Friday 29 March 2013


ಜೆನರೇಶನ್ ಗ್ಯಾಪ್

ನಾನು ಇಲ್ಲೇ ವಿಜಯನಗರ ಬಸ್ ಸ್ಟಾಪಲ್ಲಿ ಬಸ್ ಗೆ ಕಾಯ್ತಾ ಇದ್ದಾಗ ಅಚಾನಕ್ ಆಗಿ ಒಂದು ದೃಶ್ಯ ಕಣ್ಣಿಗೆ ಬಿತ್ತು.. ನಂಗೆ ಅದನ್ನ ನೋಡಿ ನಗುನೇ ಬಂದ್ಬಿಡ್ತು.. ಮ್ಯಾಟ್ರು ಸಿಂಪಲ್, ನಾನೇನು ನೋಡಬಾರದ್ದೇನು ನೋಡಿಲ್ಲಾ..! ನಾನು ನೋಡಿದ್ದಿಷ್ಟೇ, ಬಸ್ ಗೆ ಕಾಯ್ತಾ ಇರೋ ಕಾಲೇಜು ಹುಡುಗ ಮತ್ತು ಒಬ್ಬ ಹಿರಿಯರು ಒಟ್ಟಿಗೆ ಮಾತಾಡ್ತಾ ನಿಂತಿದ್ರು ಬಹುಷಃ ಸಂಬಂಧಿಗಳೇ ಅನ್ನಿಸುವ ಹೋಲಿಕೆ ಇತ್ತು. ಆದರೆ ನನ್ನ ಗಮನ ಸೆಳೆದದ್ದು ಮಾತ್ರ ಅವರ ಧರಿಸಿದ ದಿರಿಸು ಮತ್ತು ಚಹರೆ. ಆ ಅಂಕಲ್ಲು ಶೇವಿಂಗ್ ಮಾಡಿಸಿ, ಟಿಪ್ ಟಾಪ್ ಆಗಿ ಇನ್ ಶರ್ಟ್ ಮಾಡ್ಕೊಂಡು, ಪ್ಯಾಂಟ್ ನಾ ಹೊಟ್ಟೆಗೆ ಹಾಕಿಕೊಂಡು ಮೇಲೆ ಬೆಲ್ಟ್ ಇಂದ ಟೈಟ್ ಆಗಿ ಸುತ್ತ್ಕೊಂಡಿದ್ರೆ, ಆ ಹುಡುಗ ಗಿಡ್ಡ ಟೀ ಶರ್ಟ್ ಹಾಕ್ಕೊಂಡು ಬ್ಯಾಕ್ ಅಲ್ಲಿ ಗ್ಯಾಪ್ ಇಟ್ಗೊಂಡು ಒಂದು ಜೀನ್ಸ್ ಪ್ಯಾಂಟ್ ನಾ ಸಿಗಿಸ್ಕೊಂಡಿದ್ದ. ಪುಣ್ಯಕ್ಕೆ ಒಳ ಉಡುಪು ಧರಿಸಿದ್ದ ಆ ಮಹಾನುಭಾವನ ಪ್ಯಾಂಟ್ ಈಗಲೋ ಆಗಲೋ ಬೀಳೋ ತರ ನೇತಾಡ್ತಾ ಇತ್ತು. ಯಪ್ಪಾ ಅಂತ ಮಕಾ ನೋಡಿದ್ರೆ ಅರ್ಧ ಬಿಟ್ಟಿದ್ದ ಪ್ರೆಂಚ್ ಗಡ್ಡ, ಬಣ್ಣ ಹಾಕಿದ ಕೆಂಪು ಕೂದಲು, ಕಿವಿಗೊಂದು, ಹುಬ್ಬಿನ ಬಳಿಗೊಂದು ರಿಂಗು ಏನೇನು ಅಂತಾ ವರ್ಣಿಸಲಿ ಆ ಸೊಬಗನ್ನು ಪದಗಳೇ ಸಿಗ್ತಾ ಇಲ್ಲಾ..!
ಅವತ್ತೆಲ್ಲಾ ಹಾಗೆ ಅದರ ಬಗ್ಗೆನೇ ಯೋಚಿಸ್ತಿದ್ದೆ. ಕಾಲ ಬದಲಾಗ್ತಿದೆ ಅನ್ನೋ ನೆಪ ಕೊಟ್ಟು ಜನಗಳೆಲ್ಲಾ ಯಾಕೆ ಬದಲಾಗ್ತಾ ಇದ್ದಾರೆ? ಹಿರಿಯರ ಯೋಚನೆಗಳು ಯುವಕರಿಗೆ ಏಕೆ ಸಮ್ಮತವಾಗಲ್ಲ? ಇವರೂ ನಾಳೆ ಮುದುಕರು ಆದಾಗ ಇವರ ಇದೆ ಮಾತನ್ನ ಮುಂದಿನ ಯುವ ಜನಾಂಗ ಅಪ್ಪಿಕೊಳ್ಳುತ್ತ ? ಒಪ್ಪಿಕೊಳ್ಳುತ್ತಾ? ಜನ ನಮ್ಮವರೇ ಆದ್ರೂ ಭಾಷೆ ಕನ್ನಡಾನೇ ಆಗಿದ್ರೂ ಮಾತಾಡೋ ಸ್ಟೈಲು, ಯೋಚಿಸುವ ಕೆಪಾಸಿಟಿಲಿ ಹಿರಿಯರಿಗೂ ಯುವಕರಿಗೂ ವ್ಯತ್ಯಾಸ ಇದೆ ಯಾಕೆ?
ಮೊನ್ನೆ ನಮ್ಮ ಆಫೀಸಲ್ಲಿ ಯಾವ್ದೋ ಮಾತು ಬಂದಾಗ ನಮ್ಮ ಸಹೋದ್ಯೋಗಿ ಹಿರಿಯರೆಂದರು- '"ನನಗೆ ಐವತ್ತೈದು ವರ್ಷವಾಗಿದ್ರೂ ನಾನು ಯಾರಿಗೇನೂ ಕಮ್ಮಿ ಇಲ್ಲಾ",
ಆಗ ಅಲ್ಲೇ ಇದ್ದ ಯುವ ಮಿತ್ರ ಟಕ್ ಅಂತ ಪ್ರತಿ ಉತ್ತರಿಸಿದ- "ಹೌದು ಬಿಡಿ ಸರ್ ನೀವಿನ್ನು ಇಪ್ಪತ್ತೈದರ ಯುವಕರು ಜೊತೆಗೆ ಮೂವತ್ತು ವರ್ಷಗಳ ಅನುಭವ ಬೇರೇ..! ನೀವ್ ಯಾರಿಗೂ ಕಮ್ಮಿ ಇಲ್ಲಾ..!!"
ಇಬ್ರೂ ಒಂದೇ ವಿಷಯವನ್ನ ಹೇಳಿದರೂ ಯೋಚಿಸಿದ ಪರಿಯೇ ಬೇರೇ..! ಇಬ್ರೂ ಪಾಸಿಟಿವ್ ಆಗಿಯೇ ಹೇಳಿದ್ರೂ, ಅರ್ಥ ಒಂದೇ ಆಗಿದ್ರೂ, ವ್ಯಕ್ತ ಪಡಿಸಿದ ರೀತಿಯೇ ಬೇರೇ..! ಇದು ಉದಾಹರಣೆ ಅಷ್ಟೇ, ! ಬಹುತೇಕರಿಗೆ ಇದರ ಅನುಭವ ಆಗಿರಲಿಕ್ಕೂ ಸಾಕು.. ಎಷ್ಟೇ ಓದಿಕೊಂಡಿದ್ರೂ, ಬುದ್ದಿವಂತರಾಗಿದ್ರೂ ಇಂದಿನ ತಲೆಮಾರಿನ ಮಕ್ಕಳ ಮುಂದೆ ಸ್ಪಲ್ಪ ಸಪ್ಪೆಯೇ ಅನ್ನಿಸಿ ಬಿಡುತ್ತೇವೆ. ಆಗಿನ ಕಾಲಕ್ಕೂ ಈಗಿನ ವಿದ್ಯಮಾನಕ್ಕೂ ಬದಲಾವಣೆ ಬೀಸಿದ್ದರೂ ಸಹ ಅವು ಮನಸ್ಥಿತಿಯ ಮೇಲೆ ಹೇಗೆ ಪ್ರಭಾವ ಬಿರುತ್ತೆ ? ಏಕೆಂದರೆ ನಾವೀಗ ಹೇಳುವ ಮಾಡ್ರನ್ ಅನ್ನೋ ಪದ ದಿನದಿನಕ್ಕೂ ಬದಲಾಗುತ್ತಲೇ ಇದೆ.. ಇಂದಿನ ಮಾಡ್ರನ್ ನಾಳೆ ಒಲ್ದನ್ ಆಗೇ ಆಗುತ್ತೆ, ಆಗ್ಲೇ ಬೇಕು..!
ಹಿರಿಯರಿಗೂ ಯುವಕರಿಗೂ ಇಲ್ಲಿ ಇರೋ ವ್ಯತ್ಯಾಸ ಕೇವಲ ಒಂದೆರಡು ವಿಷಯದಲ್ಲಿಲ್ಲ., ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ವಿಚಾರಗಳಲ್ಲೂ ಇದ್ದಿದ್ದೆ..! ಅವರಿಗೆ ಇಷ್ಟವಾಗಿದ್ದು ಇವರಿಗೆ ಇಷ್ಟವಾಗಲ್ಲಾ.. ಅಂದಿಗೂ ಪ್ರೀತಿ ಪ್ರೇಮ ಎಲ್ಲಾ ಇತ್ತು, ಇಂದಿಗೂ ಇದೆ. ಆದ್ರೆ ಅಂದಿನ ಕಾಲವೇ ಸುಂದರ ಎನ್ನುವ ಹಿರಿಯರಿಗೆ, ಅಂದಿಂದೆನು ಇಲ್ಲಾ ಇಂದಿನದೇ ಎಲ್ಲಾ ಅನ್ನುವ ಯುವ ಜನ.. ಒಂಥರಾ ಶೀತಲ ಸಮರದ ಮಧ್ಯೆ ನಲುಗಿ ಹೋಗಿರುವ ಜೀವನ.. ಮನೆಮನೆಯಲ್ಲೂ ಹಿತವಚನ, ಅವರಿಂದ ಇವರಿಗೆ ಇವರಿಂದ ಅವರಿಗೆ..!
ಹೀಗೆ ಹಿಂದಿನ ಕಾರಣ ಕೆದುಕುತ್ತ ಹೋದಾಗ ಸಿಕ್ಕಿದ್ದೇ 'ಜೆನರೇಶನ್ ಗ್ಯಾಪ್' ಅನ್ನೋ ಅಭಿಪ್ರಾಯ. ಅದೇ ಕಂದಕ ನಮಗ್ಯಾರಿಗೂ ಅರಿವಾಗದೆ ಮನೆಮನೆಯಲ್ಲೂ ಮನಮನದಲ್ಲೂ ಮೂಡಿರೋದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಬಿಡಿ. ಬದಲಾವಣೆಗೆ ಒಗ್ಗಿಕೊಂಡಿರುವ ಮನ ಅದರ ಪರಿಣಾಮವನ್ನೂ ಸಹಿಸಿಕೊಳ್ಳಲೇ ಬೇಕಲ್ವ? ಇದರಿಂದ ಅಂತಹ ಗಂಭೀರ ತಲೆ ಹೋಗುವಂಥ ಮ್ಯಾಟರ್ ಇಲ್ದೆ ಇದ್ರೂ ಪರಸ್ಪರ ಈಗೋಗಳು ಸಾಯೋದಂತೂ ಪಕ್ಕಾ.! ಹಾಗಂತಾ ನೆಗ್ಲೆಕ್ಟ್ ಮಾಡೋಕೂ ಆಗದಂತಹ ಪರಿಸ್ಥಿತಿಯಲ್ಲಿ ನಾವೂ ನೀವೂ ಬದುಕುತ್ತಿದ್ದೇವೆ..! ಆ ಗ್ಯಾಪ್ ಅನ್ನೋ ಸೀಳನ್ನ ಹೊಂದಾಣಿಕೆ ಅನ್ನೋ ಸೀಲ್ ಇಂದ ಮುಚ್ಚಿದ್ರೆ ಮನಸ್ತಾಪ ಅನ್ನೋದನ್ನ ಮಕಾಡೆ ಮಲಗಿಸಬಹುದು ಅಂತ ನನಗೆ ಅನ್ನಿಸ್ತು, ಅದ್ಕೆ ಹಾಗೆ ತೋಚಿದ್ದು, ಹೀಗೇ ಗೀಚಿದೀನಿ..!

No comments:

Post a Comment