Tuesday 4 June 2013

               ಜೂನ್ 5 ಎಂಬ ವಿಶ್ವ ಪರಿಸರ (ಕರಕರ) ದಿನ

                ಒಮ್ಮೆ ಸುಮ್ನೆ ಊಹಿಸಿಕೊಳ್ಳಿ, 3030 ಇಸವಿಯದು. ಬ್ಲೂ-ಗ್ರೀನ್ ಕಾಂಬಿನೇಶನ್ ಅಲ್ಲಿದ್ದ ನಮ್ಮ ಭೂಮಿ ಆಗ ಬರೀ ಬೇಡದ ಗ್ಯಾಸ್ಗಳಿಂದ, ಬರೀ ಕೆಂಪು ಮಣ್ಣಿನಿಂದ ಧೂಳಿನಿಂದ ಆವೃತವಾದ ಬಹಳ ವರ್ಷಗಳ ನಂತರ ಕೆಸರಿನಲ್ಲಿ ಸಿಕ್ಕಿದ ಒಣಗಿದ ಮಣ್ಣಿನ ಟೆನ್ನಿಸ್ ಬಾಲ್ ತರ ಇರತ್ತೆ. ಪ್ರಾಣಿಗಳು ಅಂದರೆ ಏನೂ ಅಂತಲೇ ತಿಳಿಯದ ಬೆನ್ನಮೇಲೆ ಕಂಪಲ್ಸರೀ ಆಕ್ಸಿಜನ್ ಸಿಲೆಂಡರ್ ಸಿಕ್ಕಿಸಿಕೊಂಡ ಮಾಸ್ಕಧಾರಿ ಮಾನವರ ಜೀವನ ಇರತ್ತೆ. ಎಲ್ಲಾ ಕಡೆ ಕಾಂಕ್ರೀಟ್ ಕಾಡು ತುಂಬಿದ್ದು ನೆರಳು ಅಂದ್ರೆ, ನೀರಿನ ಮಳೆ ಅಂದ್ರೆ ಏನೂ ಅಂತಲೇ ತಿಳಿಯದ ನಿಮ್ಮ ಮುಂದಿನ ಜನಾಂಗ ಇರತ್ತೆ. ಕಣ್ಣುಗಳೆಲ್ಲಾ ಬರಗೆಟ್ಟು ಕಜಕಿಸ್ತಾನದ ಮರುಭೂಮಿ ತರ ಪಳಪಳ ಅಂತಿರುತ್ತೆ. ಈಗೆಲ್ಲಾ ಯೆರ್ರಾಬಿರ್ರಿ ತಿಂದು ದೈತ್ಯ ದೇಹ ಬೆಳೆಸಿದ ಮಾನವರೆಲ್ಲಾ ಆಗ ಅಂದಿನ ಅಜ್ಞಾನಿಗಳಿಗೆ, ಕ್ಷಮಿಸಿ ವಿಜ್ಞಾನಿಗಳಿಗೆ ಸಂಶೋಧನೆಯ ವಸ್ತುಗಳಾಗಿರುತ್ತೆ. ಎಲ್ಲಾ ಕಡೆ ಬಿಸಿ ಬಿಸಿ ಬಿಸಿ, ಆದರೂ ರೊಮ್ಯಾಂಟಿಕ್ ಹಾಟ್ ಕೆಲಸಗಳಿಗೆ ಅವಕಾಶ ಇಲ್ದೆ, ಬಟ್ಟೆ ಬರೆ ತೆಗಿಯಕ್ಕಾಗದೇ ಮಾನವರು ಮುಂದಿನ ತಮ್ಮ ತಲೆಮಾರು ಬೆಳೆಸಲು ತುಂಬಾನೇ ಕಷ್ಟಪಡಬೇಕಾಗುತ್ತೆ. ಇಂದಿನ ಸುಡಾನ್ ದೇಶದ ಶಕ್ತಿಹೀನ, ಕಳಾಹೀನ, ಮಾಂಸವಿಲ್ಲದ ಬರೀ ಬ್ಲಾಕ್ ಸ್ಕಿನ್ ಲೆಯರ್ಡ್ ಬ್ಯೂಟಿಗಳೇ ವಿಶ್ವದ ಎಲ್ಲಾಕಡೆ ಇದ್ದರೆ ಹೇಗಿರುತ್ತೆ. ಫ್ಯಾಷನ್ ಷೋಗಳಲ್ಲಿ ಮಾಡೆಲ್ಗಳು ಎಕ್ಸಪೋಸಿಗೆ ಅಂತ ಬರೀ ಟ್ರಾನ್ಸಪರೆಂಟ್ ಕೂಲಿಂಗ್ ಡ್ರೆಸ್ ಹಾಕ್ಕೊಂಡು ರ್ಯಾಂಪ್ ಮೇಲೆ ನಡೀತಾ ಇದ್ರೆ ಅದನ್ನು ನೋಡುವ ನಮ್ಮ ಅಂದಿನ ಪ್ರಜೆಗಳ ರಸಿಕ ಕಣ್ಣು, ತಲೆಗಳು  ಎಷ್ಟು ಪಾಪ ಮಾಡಿರಬಹುದು ಅಂತ ಹಾಗೆ ಒಮ್ಮೆ ಯೋಚಿಸಿ. ಇನ್ನೂ ಹೀಗೆ ಮುಂದಿನ ಭವಿಷ್ಯದ ಬಗ್ಗೆ ಹೇಳುತ್ತಾ ಹೋದರೆ ಒದುತ್ತಿರುವ ನಿಮ್ಮ ಕಣ್ಣುಗಳು ಮತ್ತು ತಲೆಯೊಳಗಿನ ಮಿದುಳು ಸೈನೆಡ್ ತಿಂದು ಸೂಸೈಡ್ ಮಾಡಿಕೊಳ್ಳುವ ಸಂಭವವಿದ್ದು ಆದ್ದರಿಂದ ಒಮ್ಮೆ ನಿಮ್ಮ ಊಹಾ ಲೋಕದಿಂದ ಈಗಿನ 2013ಕ್ಕೆ ವಾಪಸ್ ಬನ್ನಿ.
                          ಅಯ್ಯೋ ಆಗ್ಲಿಂದ ಇಷ್ಟೆಲ್ಲಾ ಮಾತಾಡ್ತಾ ಇರೋ ನಾನು ಯಾರು ಅಂತಲೇ ನಿಮಗೆ ಹೇಳಿಲ್ಲ ಅಲ್ವ. ನಾನೊಂದು ಮರ,..!! ಮನುಷ್ಯರೇ ನೀವೇ ನನಗೊಂದು ಏನೇನೋ ಹೆಸರಿಟ್ಟಿದೀರಾ..! ವೈಜ್ಞಾನಿಕ ಹೆಸರಂತೆ, ಆಡುಭಾಷೆಯ ಹೆಸರಂತೆ ಹೀಗೆ, ನನಗೆ ಬಾಯಿ ಇದ್ರೆ ಕೇಳಿ ಕಂಫರ್ಮ್  ಮಾಡ್ಕೋತಾ ಇದ್ದೆ, ಏನು ಮಾಡದು? ಗಾಡು ನಂಗೆ ಯೋಚಿಸುವ ಮನಸ್ಸು ಕೊಟ್ಟ ಆದರೆ ಬಾಯೇ ಕೊಟ್ಟಿಲ್ಲ ನಾನು ಕಳೆದ ಸುಮಾರು 2000ವರ್ಷಗಳಿಂದ ಇಲ್ಲೇ ನಿಮ್ಮ ಸ್ಯಾಂಕಿಟ್ಯಾಂಕಿಯ ದಿಬ್ಬದ ಮೇಲೆ ಒಂಟಿಕಾಲಲ್ಲಿ ಬೇರು ಬಿಟ್ಟುಕೊಂಡು ನಿಂತಿದ್ದಿನಿ. ನಿಮ್ಮ ಜನಾಂಗದ ಎಷ್ಟೆಷ್ಟೋ ಜನರನ್ನ ನೋಡಿ ಬಿಟ್ಟಿದೀನಿ. ಆಗೆಲ್ಲ ನಾನು ನೋಡುವಷ್ಟು ದೂರವೂ ನಮ್ಮ ವಂಶಜರೇ ಇಲ್ಲೆಲ್ಲಾ  ಕಾಣಸಿಗುತ್ತಿದ್ದರು. ದುರಂತ ನೋಡಿ ಈಗ ಇಲ್ಲಿ ನಾನೊಬ್ಬಳೆ ಜಂಟಿಯಿಲ್ಲದೆ ಒಂಟಿಯಾಗಿ ಆಗಾಗ ಮನುಷ್ಯರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಕೊಡಲಿ ಏಟು ತಿಂದು ಅರೆಜೀವವಾಗಿ ಸಲದ ಮಳೆಗಾಲದ ಜೋರುಮಳೆಗೆ ಬುಡಸಮೇತ ಬೀಳುವ ದಿನಕ್ಕೆ ಎದುರು ನೋಡ್ತಾ ಇದೀನಿ. ಆಗಿನ ಕಾಲ ನಮ್ಮ ವಿಜೃಂಭಣೆಯ ಉತ್ತುಂಗದ ಕಾಲವದು. ಎಲ್ಲೆಲ್ಲೂ ನಮ್ಮವರೇ.! ಹಚ್ಚಹಸಿರು ಪರಿಸರ, ಪ್ರಾಣಿಪಕ್ಷಿಗಳ ಜೊತೆ ನಮ್ಮ ಅನ್ಯೋನ್ಯ ಜೀವನ, ಜೊತೆಗೆ ಆಗಾಗ ಸೀಜನ್ನಿಗೆ ಸರಿಯಾಗಿ ಬೀಳುತ್ತಿದ್ದ ದಂಡಿ ದಂಡಿ ಮಳೇ, ಜೊತೆಗೆ ಎಲ್ಲರಿಗೂ ಉಪಯೋಗಕಾರಿಯಾಗಿ ಜೀವಿಸುತ್ತಿದ್ದ ನಮ್ಮ ವಂಶಜರು, ಈಗ ಬರೀ ನನ್ನ ನೆನಪಷ್ಟೇ..!! ನಾನೂ ಈಗಲೋ ಆಗಲೋ ಅನ್ನುತ್ತಾ ದಿನ ಎಣಿಸುತ್ತಾ ಇದ್ದರೂ ನಮ್ಮ ಕಣ್ಣು ಮುಂದೆಯೇ ಬೆಳೆದು ನಮ್ಮ ಬುಡಕ್ಕೇ ಪರಶುರಾಮನ ಆಯುಧವಿಟ್ಟ ಮನುಷ್ಯರ ಬಗ್ಗೆ ನನಗೆ ಸಿಟ್ಟಿಲ್ಲ, ನಮ್ಮ ಒಡನಾಡಿಯಾಗಿದ್ದ ಜಲ ಪರಿಸರ ಇವನ್ನೆಲ್ಲಾ ಹಾಳುಮಾಡಿದ ಹಾಳುಮಾಡುತ್ತಿರುವ ಬಗ್ಗೆ ಆಕ್ರೋಶವಿಲ್ಲ,, ಬದಲಾಗಿ ಅನುಕಂಪವಿದೆ. ರಿಯಲೀ ಪಿಟಿಯು..!! :(
                            ಅದೇನೋ ವರ್ಷವರ್ಷ ಮನುಜರು ನಮ್ಮ ದಿನ ಅಂತ ಜೂನ್ 5ಕ್ಕೆ ಪರಿಸರ ದಿನ ಆಚರಿಸುತ್ತಾರೆ. ಪ್ರಶಸ್ತಿಗಾಗೋ, ಪ್ರತಿಷ್ಠೆಗಾಗೋ ಎಲ್ಲಾ ಕಡೆಯಿಂದಲೂ ಹುಡುಕಿ ತಡಕಿ ಒಂದಿಷ್ಟು ನಮ್ಮ ಪೀಳಿಘೆಯ ಸಸಿಗಳನ್ನು ತಂದು ನೆಡುತ್ತಾರೆ. ಜೋರು ಭಾಷಣ, ಚಪ್ಪಾಳೆಯ ರಿಂಗಣ. ಸಿಹಿ ಹಂಚಿಕೊಂಡು ನಂತರ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಮಕಾ ಮುಚ್ಚಿಕೊಂಡು ಎಲ್ಲೆಲ್ಲೋ ಚದುರಿಹೋಗುತ್ತಿರುವುದನ್ನ ನಾನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇನೆ. ಎಲ್ಲರಿಗೂ ನಮ್ಮ ಬಗ್ಗೆ ಕಳಕಳಿಯಿದೆ. ಆದರೆ ಸಮಯದ್ದೇ ಸಮಸ್ಯೆ ಅಂತೆ, ಮೇಲಾಗಿ ಎನೇನೋ ಕಾರಣಗಳಿಗಾಗಿ ನಮ್ಮನ್ನೆಲ್ಲಾ ಕಡಿಯುವುದು ಅನಿವಾರ್ಯವಂತೆ. ನಮ್ಮನ್ನು ಕಡಿಯುವುದರ ಬಗ್ಗೆ ಆಕ್ಷೇಪವಿಲ್ಲ. ಇದರಿಂದ ಅವರ ಜೀವನಕ್ಕೇ ಅವರೇ ಕೊಕ್ಕೆ ಹಾಕಿಕೊಳ್ಳುವುದ ನೋಡಿದರೆ ನಿಜಕ್ಕೂ ನನಗೆ ಖೇದವಾಗುತ್ತಿದೆ. ನನ್ನ ಪ್ರಶ್ನೆ ಇಷ್ಟೇ, ಪರಿಸರ ದಿನವೇಕೇ ಒಂದೇ ದಿನಕ್ಕೆ ಸೀಮಿತವಾಗಿರುವುದು? ಎಲ್ಲೋ ಮಾಡುವ ಬರೀ ಭಾಷಣಗಳಿಂದ, ಅಲ್ಲೇಲ್ಲೋ ಮೂಲೆಯಲ್ಲಿ ಕೂತು ನೀವು ಬರೆವ ಲೇಖನಗಳಿಂದ ಪರಿಸರ ಸುಧಾರಣೆ ಎಷ್ಟರ ಮಟ್ಟಿಗೆ ಇಲ್ಲಿಯವರೆಗೆ ಸಾಧ್ಯವಾಗಿದೆ?? ನಮ್ಮಂತ ಮರಗಳ ಮಾರಣಹೋಮ ಏಕೆ ಇನ್ನೂ ನಿಂತಿಲ್ಲ.??? ಬುದ್ದಿಜೀವಿ ಅನ್ನಿಸಿಕೊಂಡು ಏನೇನೋ ಮಾಡುವ, ಸಾಧಿಸುವ ಮನುಷ್ಯರೇ ಹೀಗಾಡುತ್ತಿರುವುದು ನಿಜವಾಗಿಯೂ ದುರಂತವೇ ಸರಿ.!! ಅವರ ಅವಸಾನ ಅವರ ಕೈಯಲ್ಲೇ ಇದ್ದರೂ ಅರಿಯದ ಮೂರ್ಖರಾದರೇನೋ ಅನ್ನುವ ದಿಗಿಲು ನನಗೆ ಕಾಡಲಾರಂಭಿಸಿದೆ. ನನಗೆ ಬಾಯಿಯಿಲ್ಲ, ನನ್ನ ಕಷ್ಟಗಳು ಹೀಗೇ, ಬರೀ ಯೋಚಿಸಿ ಯೋಚಿಸಿ ಒಮ್ಮೊಮ್ಮೆ ಗೊಳೋ ಎಂದು ಗೋಳಾಡಿ ನನ್ನ ಕೋನೆ ದಿನಗಳನ್ನು ಎಣಿಸುತ್ತಿರುವೆ. ಈಗಲೂ ಕಾಲ ಮೀರಿಲ್ಲ, ಸರಿಯಾದ ದಿಸೆಯಲ್ಲಿ ಮುನ್ನುಗ್ಗಿ ಪರಿಸರ ರಕ್ಷಣೆಯ ಹೊಣೆ ಹೊತ್ತ ಮನುಜರು ನಿಷ್ಕಲ್ಮಶವಾಗಿ ಅವರ ಜವಾಬ್ದಾರಿ ನಿಭಾಯಿಸಿದರೆ ಅವರೂ ಅವರ ಮುಂದಿನ ಮಕ್ಕಳೂ, ನಮ್ಮ ಪರಿಸರವೂ ಮತ್ತೆ ಅನ್ಯೋನ್ಯವಾಗಿ ಜೀವಿಸುವಂತಾಗಲಿ ಎಂದು ನಾನು ನೊಂದ ಹೃದಯದಿಂದ ಬಯಸುತ್ತಿದ್ದೇನೆ.
                             ಮತ್ತೊಮ್ಮೆ ಇಂದು ಇಂದು ಜೂನ್ 5 ವಿಶ್ವ ಪರಿಸರ ದಿನ ಬಂದಿದೆ. ತರಾರುರಿಯಲ್ಲಿ ಹೇಗೋ ಏನೋ ಕರಕರವೆಂದು ಆಚರಿಸುವ ಬದಲು, ನೂರು ಹೊಸ ಸಸಿಗಳನ್ನು ನೆಟ್ಟು ನಂತರದ ನಿನಗಳಲ್ಲಿ ಅದನ್ನ ಒಣಗಿಸುವುದ ಬಿಟ್ಟು, ನೆಡುವ ಹತ್ತೇ ಸಸಿಯಾಗಿದ್ದರೂ ಅದು ಬೆಳೆಯುವಂತೆ ನೋಡಿಕೊಳ್ಳಿ, ಮರ ಕಡಿಯುವ ಬದಲು ಬೇರೆ ಪರ್ಯಾಯ  ಮಾರ್ಗವನ್ನು ಅರಸಿಕೊಳ್ಳಿ ಇದೇ ನೀವು ಪರಿಸರ ದಿನದಂದು ನೀವು ನನಗೆ ಕೊಡಬಹುದಾದ, ನಾನು ಬಯಸುವ ಉಡುಗೊರೆ..!! 


No comments:

Post a Comment