್ತು ಪ್ಲೇನು...!!
ಜನಗಳೇ ಇರಲಿಲ್ಲ ಸುತ್ತಲು..
ನನ್ನ ಬಳಿ ಕವಿದಿತ್ತು ಬರೀ ಕತ್ತಲು..!!

ಅಳುವಿಲ್ಲಾ ನಗುವಿಲ್ಲ ಮಾತಾಡಲು ಬಾಯಿಯೂ ಬರುತಿಲ್ಲಾ..
ನೋವಿಲ್ಲ ನಲಿವಿಲ್ಲ ಏಕಾಂಗಿತನದ ಹೊರತು ಬೇರೆಯ ನೆರಳಿಲ್ಲ..
ಭಯ ಬಿಟ್ಟು ಹುಡುಕಿದೆ ಎಲ್ಲಾ, ಆದರೂ ಯಾರೂ ಕಾಣಲಿಲ್ಲಾ..
ನನಗೆ ನಾನೇ ಎಲ್ಲಾ, ಆಗ ಕಂಡಿತು ನೆಮ್ಮದಿಗಳ ಕೈ ಚೀಲ...!!

ಇದೆ ಕುಶಿಯಲ್ಲಿ ಕುಣಿದೆ ಕುಪ್ಪಳಿಸಿದೆ..
ಧಬ್ಬ್ ಎಂದು ಸದ್ದಾಯಿತು ..
ಕಣ್ಣು ಬಿಟ್ರೆ ಮಂಚದಿಂದ ಕೆಳ ಬಿದ್ದಿದ್ದೆ..
ಮೈ ಕೈ ಎಲ್ಲಾ ನೋವಾಯಿತು..!!

ಇದು ಕನಸಲ್ಲಿ ನಾನು ಬರೆದ ಕವನ..
ಈಗ ನೀವು ಓದಿದ್ದೆ ಆದರೆ ಲೈಟ್ ಆಗಿ ಹಚ್ಚಿಕೊಳ್ಳಿ ನಿಮ್ಮ ತಲೇನಾ..
ಕಾರಣ ನೀವು ಕಳೆದುಕೊಂಡಿದ್ದು ನಿಮ್ಮ ಸಮಯಾನ ..!!

3 comments: