Monday 21 January 2013

ಬಸ್ಸಲ್ಲಿ ಕಂಡ ಸಿದ್ದಿ ಹುಡುಗಿ..!!

           ಬೆಳಗಿನ ಸಮಯ, ತುಂಬಿದ ಬಸ್ಸು ಹುಬ್ಬಳ್ಳಿಯಿಂದ ಶಿರಸಿ ಕಡೆ ಹೋಗುತ್ತಿತ್ತು.. ಸುತ್ತಲೂ ಹಸಿರು ಪರಿಸರ, ಮರದ ಮರೆಯಿಂದ ಇಣುಕುತಿದ್ದ ಸೂರ್ಯನ ಕಿರಣಗಳು, ಚಳಿ ಚಳಿ ಗಾಳಿ, ವಿಂಡೋ ಕ್ಲೋಸ್ ಮಾಡಿ ಜೋಕಾಲಿತರ ಹುಯ್ದಾಡುತಿದ್ದ ಬಸ್ಸಲ್ಲಿ ಇರೋ ಮೂರೂ ಘಂಟೆಗಳ ಸಮಯವನ್ನ ವೇಸ್ಟ್ ಮಾಡಬಾರದು ಅಂತ ಹಂಗೆ ನಿದ್ದೆಗೆ ಜಾರಿದೆ..!!
          ಮಲಗಿ ಸುಮಾರು ಒಂದೊವರೆ ಘಂಟೆ ಆಗಿರಬಹುದಷ್ಟೇ.. ಬಸ್ಸಲ್ಲಿ ಶಾಲಾ ಮಕ್ಕಳ ಕಿಚಿಪಿಚಿಗೆ ಎಚ್ಚರವಾಯ್ತು.. ನೋಡಿದ್ರೆ ಬರೇ ಹೆನ್ಮಕ್ಲೇ ..( ಚಿಕ್ಕವು.. ಅಪಾರ್ಥ ಬೇಡಾ !!). ತುಂಡು ಲಂಗ ಹಾಕ್ಕೊಂಡು ಹರಕು ಬ್ಯಾಗು ಇಟ್ಗೊಂಡು.. ಕಚಿಪಿಚಿ ಮಾತಾಡ್ಕಂಡು. ಹತ್ತು ಕಿಲೋಮೀಟರು ದೂರದ ಸರ್ಕಾರಿ ಸ್ಕೂಲಿಗೆ ಹೊಂಟಿದ್ವು.. ಕಣ್ಮುಚ್ಚಿದ್ದಾಗ ಇದ್ದ ರಸ್ಶು ಕಣ್ಣು ತೆರೆದಾಗ ಇರಲಿಲ್ಲ.. ಸುಮಾರು ಐದು ಆರು ಕ್ಲಾಸಿನವರಂತೆ ಕಾಣುತ್ತಿದ್ದ ಅವರಲ್ಲಿ ನನ್ನನ್ನು ಬಹಳ ಆಕರ್ಷಿಸಿದ್ದು ಮಾತ್ರ ಆ ಕೃಷ್ಣಾ ಸುಂದರಿ ಸಿದ್ದಿ ಹುಡುಗಿ.. ಅವಳ ಕೂದಲೇ ಒಂಥರಾ ಜೇನುಗೂಡಿನ ತರಹ.. ಗುಂಗುರು ಗುಂಗುರು..!! ಮುಕದಲ್ಲಿ ಮುಗ್ದತೆ.. ಕಣ್ಣಲ್ಲಿ ಕಾಂತಿ.. ಮೇಲಾಗಿ ಅಷ್ಟು ಹುಡುಗಿಯರಲ್ಲಿ ಇವಳಲ್ಲಿ ಮಾತ್ರ ಕಂಡಂಥ ಆ ಮೌನ.. ಮುಖಭಾವ..!! ಹಾಗೆ ಸುಮ್ನೆ ಸ್ವಲ್ಪ ಹೊತ್ತು ಗಮನಿಸಿದೆ.. ಬಡಕಲು ಶರೀರ, ಒರಟು ಕೈಗಳು, ಮಾಸಿದ ಸಮವಸ್ತ್ರ.. ದೂರದ ಶಾಲೆ... ಪರಿಸ್ಥಿತಿಗೆ ದೂರಲಾಗದ ಅಸಹಾಯಕತೆ..!! ಕಷ್ಟದ ಜೀವನ.. 
           ಅವಳನ್ನು ನೋಡಿ ನಮ್ಮ ನಗರದ ಅವಳ ವಾರಿಗೆಯ ಮಕ್ಕಳ ನೆನಪಾಯ್ತು.. ಕೇಳಿದ್ದು ಕೊಡಿಸುವ ಪಾಲಕರು, ಬ್ರಾಂಡೆಡ್ ಬಟ್ಟೆಗಳು, ಕಾಲಿಗೆ ಕೆಲಸವೇ ಇಲ್ಲದ ಹಾಗೆ ಸ್ವಂತ ವಾಹನ, ಬಾಯಲ್ಲಿ ಇಂಗ್ಲಿಷು ಸ್ಪಾನಿಶು ಭಾಷೆಗಳು, ಬೊಜ್ಜು ದೇಹಗಳು.. ಕುರುಕಲು ತಿಂಡಿಯ ಹಂಡೆಗಳು....
ಹೆಬ್ಬಾವಿಗೂ ಎರೆ ಹುಳಕ್ಕೂ ಇರುವಷ್ಟು ಅಂತರ..!! 
             ಆದರೆ ಆ ಕಾಡು ಸಿದ್ದಿ ಹುಡುಗಿಯಲ್ಲಿ ನನಗೆ ಇಷ್ಟವಾದದ್ದು ಅವಳ ಕಲಿವ ಹಂಬಲ.. ಇನ್ನೇನು ಮಾತನಾಡಿಸೋಣ ಅಂತ ಅನ್ನುವಷ್ಟರಲ್ಲಿ ಅವಳ ಇಳಿವ ಸ್ಟಾಪು ಬಂದೇ ಬಿಟ್ಟಿತ್ತು.. ಅವಳು ತಿರುಗಿಯೂ ನೋಡದೆ ಹೊರಟು ಹೋದಳು ನನ್ನ ತಲೆಯಲ್ಲಿ ನೂರಾರು ಆಲೋಚನೆಯ ಚೆಲ್ಲಿ..!! ಕಾಡು ಹುಡುಗಿಯ ಓದುವ ಛಲವು - ಅಸ್ಪಷ್ಯವಾಗಿರುವ ಬಲವನ್ನು ಮೆಟ್ಟಿ ನಿಲ್ಲುವುದೊ? ಪರಿಸ್ಥಿತಿಯ ಬೇಬಿ ಡಾಲ್ ಆಗಿ ಯಾವುದಾದರು ಮನೆಯ ಮೂಲೆ ಸೇರುವುದೋ?? ನಮ್ಮ ಇನ್-ಕ್ರೆಡೆಬಲ್ ಇಂಡಿಯಾದ ಕಾಲ ಅನ್ನೋ ಗ್ವಾಡಿ
ಗೇ ಗೊತ್ತು..!!

(ಫೋಟೋ ಕೃಪೆ : ವಿಕಿಪಿಡಿಯಾ )
 

No comments:

Post a Comment