Saturday 6 April 2013


ಮುದೀ ಯುವಕರು ....

ಮೊನ್ನೆ ಇಂಡಿಯ- ಆಸ್ಟ್ರೇಲಿಯ ಮ್ಯಾಚ್ ಅಲ್ಲಿ ನಮ್ಮವರು ಗೆಲ್ಲೋದನ್ನ ನೋಡ್ತಾ ಕೂತಿದ್ದೆ. ಅಷ್ಟರಲ್ಲಿ ನನ್ ಫ್ರೆಂಡ್ ಪುಡಾರಿ ಬಂದ. ಅವನ ನಿಜವಾದ ಹೆಸರು ಪುಂಡರೀಕ ಅಂತ.. ಓದೋದನ್ನ ಮೊಟಕುಗೊಳಿಸಿ ರಾಜಕೀಯ ಪಾಲ್ಟೀ, ಸಂಘಟನೆ, ಅದು ಇದು ಅಂತ ಏನೇನೋ ವ್ಯವಹಾರ ಮಾಡ್ತಾ ಕೆಲವು ರಾಜಕೀಯ ವ್ಯಕ್ತಿಗಳಿಗೆ ಬಕೇಟು ಹಿಡ್ಕೊಂಡು ಹೆಂಗೋ ಬದ್ಕಿದ್ದ. ಹಳೇ ಗೆಳೆಯ ಮೇಲಾಗಿ ರಾಜಕೀಯ ಸಾವಾಸ ಬೇರೇ, ಆದ್ರಿಂದ ನಮ್ಮೆಲ್ಲರ ಬಾಯಲ್ಲಿ ಅವನ ಹೆಸರು ಪುಂಡರೀಕನ ಬದಲಾಗಿ ಶಾರ್ಟ್ ಅಂಡ್ ಸ್ವೀಟ್ ಆಗಿ ಪುಡಾರಿ ಆಗೊಗಿದ್ದ. ಆ ಪುಡಾರಿ ಯಾವ ಗಳಿಗೇಲಿ ಕಾಲಿಟ್ನೋ ಅವಾಗ್ಲೇ ನಮ್ 'ಕ್ರಿಕೆಟ್ ಗಾಡು' ಒಂದು ರನ್ನಿಗೆ ಔಟಾಗಿ ಬಿಟ್ರು. ಛೇ ಅಂತ ನಾನು ಬೇಜಾರ್ ಮಾಡಿಕೊಂಡಿದ್ರೆ,
ಅತ್ಲಾಗೆ ಪುಡಾರಿದು ಸುರು ಆತು " ಥೋ ಇನ್ನು ವಯಸ್ಸಾಗಿರೋ ಮುದುಕರನ್ನ ಯಾಕಾದ್ರೂ ಆಡಿಸ್ತಾರೋ? ಸುಮ್ನೇ ಮನೇಲಿ ಕೂರಿಸಿ ಹೊಸ ಯುವಕರನ್ನ ಹಾಕ್ಕೊಬಾರ್ದ?? ಅವರಂತೂ ವಯಸ್ಸು ನಲವತ್ತಾದ್ರೂ ಆಡೋದು ಬಿಡಲ್ಲ. ಥೋ ಯಾರು ಹೇಳ್ಬೇಕಪ್ಪಾ ಇವರಿಗೆಲ್ಲಾ? ಅವರವರೇ ತಿಳ್ಕೊಂಡು ರಿಟೈರ್ಮೆಂಟ್ ತಗೋಬೇಕಿತ್ತು. ನಮ್ ದೇಶದ ಕತೆನೇ ಇಷ್ಟು..." ಅಂತ ಇನ್ನೂ ಮಾತು ನಿಲ್ಲಿಸಿರಲಿಲ್ಲಾ, ಅಷ್ಟರಲ್ಲೇ ನನಗೆ ಉರಿದೊಯ್ತು, ಮೊದ್ಲೇ ನಮ್ ಕ್ರಿಕೆಟ್ಟೇ ನನ್ ಧರ್ಮ, ಸಚಿನೇ ದೇವ್ರು ಅಂತ ಸಿರಿಯಸ್ ಆಗಿ ಆಟ ನೋಡ್ತಾ ಇದ್ರೆ, ಔಟ್ ಆಗಿರೋದನ್ನ ಹಿಯಾಳಿಸಿದ್ದೂ ಅಲ್ದೆ ನಮ್ ದೇವರಿಗೆ ರಿಟೈರ್ ಆಗೋಕೆ ಗೊತ್ತಾಗಲ್ಲ, 'ಮುದುಕಾ' ಅಂದಿದ್ದೂ ನನ್ನನ್ನೂ ಇನ್ನೂ ಕೆರಳಿಸಿತು.
"ಮಗಾ ಪುಡಾರಿ, ನಿಂಗೆ ಏನು ಗೊತ್ತು ಅಂತ ಹಲವಾರು ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೇವರ ಬಗ್ಗೆ ಹೀಗೆ ಇಲ್ಲ ಸಲ್ಲದ ಕಾಮೆಂಟ್ ಹೇಳೋದು? ಮುವ್ವತ್ತೊಂಬತ್ತು ವರ್ಷದ ಸಚಿನ್ ಮುದುಕಾ ಅಂತಾದ್ರೆ ನಲವತ್ತೊಂದರ ನಿಮ್ಮ ರಾಜಕೀಯ ವ್ಯಕ್ತಿ ಕೇಂದ್ರ ಮಟ್ಟದಲ್ಲಿ ನಿಮ್ ಪಾರ್ಟೀ ಯುವಕರ ಅಧ್ಯಕ್ಷಾನ ? ಅದು ಬೇಡಾ ನಲವತ್ತೈದರ ವ್ಯಕ್ತಿ ರಾಜ್ಯ ಮಟ್ಟದಲ್ಲಿ, ನಾನೇ ಯುವಕರ ಪ್ರತಿನಿಧಿ.. ಯುವಕರೇ ಒಂದಾಗಿ ನನ್ನ ಗೆಲ್ಲಿಸಿ ಅಂತೆಲ್ಲ ಭಾಷಣ ಮಾಡ್ತಾರಲ್ಲ ಅವರೆಲ್ಲ ಮುದುಕರಲ್ವ? ೪೦-೪೫ ಅವ್ರೇ ಯುವಕರು ಅಂದ್ರೆ ಇನ್ನೂ ೨೨-೨೫ ರ ಹರೆಯದ ನಾವೆಲ್ಲಾ ಪಾಪಚ್ಚಿ ಕಂದಮ್ಮಗಳ? ಇನ್ನೂ ಬಾಯಲ್ಲಿ ಫೀಡಿಂಗ್ ಬಾಟಲ್ ಇಟ್ಗೊಂಡು ವಿವೇಚನೆ ಕಳಕೊಂಡು ಈ ಹಾಳಾದ ರಾಜಕೀಯವೇ ಬೇಡಾ ಅಂತ ಸುಮ್ನೇ ಇರಬೇಕಾ? ವಯಸ್ಸು ಎಪ್ಪತ್ತು ದಾಟಿದ್ದರೂ ಹಲವಾರು ಹಗರಣಗಳನ್ನ ಮೈಮೇಲೆ ಎಳ್ಕೊಂಡು ತಪ್ಪು ಸಾಬೀತಾಗಿದ್ರೂ, ಜೈಲಿಗೆ ಹೋಗಿ ಬಂದಿದ್ರೂ, ಮಕದಲ್ಲಿ ಒಂದು ಚೂರು ವಿಷಾದನೇ ಇಲ್ದೇ ಪಾರ್ಟೀ ಇಂದ ಪಾರ್ಟೀಗೆ ಪಲ್ಟೀ ಹೊಡಿತಾ, ಸಿಕ್ಕಿದೇಲ್ಲಾ ಕಬಳಿಸಿ ಗುಡಾರದಂತ ಹೊಟ್ಟೆ ಹೊತ್ಗೊಂದು ನಡೆಯಕ್ಕೆ ಆಗದೇ ಇದ್ರೂ ಖುರ್ಚೀ ಕನಸು ಕಾಣುತ್ತ ಇರೋ ನಿಮ್ಮವರು ನಮ್ಮ ದೇಶದ ಯುವ ಶಕ್ತಿನಾ? ಯುವಕರು ಅಂತ ಹೇಳಿಕೊಳ್ಳೋ ನಿಮ್ಮ ಯಾವ ನಾಯಕರು ನಿಸ್ವಾರ್ಥತೆ ಇಂದ ಯುವಕರಿಗೋಸ್ಕರ ಏನು ಕೆಲಸ ಮಾಡಿ ಕೊಟ್ಟಿದ್ದಾರೆ ಅಥವಾ ನಿಮ್ಮ ರಾಜಕೀಯದಲ್ಲಿ ವಯಸ್ಸು ಶುರು ಆಗೋದೇ ನಲವತ್ತರ ನಂತರವೋ? ಯಾಕೆ ನಿಮ್ಮ ರಾಜಕೀಯದಲ್ಲಿ 'ಯುವಕರಿಗೆ ಆದ್ಯತೆ' ಅನ್ನೋ ಎಲ್ಲಾ ಪಕ್ಷಗಳೂ ಒಂದೇ ಒಂದು ಪಕ್ಷ ಕೂಡ ಎಲ್ಲಾ ಕ್ಷೇತ್ರದಲ್ಲಿ ಮೂವತ್ತರ ಒಳಗಿನವರಿಗೆ ಮಾತ್ರ ಟಿಕೆಟ್ ಕೊಡೋದು ಅಂತ ಘೋಷಿಸಿಲ್ಲ? ನಲವತ್ತು ದಾಟಿದ ಎಲ್ಲಾ ರಾಜಕೀಯ ನಾಯಕರು ನಿವೃತ್ತಿ ತೊಗೊಂಡು ಸುಭದ್ರ ಭಾರತ ನಿರ್ಮಾಣಕ್ಕೆ ಯುವಕರಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಮಾಡೋ ಕೆಲಸ ಯಾಕೆ ಮಾಡೋಲ್ಲ? ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕೀಯ ಇದ್ದೇ ಇದೆ. ಇರಲಿ ಏನೋ ಅಮಾಯಕ ಪ್ರಜೆಗಳು ನಾವು ಹೊಟ್ಟೆಗೆ ಹಾಕ್ಕೊತೀವಿ. ಕುಟುಂಬ ರಾಜಕೀಯ ಮಂದಿಗಳು ಕಣ್ಣು ಮಂಜಾಗಿ ಹಾಸಿಗೆ ಹಿಡಿದು ಅರಳು-ಮರಳು ಪರಿಸ್ಥಿತಿಯಲ್ಲೂ ನಿವೃತ್ತಿ ಘೋಷಿಸದೆ ರಾಜಕೀಯದಲ್ಲೇ ಇರ್ತಾರಲ್ಲ ಅವರಿಗೆ ಏನು ಹೇಳ್ತೀಯೋ ಪುಡಾರಿ ??"
ಹೀಗೆ ನಾನು ಕೆಂಡಾಮಂಡಲವಾಗಿ ಎರ್ರಾಬಿರ್ರಿ ಪ್ರಶ್ನೆಗಳ ಸುರಿಮಳೇನೆ ಸುರಿಸ್ತಾ ಇದ್ರೆ, ಪಾಪ ನಮ್ ಪುಡಾರಿ "ಅಣ್ಣಾ ಸಾಕು ಬಿಡೋ ತಪ್ಪಾಯ್ತು, ಏನೋ ತಿಳಿದೇ ನಿಮ್ ದೇವರ ಬಗ್ಗೆ ತಪ್ಪು ಹೇಳಿದೆ" ಅಂತ ಅಲವತ್ತು ಕೊಳ್ತಾ ಇದ್ರೆ ನಾನು " ಪುಡಾರಿ ಇಷ್ಟೂತ್ತು ಮಾತಾಡಿ ನನ್ನ ಕೆರಳಿಸಿದ್ದು ಅಲ್ದೆ ಇವಾಗ ಅಣ್ಣ ಅಂತ ಅಂಗಲಾಚ್ತಾ ಇದ್ದೀಯ? ಅಂತೂ ಇಂತೂ ನೀನೂ ಕಲ್ತು ಬಿಟ್ಟೆ ರಾಜಕೀಯದ ಟ್ರಿಕ್ಸ್ ಅಲ್ವ? ಈಗ ನಮ್ಮ ವಿಷಯಕ್ಕೆ ಬಾ.. ನಮ್ಮಂತ ಯುವಕರಿಗೆ ಯಾಕೆ ನಿಮ್ಮ ಕ್ಷೇತ್ರದಲ್ಲಿ ನೆಲೆ ಇಲ್ಲ ? ದೇಶದ ಎಪ್ಪತ್ತು ಶೇಕಡಾ ಯುವಕರಿದ್ರೂ ರಾಜಕೀಯದಲ್ಲಿ ಮಾತ್ರ ಯಾಕೆ ಎಲ್ಲಾ ಮುದುಕರೇ ತುಂಬಿ ತುಳುಕಾಡುತ್ತಿದ್ದಾರೆ? ಅದೇನೋ ಕಾರ್ಯಕರ್ತ ಅದು ಇದು ಅಂತ ಸಿಕ್ಕ ಸಿಕ್ಕ ಎಲ್ಲಾ ಪಾರ್ಟೀ ಅವರ ಹತ್ರಾನು ದುಡ್ಡು ಇಸ್ಕೊಂಡು ಪ್ರಚಾರ ಅಂತೆಲ್ಲ ಏನೇನೋ ಮಾಡ್ತಾ ಸಿಕ್ಸಿಕ್ಕಿದ್ದು ಕುಡಿತಾ ಎಲ್ಲೆಲ್ಲೊ ಸುತ್ತಾಡ್ತಾ ಇರ್ತಿಯಲ್ಲ? ಮಾಡೋಕೇನೂ ಕ್ಯಾಮೆ ಇಲ್ಲಾಂದ್ರೆ ನೀನೆ ಯಾಕೆ ಯಾವ್ದಾದ್ರು ಪಕ್ಷದಿಂದ ಟಿಕೆಟ್ ಗಿಟ್ಟಿಸಿ ನಿಂತು ಒಂದು ಕೈ ನೋಡಬಾರದು? ನೀನೂ ಇನ್ನೂ ಎಳೇ ಯುವಕ ಅಲ್ಲವ?" ಅಂದೇ..
ಪುಡಾರಿಯ ಅಂದು ಮೊದಲ ಬಾರಿಗೆ ವಿಷಾದದಿಂದ ಹೇಳತೊಡಗಿದ, "ಹುಮ್ಮ್ ನಮ್ಮನ್ನೆಲ್ಲ ಪಕ್ಷದವರೂ ತಮ್ಮ ಕೆಲಸ ಆಗೋ ವರೆಗೆ ಮಾತ್ರ ಚೆನ್ನಾಗಿ ನೋಡ್ಕೊಳೋದು ಕುಡಿಸೋದು ಮಾಡಿದ್ರು, ಆಮೇಲೆ ಕ್ಯಾರೆ ಅನ್ನಲಿಲ್ಲ. ಇವರ ಎಲ್ಲಾ ಕೆಲಸಕ್ಕೂ ನಮ್ಮಂಥ ಯುವಕರು ಬೇಕು, ಆಮೇಲೆ ಬರೀ ಭಾಷಣಕ್ಕೆ ಅಷ್ಟೇ ಸೀಮಿತ ನಾವು. ನೀನು ಹೇಳಿದ ಹಾಗೇ ರಾಜಕೀಯಕ್ಕೂ ಒಂದು ಪ್ರತ್ಯೇಕ ಮಾನದಂಡ ಇರಬೇಕಿತ್ತು ಮಗಾ. ಮುದುಕರನ್ನ ಬರೀ ಸಲಹೆಗಾರರನ್ನಾಗಿ ಮಾತ್ರ ಇಟ್ಕೊಲ್ಲೋ ಹಾಗಿರಬೇಕಿತ್ತು. ಕೇವಲ ಮೂವತ್ತೈದು ವರ್ಷ ಒಳಗಿನ ಯುವಕರಿಂದ ಮಾತ್ರ ರಾಜಕೀಯ ಪ್ರವೇಶ ಅನ್ನೋ ತರ ಕಾಯ್ದೆ ಇರಬೇಕಿತ್ತು ಅಂತ ಅನ್ನಿಸ್ತಿದೆ. ಬದಲಾವಣೆ ಯುವಕರಿಂದ ಮಾತ್ರ ಸಾಧ್ಯಾ ಅನ್ನೋ ಮುತ್ಸದ್ದಿಗಳು ಕೊನೆಗೆ ಐವತ್ತಾಗಿದ್ರೂ ನಾನೇ ಚಿರ ಯುವಕಾ ಅನ್ನೋರಿಗೆ ಏನ್ ಮಾಡೋಣ?? ಇಂತಾ ಕೊಳೆನೆಲ್ಲಾ, ಕಾಲ ಅನ್ನೋ ಕಾದ ಕಬ್ಬಿಣದ ಕೋಲೇ ಕೋಳಾ ತೊಡಿಸಿ ಕೊಳಕಾಗಿರೋ ಕೊಳಚೆನಾ ಕೊಲಾಯಿಯಲ್ಲಿಯೇ ಕೊಳೆತು ಹೋಗೋ ತರ ಮಾಡಿದ್ರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ." ಎಂದ ಅರ್ಥವಾಗದೆ ಇರೋ ಹಾಗೇ ಮಾರ್ಮಿಕವಾಗಿ..!!
ಅಂತೂ ನಮ್ಮಂಥ ಎಳೇ ಯುವಕರಿಗೂ ರಾಜಕೀಯ ಅರಿವಿದೆ ಆದರೂ ವ್ಯವಸ್ತೆಯ ವ್ಯವಸ್ತಿತ ವಾಸ್ತವ್ಯದಲ್ಲಿ ಅಸ್ತವ್ಯಸ್ತವಾಗಿದೆ ಎಂದು ಅರಿವಾಗಿ ಯೋಚಿಸುವಷ್ಟರಲ್ಲಿ ನಮ್ಮ ಭಾರತವು ಕಾಂಗರೂಗಳ ಗರ್ವಭಂಗ ಮಾಡಿ ಬೀಗುತ್ತಿದ್ದರೆ ಅತ್ತ ಕೆಲ ಹಿರಿ ತಲೆಗಳು ಪಿಚ್ ಕಾರಣ ಅದೃಷ್ಟ ಅದೂ ಇದೂ ಅಂತ ವ್ಯಂಗ್ಯ ಮಾಡುತ್ತಿದ್ದರೆ, ನಮ್ ಜನ'ಗೋಳೇ' ಇಷ್ಟು ಬಾ ಮಗಾ ಏನಾದ್ರು ಬೀದಿ ಬದೀದು ತಿನ್ಕೊಂಡು ಬರುವ ಅಂತ ಪುಡಾರಿ ಹೆಗಲ ಮೇಲೆ ಕೈ ಹಾಕಿ ಹೊರಟೆ..!!

No comments:

Post a Comment