Tuesday 16 July 2013

ಮ್ಯಾನರ್ಸ್ ಇಲ್ಲದ ನಾನ್ಸೆನ್ಸ್ ಕುಡುಕರು!!

ಆಗ ಸಮಯ ರಾತ್ರಿ ಸುಮಾರು ಒಂಭತ್ತೂವರೆ. ಆಫಿಸಲ್ಲಿ ತುಂಬಾ ಕೆಲಸವಿದ್ದರಿಂದ ಮನೆಗೆ ಹೊರಡೋದು ಲೇಟಾಯ್ತು. ಅಂದು ಭಾನುವಾರವಾದ್ದರಿಂದ ಬಸ್ಸುಗಳು ಬೇರೇ ವಿರಳವಾಗಿತ್ತು. ಇನ್ನೂ ಎಷ್ಟೊತ್ತು ಕಾಯಬೇಕಾಗತ್ತೋ ಅನ್ನುವ ಅನುಮಾನದಿಂದ ವಿಜಯನಗರದ ಬಿಎಂಟಿಸಿ ಬಸ್ ಸ್ಟಾಪಿನಲ್ಲಿ ಬಸ್ಸಿಗೆ ಕಾಯುತ್ತಾ ನಿಂತೆ. ಕಾದಿದ್ದೇ ಕಾದಿದ್ದು ಸುಮಾರು ಇಪ್ಪತ್ತು ನಿಮಿಷಗಳಾದ್ರೂ ಯಶವಂತಪುರದ ಕಡೆಗೆ ಹೋಗುವ ಯಾವುದೇ ಬಸ್ಸು ಬರಲಿಲ್ಲ, ಅಲ್ಲಿಯೇ ಇದ್ದ ಆಟೋ ರೇಟು ಕೇಳಿ ನನ್ನ ಬಾಯಿಂದ ಬೆಂಕಿಬರುವುದೊಂದು ಬಾಕಿ. ಆ ಪಾಟಿ ಅವರ ರೇಟಿನ ಘಾಟಿ, ಮಾತಿನ ದಾಟಿ. ರಾತ್ರಿ ಆಗುತ್ತಿದ್ದಂತೆ, ಹೆಚ್ಚು ದುಡ್ಡು ಕೀಳುವುದರಲ್ಲೇ ಅವರ ಪೈಪೋಟಿ. ಹೊಟ್ಟೆ ಬೇರೆ ಹಸಿಯುತ್ತಿತ್ತು, ಆದರೆ ಅಲ್ಲಿ ತಿನ್ನಲೂ ಸರಿಯಾಗಿ ಏನೂ ಸಿಗದೇ ಇದ್ದದ್ದು, ನನ್ನ ಅಂದಿನ ದಿನದ ದುರಂತ. ಬಸ್ಸಿಗೆ ಕಾಯುತ್ತಾ ನಿಂತವರಲ್ಲಿ ನಾನೊಬ್ಬನೇ ಏನೂ ಅಲ್ಲ, ಗಂಡಸರು ಮುದುಕರು ಯುವಕರಾದಿಯಾಗಿ ಮಹಿಳೆಯರೂ ಕೂಡಾ ಇದ್ದರು. ಕೆಲ ಸುಂದರ ಯುವತಿಯರೂ ಇದ್ದರು.

ಸಮಯ ಯಾರಿಗೂ ಕಾಯದೇ ತನ್ನ ಕಾಯಕ ಮಾಡುತ್ತಲೇ ಇತ್ತು. ಜನಗಳೂ ಪಯರ್ಾಯ ಮಾರ್ಗಹಿಡಿದು ತಮ್ಮ ಮನೆ ಕಡೆ ಆಟೋ ಮುಖಾಂತರವೋ, ಕ್ಯಾಬ್ಗಳನ್ನು ಹಿಡಿದೋ ತಮ್ಮ ತಮ್ಮ ಮನೆ ಕಡೆ ದೌಡಾಯಿಸಲು ತವಕಿಸುತ್ತಿದ್ದರು. ಒಂದು ಕಡೆ ನಮ್ಮ ಬಸ್ಸು ಬರದೇ, ಬೇರೆ ಬೇರೆ ಮಾರ್ಗದ ಬಸ್ಸು ಬರುತ್ತಿದ್ದದ್ದು ನೋಡಿ ನನ್ನ ಹೊಟ್ಟೆಯಲ್ಲಿ ಚಿತ್ರಾನ್ನ ಕಲಸಿದಂತೇ ಅನಿಸಹತ್ತಿದರ,ೆ ಇನ್ನೊಂದೆಡೆ ಬಸ್ ಸ್ಟಾಪಿನಲ್ಲಿ ನಿಂತಿದ್ದ ಜನರ ಗುಂಪು ನಿಧಾನವಾಗಿ ಕರಗುತ್ತಿರುವುದ ನೋಡಿ ಮತ್ತಷ್ಟು ಬೇಸರವಾಗತೊಡಗಿತು. ಅಂತೂ ಇಂತೂ ನನ್ನ ಪೂರ್ವಜನ್ಮದ ಪುಣ್ಯದ ಫಲವೋ ಏನೋ ಎಂಬಂತೆ ಊರೆಲ್ಲಾ ಸುತ್ತಿ ಬಸವಳಿದು ಡೀಪೋ ಹಾದಿ ಹಿಡಿದಿದ್ದ ನಮ್ಮ ಮನೆ ರೂಟಿನ ಬಸ್ಸಂತೂ ಬಂತು. ರಾತ್ರಿಯಾಗಿದ್ದರಿಂದ ಸೀಟಿಗೇನೂ ಕಷ್ಟವಾಗಿರಲಿಲ್ಲ. ಇನ್ನು ಎಲ್ಲಾ ನಿರಾಳ ಅರಾಮವಾಗಿ ಮನೆ ಸೇರಿ ಊಟ ಮಾಡಿ ಪಾಚ್ಕೋಬೇಕು ಅಂತ ಯೋಚಿಸುತ್ತಿದ್ದಾಗಲೇ ಸುರುವಾಗಿದ್ದು ನಿಜವಾದ ಕಷ್ಟ..!!

ಸೀಟ್ ಏನೋ ಸಿಕ್ತು. ಆದರೆ ಆ ಬಸ್ಸಿನಲ್ಲಿ ಬಹುಪಾಲು ಗಂಡಸರೇ ಇದ್ದಿದ್ದು ಅವರಲ್ಲಿ ಮುಕ್ಕಾಲು ಮಂದಿ ಯಾವುದೋ ರಾಜಕೀಯ ಮಂದಿಯ ಭರ್ಜರಿ ಸಮಾವೇಷ ಮುಗಿಸಿ, ಸೇಂಧಿ ಸಮಾರಾಧನೆಯ ನಶೆಯಲ್ಲಿ ತೇಲುತ್ತಿದ್ದದ್ದು ವಿಶೇಷವಾಗಿತ್ತು. ಅಲ್ಲಿ ತುಂಬಿ ತುಳುಕಾಡುತ್ತಿದ್ದ ಆ ಘಮಘಮ(?), ಎಣ್ಣೆ ವಾಸನೆಗೆ ನನ್ನ ಮೂಗೇ ಕಿತ್ತುಕೊಂಡು ಪಾತಾಳ ಸೇರುವುದೇನೋ ಅನ್ನುವಷ್ಟರ ಮಟ್ಟಿಗೆ ಮೂಗು ಗೋಳಾಡಲಾರಂಭಿಸಿತು. ಇದು ಸಾಲದೆಂಬಂತೆ ಅವರ ಆ ಕಿತ್ತೋದ ಸಂಭಾಷಣೆಗಳು, ಹೈ ಡೆಸಿಬಲ್ನ ಸುಂದರ ಬೈಗುಳಗಳು, ಕೇಳಿ ಕಕ್ಕಾಬಿಕ್ಕಿಯಾಗಿ ಮೂಗು ಮುಚ್ಚಿಕೊಂಡು ಕುಂತಿದ್ದೆ. ನನ್ನ ಕಥೆಯೇ ಹೀಗಿರುವಾಗ ಪಾಪ ಬಸ್ಸಿನಲ್ಲಿದ್ದ ಏಳೆಂಟು ಮಹಿಳೆಯರ ಗತಿ ಹೇಗಾಗಿರಬೇಡ? ಮೊದಲೇ ಅಲ್ಲಿದ್ದ ಬಹುಸಂಖ್ಯಾತ ಕುಡುಕರ ಸೆನ್ಸರ್ಲೆಸ್ ಮಾತುಗಳು, ಉದರದ ಕೆಳಗಿನ ಬೈಗುಳದ ಭಾಷೆಗಳು, ಬಾಯಿ ತೆಗೆದರೆ ಕೆಂಗೇರಿ ಮೋರಿಯನ್ನೇ ಅಪೋಶನ ತೆಗೆದುಕೊಂಡಂತಹ ನಾಥ, ದುರ್-ನಾತ. ವಾಕರಿಕೆಯಿಂದ ವಾಮಿಟ್ ಮಾಡೋಣವೆಂದರೆ ಊಟ ಬೇರೆ ಮಾಡಿರಲಿಲ್ಲ, ಹಾಳಾದ್ದು ಅದು ಕೂಡಾ ಬರಲಿಲ್ಲ. ಸಾಲದ್ದಕ್ಕೆ ಒಂದಿಬ್ಬರ ಚೈನಾ ಸೆಟ್ ಮೊಬೈಲ್ನ ಬೇರೆಬೇರೆ ತರದ ಇತ್ತೀಚಿನ ದಿನಗಳ ಕನ್ನಡ ಹಾಡುಗಳು ಬೇರೆ.! ಕೊನೆಗೆ ಅವರಲ್ಲಿ ಕೆಲವರು ಕುಂತಿದ್ದು ಹುಡುಕಿ ಹುಡುಕಿ ಲೇಡೀಜ್ ಸೀಟನಲ್ಲೇ..!! ಇವೆಲ್ಲವುಗಳ ಮಧ್ಯೆಯೇ ರಾತ್ರಿ ಕೊನೇ ಪಾಳಿ ಮುಗಿಸಿ ಮನೆಗೆ ಹೋಗುವ ಆತುರದಲ್ಲಿದ್ದ ಲೇಡಿ ಕಂಡಕ್ಟರ್ ನಮ್ಮ ಬಸ್ ನಿವರ್ಾಹಕಿ,,! ಇದನ್ನ ನೋಡಿ ನನ್ನ ಕರುಳು ಕಿತ್ತು ಬಂದಂತೆ ಆದರೂ ಸಹಿಸಿಕೊಂಡು ಕುಂತಿದ್ದೆ (ಬೇರೆ ವಿಧಿ ಇಲ್ಲದೆ).

ಕುಡುಕರತ್ರ ವಾದ ಮಾಡೋದು ನಮ್ಮ ಮೂಗಿಗೆ ಎಫೆಕ್ಟು. ಏನಾದರೂ ಹೇಳಿದರೆ ತಲೆಗೆ ಎಫೆಕ್ಟು. ಹಿಂಗಂದುಕೊಂಡೇ ಟೈಟ್ ಆಗಿಲ್ಲದ ನನ್ನಂತ ಕೆಲವರು ಸಹಿಸಿಕೊಂಡು ಮೂಕಪ್ರೇಕ್ಷಕರಾಗಿದ್ದೆವು. ಅತ್ಲಾಗೆ ಟೈಟ್ ಆಗಿರೋ ಈ ಕುಡುಕರನ್ನ ನೋಡಬೇಕೋ ಅಥವಾ ಲೂಜ್ ಲೂಜ್ ಚೂಡಿ ಹಾಕಿದ್ದ ಅಸಹಾಯಕಿ ಲೇಡಿ ಕಂಡಕ್ಟರ್ ನೋಡಬೇಕೋ ತಿಳಿಯಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವೆಲ್ಲರೂ ಅಸಹಾಯಕರೇ.. ಯಾಕಂದ್ರೆ ಇಂತಹ ಸನ್ನಿವೇಶದಲ್ಲಿ ಅಂತಹ ಕುಡುಕ ಹುಚ್ಚುಮಕ್ಕಳಿಗೆ ಕಡಿವಾಣ ಹಾಕಬೇಕಾಗಿರುವುದು ಯಾರು? ಕುಡಿದು ಸಾರ್ವಜನಿಕ ಸಾರಿಗೆ ಹತ್ತಬಾರದೆಂದೂ ಕಾನೂನೇನಾದರೂ ಇದೆಯೇ?? ಬಸ್ಸಿನಲ್ಲಿ ಗಬ್ಬೆಬ್ಬಿಸುವವರ ವಿರುದ್ದ ದೂರುಕೊಡಬಹುದೇ? ಅಥವಾ ನಿವರ್ಾಹಕರಿಗೆ ಅವರನ್ನು ಬಸ್ಸಿಂದ ಇಳಿಸುವ ಅಧಿಕಾರವಿದೆಯೆ?? ಇಂತಹ ಪರಿಸ್ಥಿತಿಯಲ್ಲಿ ಪುರುಷರಿಗಿಂತಲೂ ಮಾನಸಿಕವಾಗಿ ಬಹಳ ಶéೋಣೆಗೆ ಒಳಗಾಗುತ್ತಿರುವುದು ಮಹಿಳೆಯರು. ಇದಕ್ಕೇನೂ ಕಡಿವಾಣವಿಲ್ಲವೇ??ಮಹಿಳಾ ಪರ ಮಾತನಾಡುವ ಹಲವರಿಗೆ ಇಂತಹ ಚಿಕ್ಕಪುಟ್ಟ ಕಿರಿಕಿರಿಗಳು ಸಮಸ್ಯೆಯೇ ಅಲ್ಲ. ರಾತ್ರಿ ಸಮಯದಲ್ಲಿ ಬಸ್ಸಿನಲ್ಲಿ ಆಗುತ್ತಿರುವ ಈ ಕುಡುಕರ ಹಾವಳಿಗೆ ಮಿತಿಯೇ ಇಲ್ಲ. ಅದೇನೇ ಇರಲಿ ಈ ಸಮಸ್ಯೆಗೆ ಇತ್ಯರ್ಥಕ್ಕೆ ಸಂಬಂಧಪಟ್ಟವರು ಕೊಂಚಗಮನ ಹರಿಸಿ ಮಹಿಳೆಯರ ಈ ಕ್ಲೇಷಕ್ಕೆ ಇತಿಶ್ರೀ ಹಾಡಬೇಕೆಂದು ತೊಂದರೆಗೆ ಒಳಗಾದ, ಒಳಗಾಗುತ್ತಿರುವ ನಗರದ ಸಮಸ್ತ ಮಹಿಳಾಮಣಿಗಳ ಪರವಾಗಿ ಕೇಳಿಕೊಳ್ಳುತ್ತೇನೆ......!

-- ಫ್ಲಾಪಿ ಬಾಯ್


1 comment:

  1. ನಿಮ್ಮ ಪ್ಲಾಪೀ ಕಥೆಗಳಿಗೆ ವಿಶೇಷ ಅರ್ಥವುಂಟು.ಬದುಕಿನ ವಾಸ್ತವ ಸತ್ಯಗಳನ್ನು ಅನಾವರಣಗೊಳೀಸುತ್ತಾ ಜಾಗೃತಿ,ಎಚ್ಚರವನ್ನುಂಟು ಮಾಡುತ್ತವೆ.ಇದಕ್ಕಾಗಿ ನಿಮಗೆ ವಿಶೇಷ ಅಭಿನಂದನೆಗಳು.ತಪ್ಪದೇ ಓದುತ್ತಿರುತ್ತೇನೆ.

    ReplyDelete