Monday 21 January 2013

ಜೈ ಕನ್ನಡ

ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)..!! ಪಕ್ಕದಲ್ಲಿ ಮೂವರು ಬುದ್ದಿಜೀವಿಗಳು ( ಯಾಕಂದ್ರೆ ಅವರಿಗೆ ಬಿಳಿ ಗಡ್ಡ ಇತ್ತು ) ಮಾತಾಡ್ತಾ ನಿಂತಿದ್ರು..!! ಅಷ್ಟರಲ್ಲಿ ಯಾರೋ ಸುಂದರ ಯುವತಿ ನನ್ನತ್ರ ಅಡ್ರೆಸ್ಸು ಕೇಳಿದ್ಳಪ್ಪಾ.. !!ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು.. ಸರಿ, ನಾನು ಒಬ್ಬ ಕನ್ನಡಿಗ ಆದ್ದರಿಂದ ಅವಳ ವಿಳಾಸನ ತೆಲುಗಲ್ಲೇ ಹೇಳಿದೆ..!!
ಇದು ನಮ್ಮ ಕನ್ನಡ ಬುದ್ಧಿ ಜೀವಿಗಳಿಗೆ ರೇಗಿಸಿತು ಅನ್ಸತ್ತೆ..!! "ತಮ್ಮ ಬಾ" ಅಂದ್ರು ಹತ್ರ ಹೋದೆ.. "ನಿನ್ ಯಾವೂರು? ನಿಮ್ ಭಾಷೆ ಯಾವ್ದು" ಅಂದ್ರು..!! "ಸಾರ್ ನಾನು ಇಲ್ಲೇ ಇರೋದು ಕನ್ನಡಿಗಾ" ಅಂದೇ..!! "ಮತ್ಯಾಕೆ ಅವಳಿಗೆ ತೆಲುಗಲ್ಲಿ ಉತ್ತರ ಕೊಟ್ಟೆ.. ಬೇರೆ ಭಾಷೆ ಅವರಿಗೆ ಅವರ ಭಾಷೆ ಬಗ್ಗೆ ಎಷ್ಟು ಪ್ರೀತಿ ಹೆಮ್ಮೆ ಗೌರವ,, ನಿಮ್ಮಂಥಅವರಿಂದಾನೆ ನಮ್ ಕನ್ನಡಕ್ಕೆ ಇಂಥ ಸ್ಥಿತಿ" ಅಂದ್ರು..!!
ನನಗೆ ಉರಿದೊಯ್ತು .. ಆದ್ರೆ ಏನ್ ಮಾಡೋದು ಬುದ್ಧಿಜೀವಿಗಳು ಮೇಲಾಗಿ ಹಿರಿಯರು.. ಏನು ಹೆಚ್ಚು ಕಮ್ಮಿ ಮಾತಾಡೋ ಹಾಗಿಲ್ಲ... "ಸಾರ್ ಕ್ಷಮಿಸಿ ಗೊತ್ತಾಗಿಲ್ಲಾ.., ಆದ್ರೆ ನನಗೊಂದು ಸಂದೇಹ ಕನ್ನಡದಲ್ಲಿ ಮಾತಾಡ್ಬೇಕು ಅಂದ್ರಲ್ಲ ಯಾವ್ ಕನ್ನಡದಲ್ಲಿ ಸಾರ್ ?? ಇದು ನಂಗಂತೂ ತುಂಬಾ ಗಲಿಬಿಲಿ ವಿಷಯಾ ಅಂತ ಅಂದೇ??"
" ಏನಯ್ಯ ಹಿಂಗಂತಿದೀಯ ? ಇರೋದೊಂದೇ ಕನ್ನಡ ಅದರಲ್ಲೇ ಹೇಳು ಅಂದ್ರು .!!"
ನಾನಂದೆ "ಸಾರ್ ನಾನೀಗ ಹೋಗೋ ಬಸ್ ಕಂಡಕ್ಟರ್ ಹಾಸನದವರು ಅವ್ರು 'ಎಲ್ಲಾ ಬೇಗಾ ಅತ್ಗಳೀ ಇಂದಕ್ಕೆ ಓಗಿ ' ಅಂತಾರೆ ಅದು ಕನ್ನಡ.. ಅಮೇಲೆ ಮಂಡ್ಯ ಹೋಗ್ಬೇಕು ಅಲ್ಲಿ 'ಬಾರೋ ಸಂದಾಕಿದಿಯಾ ಮಗಾ, ಬಾರ್ಲಾ ಮುದ್ದೆ ಉಣ್ಣು ' ಅಂತಾರೆ ಅದು ಕನ್ನಡ.. ಸರಿ ನೆಕ್ಷ್ಟು ಮೈಸೂರು ಅಲ್ಲಿ ನಯ ನಾಜೂಕಿನ ಅಚ್ಚ ಸ್ವಚ್ಛ ಕನ್ನಡ.. ಮುಂದೆ ಮಂಗಳೂರಿಗೆ ಹೋದ್ರೆ ' ಹೊಯ್ ಇದು ನಮ್ಮ ಕುಡ್ಲ ತುಂಬಾ ಚಂದ ಉಂಟು ಬನ್ನಿ ಸುತ್ತುವ ' ಅಂತಾರೆ ಅದು ಕನ್ನಡ..ವಾಕೆ ಅಂತ ಹುಬ್ಳಿಗೆ ಹೋದೆ 'ಅಲಾಲಾಲಾಲಾ.. ಏನ್ ಕಲರ್ ಆಗಿಯೋ ತಮಾ ಬೆಂಗಳೂರ್ ಹವಾ ಬೇಶ್ ಆಗಿ ಒಗ್ಗಯ್ತಿ ಬಿಡ್ಪಾ ಬಾ ಹಂಗಾ ಸುತ್ತಾಕೆ ' ಅಂತಾರೆ ಅದು ಕನ್ನಡ.. ಬೆಳಗಾವಿಗೆ ಹೋದ್ರೆ ಮರಾಟಿ ಮಿಕ್ಸ ಕನ್ನಡ.. ಬಳ್ಲಾರಿಲಿ 'ಅದಿರು'ವಂತ ಕನ್ನಡ.. ಕಲಬುರ್ಗಿ ರಾಯಚೂರು ಗಂಗಾವತಿ ಕಡೆ ಕಡಕ್ ಕನ್ನಡ.. ಬೀದರ್ ಬಿಜಾಪುರದಲ್ಲಿ ಬಹಮನಿ ಆದಿಲ್ ಸುಲ್ತಾನರ ಕನ್ನಡ.. ಸರಿ ಅಂತ ದುರ್ಗಾಕ್ಕೆ ಬಂದ್ರೆ ಸಂಗೊಳ್ಳಿ ರಾಯಣ್ಣನ ಓಬವ್ವಳ ವಿರಾವೇಶದ ಕನ್ನಡ.. ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಕನ್ನಡ.. ಕೋಲಾರದಲ್ಲಿ ತೆಲುಗು ತಟಕಿಟ ಕನ್ನಡ.. ಕೊಳ್ಳೆಗಾಲಕ್ಕೆ ತಮಿಳು ಪುಳಿಯೋಗರೆ ಕನ್ನಡ..ಯಾವ್ದು ಬೇಡಪ್ಪ ಅಂತ ನಮ್ಮ ಮನೆಗೆ ಹೋದ್ರೆ 'ತಮಾ ಈಗ ಬಂದ್ಯಾ ಬಾ ಆಸರಿ ಕುಡಿಲಕ್ಕು.. ಮಗೆ ಕಾಯಿ ದೋಸೆ ಮಾಡ್ತಿ ತಿನ್ಲಕ್ಕು.. ಮತ್ತೆಂತ ವಿಶೇಷಾ ?? ಹೆಂಗಾತು ತಿರುಗಾಟ..' ಉಫ್ಫ್..... ಇದು ಕನ್ನಡಾನೇ ಕಣ್ರೀ..ಮಲೆನಾಡು ಚಿಕ್ಕಮಗಳೂರು ಅಲ್ಲಿದೆ ಮಳೆ ಕನ್ನಡ.. ಕೊಡಗಿನದು ಸುಳಿಗನ್ನಡ... ಯಾವ್ದು ಬೇಡಾ ಅಂತ ಮತ್ತೆ ಬೆಂಗಳೂರಿಗೆ ಬಂದ್ರೆ ಇಲ್ಲಿದು ಕುಳಿಗನ್ನಡ.. ಯಾಕಂದ್ರೆ ಯಾರ್ ಬಾಯಲ್ಲೂ ಸರ್ಯಾಗಿ ಕಡೆ ಕೂರಲ್ಲ ನಿಲ್ಲಲ್ಲಾ..!!
ನಮ್ ರಾಜ್ಯದಲ್ಲಿ ಪ್ರತಿ ಇಪ್ಪತ್ತು ಕಿಲೋಮೀಟರು ಗೆ ಭಾಷೆ ಪರಿಸರ ಜನರ ಮನಸ್ಥಿತಿ ವೇಷ ಭೂಷಣ ಎಲ್ಲ ಬದಲಾಗತ್ತಂತೆ..!! ಅದೇನೋ ಗೊತ್ತಿಲ್ಲಾ ಈ ದೋಸೆ ತು (ದೋಸೆ ಅಲ್ಲಾ ) ಭಾಷೆ ಮಾತ್ರ ಚೇಂಜ್ ಆಗತಾನೆ ಇದೆ.. ನೆಲಮಂಗಲದ ರಕ್ತ ಸಿಕ್ತ ಕನ್ನಡ ಇಂದ ಮೆಜೆಸ್ಟಿಕ್ ನ ಮಿಕ್ಸಡ್ ಮಸಾಲ .. ಶಿವಾಜಿ ನಗರದ ' ನಮ್ದುಕೆ ಕನ್ನಡ ನಿಮ್ದುಕೆ ಮಾಲುಮು' ಇಂದ ಎಂಜಿ ರೋಡಿನ ಅಲ್ಪಸಂಖ್ಯಾತ ಭಾಷೆನೂ ಕನ್ನಡಾನೇ..!! ಇತ್ಲಾಗೆ ರಿಂಗ್ ರೋದಲ್ಲೇ ರಿಂಗ್ ರಿಂಗ್ ರಂಗು ರಂಗು ಭಾಷೆ... ಎಲ್ಲಾನು ಕನ್ನಡಾನೇ..!!
ಸಾರ್ ಈಗ ಹೇಳಿ ನಾನು ಯಾವ್ ಕನ್ನಡದಲ್ಲಿ ಕನ್ನಡ ಬಾರದವರಿಗೆ ಉತ್ತರಿಸಬೇಕು ಅಂತ??"
ಮುಂದೆ ಏನಾಯ್ತು ಎಲ್ಲ ಇಲ್ಲಿ ಬೇಡಾ..ಯಾಕಂದ್ರೆ ನಾನು.... ನಮ್ ಹಿರಿಯರು.. ತುಂಬಾ ಗೊಂದಲದಲ್ಲಿದ್ದೇವೆ..!!
ಎಲ್ರು ನಿಮ್ ನಿಮ್ ಕೆಲಸ ನೋಡ್ಕಳಿ....!!!
ಕನ್ನಡಮ್ಮ ಶರಣು ತಾಯೆ..!!
ಕನ್ನಡ ನಮ್ಮದು ಕಾವೇರಿನೂ ನಮ್ಮದೇ..!!

No comments:

Post a Comment