Monday 22 July 2013


                                                          ಅಪಘಾತುಕಗಳು

"ಏನ್ ಜನಗಳೋ ಏನೋ? ಮನುಷ್ಯತ್ವದ ಒಂದು ತುಣುಕಾದ್ರೂ ಬೇಡವಾ? ಅವರ ಮೂತಿಗಿಷ್ಟು ಬರೇ ಹಾಕಾ.. ಅವರ ಪಿಂಡ ಏಲಿಯನ್ ನೆಕ್ಕಾ.. ನಾನೇನಾದ್ರೂ ದೇವರಾಗಿದ್ರೆ, ನನ್ನತ್ರ ಏನಾದ್ರೂ ಸೂಪರ್ ನ್ಯಾಚುರಲ್ ಪವರ್ ಇದ್ದಿದ್ರೆ ಆಗ ತೋರಿಸ್ತಿದ್ದೆ ನನ್ನ ಕೆಪ್ಯಾಸಿಟಿನ, ಈಗಲೂ ನೆನಸ್ಕೊಂಡ್ರೆ ಎಲ್ಲೆಲ್ಲೋ ಉರಿತದೆ.." ಹೀಗೆ ಎರ್ರಾಬಿರ್ರಿ ಬೈಗುಳಗಳ ಸುರಿಮಳೆ ಸುರಿಸ್ತಾ ಇದ್ದ ನಮ್ಮ ಡೊಂಕೇಶ. ನಾನೂ ನಮ್ಮ ಕ್ರಾಕ್ ಬಾಯ್ ಇಬ್ಬರೂ ಲೆಮನ್ ಟೀ ಕುಡೀವಾ ಅಂತ ಹೋದೋರು, ಅಲ್ಲಿಯೇ ಇದ್ದ ನಮ್ಮ ಡೊಂಕೇಶನ ಆರ್ಭಟ ಕೇಳೀ ಕ್ಷಣಕಾಲ ತಬ್ಬಿಬ್ಬಾದೆವು..!!
"ಯಾಕ್ಲಾ ಡೊಂಕೂ, ಏನಾತೋ? ಯಾಕೋ ಹಿಂಗೆ ಮಾರಮ್ಮನ್ ಡಿಸ್ಕ್ ನುಂಗಿರೋ ಹಳೇ ಗ್ರಾಮಫೋನ್ ತರಾ ಅರಚುಗೋತಾ ಇದೀಯಾ? ಏನಾತೂ ಅಂತ ಸಮಾಧಾನವಾಗಿ ಹೇಳು ಕೇಳುವಾ" ಅಂತಂದೆ.
"ಫ್ಲಾಪೀ ಅಣ್ಣಾ ಏನೂ ಅಂತಾ ಹೇಳಲಿ, ನಮ್ಮ ಜನಗಳು ಯಾವಾಗ ಸುಧಾರಿಸ್ತಾರೆ ಅನ್ನೋದೇ ನಂಗೆ ಚಿಂತೆ ಆಗೋಗಿದೆ. ಈ ಚಿಂತೆಯೇ ಮುಂದೊಂದು ದಿನ ನನ್ನ ಚಿತೆಗೆ ಕಾರಣ ಆಗತ್ತಾ ಅಂತಾ ನಂಗೆ ಒಂದೇ ಸಮನೇ ಭಯ ಸುರು ಆಗೋಗದೆ. ನಮ್ಮ ಸಮಾಜದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೊದ ಯಾರೂ ಗುರುತಿಸದೇ ಇದ್ದದ್ದು ಸಮಾಜದ ದುಭರ್ಾಗ್ಯವೇ ಸರಿ. ನನ್ನಂಥ ಪ್ರಜೆಗಳು ಹುಚ್ಚಾಸ್ಪತ್ರೆಯ ಕಾಂಪೋಡರ್ ತರ ಸುಮ್ನೇ ನಮ್ಮ ಜನಗಳ ಹುಚ್ಚಾಟ ನೋಡೋದೆ ಆಗೋಯ್ತು, ಅಳಂಗಿಲ್ಲ ನಗಂಗಿಲ್ಲ.." ಹೀಗೇ ಒಂದೇ ಸಮನೇ ಲಡಲಡಾಯಿಸ್ತಾ ಇದ್ದ..
ಇವನ ಈ ಮಾತುಗಳ ಕೇಳಿ ನಮ್ಮ ಕ್ರಾಕ್ ಬಾಯ್ಗೇ ಅದೆಲ್ಲಿತ್ತೋ ಸಿಟ್ಟು ಕಿತ್ಗೋಂಡ್ ಬಂದು ಅದೇ ಸಿಟ್ಟಲ್ಲೇ "ಲೋ ಡೊಂಕಾ ಸರಿಯಾಗಿ ಮ್ಯಾಟರ್ ಹೇಳೋದಿದ್ರೆ ಹೇಳು, ಹಿಂಗೇ ನೀ ಕಪ್ಪೆ ತಿನ್ನೋನ್ ತರಾ ವಟವಟ ಅಂತಾ ಇದ್ರೆ ನನ್ನ ಕೈಲಿರೋ ಈ ಸಿಗರೇಟ್ ಇಂದಾನೇ ನಿನ್ನ ಸಜೀವ ದಹನ ಮಾಡಿ ಆ ಬೂದೀನಾ ಕೆಂಗೇರಿ ಮೋರಿಗೆ ಕಾಕ್ತೀನಿ, ಏನ್ ಹೇಳ್ಬೇಕು ಅಂತಾ ಇದಿಯಾ ಅದನ್ನ ನೇರವಾಗಿ ಬೊಗಳು" ಅಂದ ರೇಗುತ್ತಾ.
"ಕ್ರಾಕ್ ಅಣ್ಣಾ ಬೈಬೇಡ ಕಣಣ್ಣಾ, ಆ ದೃಶ್ಯ ನೋಡಿ ನನ್ನ ಬ್ಲಡ್ಡು ನೂರಾ ಎಂಟು ಡಿಗ್ರಿ ಪ್ಯಾರನ್ ಹಿಟ್ ಅಲ್ಲಿ ಕೊತಕೊತನೆ ಕುದ್ದೋಯ್ತು ಗೊತ್ತಾ" ಅಂದ ದೈನ್ಯತೆಯಿಂದ.
"ಏನೂ ಅಂತಾ ಬೇಗಾ ಹೇಳೋ ಡೊಂಕು ಒಳ್ಳೇ ಸೀದೋಗಿರೋ ಬಬ್ಬಲ್ ಗಮ್ ತರಾ ಎಳಿಬೇಡಾ, ನಮಗೆ ಈಗ ಜಾಸ್ತಿ ಟೈಮ್ ಇಲ್ಲಾ ಮಾರಾಯ.. ನಮ್ ಬಾಸ್ ಹತ್ರ ಸಾಲ ಕೇಳಿ ಟೈಮ್ ಇಸಕಂಡ್ ಬಂದೀವೀ.. ವದರು ಏನು ನಿನ್ನ ರೋಧನೆ??" ಅಂತಾ ನಾನು ಕೇಳಿದೆ.
"ರೋಡಲ್ಲಿ ಜನಜಂಗುಳಿಯಿಂದ ತುಂಬಿ ಹೋಗಿದ್ದ ರೋಡು. ಎದುರುಗಡೆ ಇಂದ ಒಂದು ಕರೀಶ್ಮಾ ಬೈಕು, ಎಡಗಡೆಯಿಂದ ಒಂದು ಬುಲೆಟ್ ಗಾಡಿ ಸ್ಪೀಡಾಗಿ ಬಂದು ಟನರ್ಿಂಗನಲ್ಲಿ ಪರಸ್ಪರ ಡಿಚ್ಚಿ ಹೊಡಕಂಡು ಮಕಾಡೆ ಬಿದ್ದವು., ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಪಾಟರ್ು ಪಾಟರ್ುಗಳೇ ಅದುರಿ ಎಗರೋದ್ವು. ಬೈಕ್ ಓಡಿಸ್ತಾ ಇದ್ದವ್ರು ಇಬ್ರೂ ಕಾಲೇಜ್ ಯುವಕರು. ಒಬ್ಬನ ಹೆಲ್ಮೇಟೇ ತುಂಡಾಗಿ ತಲೆ ಒಡೆದು ರಕ್ತ ಚಿಲ್ಲನೆ ಚಿಮ್ಮಿತು. ಇನ್ನೊಬ್ಬನ ಬಾಯಿಯ ದವಡೆಯೇ ಮುರಿದು ಅವನ ಮಕಾ ದೇವರಿಗೆ ಬಲಿ ಹೊಡೆದ ಕುಂಬಳಕಾಯಿ ತರಾ ಆಗೋಯ್ತು. ಇಬ್ಬರೂ ಬಿದ್ದು ಒದ್ದಾಡ್ತಾ ಇದ್ರೂ ಜನಗಳು ಮಾತ್ರ ಎಲ್ಲಾ ನೋಡ್ತಾ ಹಂಗೇ ನಿಂತ್ ಬಿಟ್ಟಿದ್ರು, ಯಾವೊಬ್ಬನೂ ಅವರ ಬಳಿ ಹೋಗಲೇ ಇಲ್ಲ. ನನಗದು ಉರಿದೋಯ್ತು, ನೀವೇನಾದ್ರೂ ಅದನ್ನ ನೋಡಿದ್ರೆ ಗೊತ್ತಾಗ್ತಾ ಇತ್ತು ನನ್ನ ಕಷ್ಟವ..!" ಹೀಗಂದ ನಮ್ಮ ಡೊಂಕೇಶ ಗಡಿಗೆ ಮಕಾ ಮಾಡಿಕೊಂಡು.
"ಹೌದು ಕಣಾ ಯಾರಿಗೆ ಬೇಕು ಆಕ್ಸಿಡೆಂಟ್ ಕೇಸ್, ಆಸ್ಪತ್ರೆ, ಪೋಲಿಸು, ವಿಚಾರಣೆ ಇಂಥಾ ಕಿರಿಕಿರಿಯೇ ಬೇಡಾ ಅಂತಾ ಜನಗಳು ನೋಡಿದ್ರೂ ನೊಡದ ತರಾ ಸುಮ್ನೆ ಇದ್ದು ಬಿಡ್ತಾರೆ ಯಾರೂ ಹೆಲ್ಪ ಮಾಡಕ್ಕೆ ಮುಂದೆ ಬರಲ್ಲ, ಒಂಥರಾ ಯಾರೋ ಮಾಡಿಕೊಂಡ ತಪ್ಪು..., ಅನುಭವಿಸಲಿ ಅನ್ನುವ ಉದಾಸೀನ ನಮ್ಮ ಜನಕ್ಕೆ, ಇವರೆಲ್ಲಾ ಯಾವಾಗ ಸರಿ ಹೋಗ್ರಾರೋ ಏನೋ?" ಎಂದು ನಿರಾಶೆಯ ನಿಟ್ಟುಸಿರು ಬಿಟ್ಟ ನಮ್ಮ ಕ್ರಾಕ್ ಬಾಯ್..
ಯಾಕೋ ಡೊಂಕೇಶನ ಮಾತು ನನಗೆ ವಿಚಿತ್ರವಾಗಿ ಕಂಡಿತು. "ಈಗ ಜನರೂ ಸುಧಾರಿಸಿದ್ದಾರೆ, ವಿವೇಚನೆ ಬೆಳೆಸಿಕೊಂಡಿದ್ದಾರೆ. ಮೊದಲಿನ ತರಾ ಇಲ್ಲ ಮಾರಾಯಾ, ಕಾನೂನು ಕೂಡಾ ನಮಗೇ ಸಪೋಟರ್್ ಮಾಡ್ತದೆ. ಅಪಘಾತವಾದರೂ ಜನ ನಮ್ಮ ಸಹಾಯಕ್ಕೇ ಬಂದೇ ಬರುತ್ತಾರೆ. ನನಗೇ ಗೊತ್ತಿರೋ ಪ್ರಕಾರ ಹೋದ ತಿಂಗಳು ನಮ್ಮ ಆಪೀಸಿನ ಎದುರುಗಡೆ ರೋಡಲ್ಲಿ ಚೂಡೀದಾರದ ವೇಲು ಬೈಕಿಗೆ ಸಿಕ್ಕಾಕ್ಕಂಡು ಬಿದ್ದ ಆ ಆಂಟಿಯನ್ನು ನಾವೇ ಉಪಚರಿಸಿಲ್ಲವಾ?? ಅಷ್ಟೇ ಯಾಕೇ ಹೋದವಾರ ನಾನೂ ಕ್ರಾಕು ಬೈಕಲ್ಲಿ ಹೋಗ್ತಾ ಇರೋವಾಗ ಚೆಡ್ಡಿ ಹಾಕ್ಕೊಂಡಿರೋ ಪಿಗರ್ ನಾ ಹಿಂತಿರುಗಿ ನೋಡ್ತಾ ನೋಡ್ತಾ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಾಗ ಅಲ್ಲಿದ್ದ ಜನರೇ ಅಲ್ಲವಾ ನಮ್ಮನ್ನು ಎಬ್ಬಿಸಿದ್ದು..! ಯಾಕೋ ಕ್ರಾಕು ಮರೆತು ಬಿಟ್ಟೆಯಾ??" ಎಂದೆ.
"ಹೌದು ಕಲ ಡೊಂಕು, ನೀನು ಹೇಳೋತರ ಮೊದಲಿದ್ರು, ಆದರೆ ಈಗಿಲ್ಲ. ಅಪಘಾತವಾದಾಗ ಜನ ಬರ್ತಾರೆ. ಆದರೆ ಆ ಕ್ಷಣದಲ್ಲಿ ಏನು ಮಾಡೋದು ಅಂತಾ ತೋಚದೇ ಕ್ಷಣಕಾಲ ತಬ್ಬಿಬ್ಬಾಗ್ತಾರೆ ಅಷ್ಟೇ, ಒಬ್ಬ ಮೊದಲು ಮುಂದೆ ಬರುತ್ತಿದ್ದಂತೇ ಎಲ್ಲರೂ ಸಹಾಯಕ್ಕೆ ಕೈಜೋಡಿಸುತ್ತಾರೆ. ಮನ ಮಿಡಿಯುತ್ತಾರೆ. ಇಂತಹ ಅನೇಕ ಘಟನೆಗಳಿಗೆ ನಾನೇ ಸಾಕ್ಷಿ." ಅಂದ ಅನುಭವಸ್ಥನಂತೆ.
"ಅದು ಸರಿ, ಆಕ್ಷಿಡೆಂಟ್ ಆಗಿದ್ದು ಎಲ್ಲಿ?? ಎಷ್ಟೊತ್ತಿಗೆ?? ಅದನ್ನ ನೋಡಿ ನೀನೇನು ಮಾಡಿದೆ? ನಮ್ಮ ಜನಗಳು ಅದನ್ನು ನೋಡಿಕೊಂಡು ಸುಮ್ನೆ ಇದ್ರಾ? ಇಷ್ಟೊಂದು ಬೈದಾಡ್ತಾ ಇರೋ ನೀನೂ ಡೊಂಬರಾಟ ನೋಡೋ ತರಾ ಅದನ್ನ ನೋಡ್ತಾ ನಿಂತಿದ್ಯಾ??" ಅಂತ ಡೊಂಕೆಶನ್ನ ಕೇಳಿದೆ.
"ನಾ ಏನ್ ಮಾಡಕಾಗ್ತದೆ ಕಣಣ್ಣಾ, ಸುಮ್ನೆ ಮಲಕ್ಕಂಡು ನೋಡ್ತಾ ಇದ್ದೆ..... ಎರಡು ಘನಘೋರ ಅಪಘಾತಗಳು, ರಕ್ತದಾ ಜಲಧಾರೆಗಳು... ಎದೆ ನಡುಗಿಸುವ ಶಬ್ದಗಳು.. ಸಹಾಯಕ್ಕೇ ಬಾರದ ಮೂಕ ಪ್ರೇಕ್ಷಕರಾಗಿರುವ ಜನಗಳು.. ಇನ್ನೇನೋ ಆಗ್ತದೆ, ಅವರಿಬ್ಬರೂ ಇವತ್ತೇ ಟಿಕೇಟ್ ತಗೋತಾರೆ ಅಂದಾಗಲೇ ಆ ಹಾಳಾದ ಚಾನಲ್ ನವರು ಸೀರಿಯಲ್ ನ ಇವತ್ತಿನ ಎಪಿಸೊಡ್ ಮುಗಿಸಿ ನಾಳೆಗೆ ಮುಂದೂಡಿ ಬಿಟ್ರು..!!" ಅಂದಾ ಮಿಕಿಮಿಕಿ ಕಣ್ಣು ಬಿಡುತ್ತಾ...
"ಅಯ್ಯೋ ಹುಚ್ಚು ಬಡ್ಡೀತದೇ, ಇಷ್ಟೊತ್ತು ಸೀರಿಯಲ್ ಕತೆ ಹೇಳಿ ನಮ್ಮತ್ರ ಗೋಳಾಡ್ತಾ ಇದೀಯಾ?? ಲೋ, ಕ್ರಾಕು ತೊಗೊಳ್ಳಲಾ ಸೈಡಲ್ಲಿರೋ ಆ ಸೈಜ್ಗಲ್ಲನ್ನ, ಇವತ್ತು ಇವನ ತಲೆ ಮೇಲೆ ಕಲ್ಲೆತ್ತಾಕೀ ಜನಗಳು ಬರ್ತಾರೋ ಇಲ್ವೋ ಅಂತಾ ಅವನಿಗೇ ತೋರಿಸುವಾ" ಅಂತಂದೇ ಕೆಂಡಾಮಂಡಲಗೊಂಡು..!!
ನಮ್ಮಿಬ್ಬರ ರೌದ್ರಾವತಾರವ ಕಂಡು ಸತ್ತೆನೋ ಬಿದ್ದೆನೋ ಅಂತಾ ಕಾಲಿಗೆ ಬುದ್ದಿ ಹೇಳಿದ್ದ ನಮ್ಮ ಡೊಂಕೇಶ...!

1 comment: