Monday 21 January 2013

ದೀಪ..!!


ಕತ್ತಲೆಯ ಬಾಳಲ್ಲಿ ನೀನಾಗುವೆಯ ದೀಪ..
ಅರಸುತಿದೆ ಮನವು ಮುಗ್ದತೆಯ ಪಾಪಾ..
ಹಳೆಯ ನೋವೆಲ್ಲವು ಘನಘೋರ ಪಾಪ..
ಬೇಡ ನನಗಾವುದೇ ಅನುಕಂಪದ ತಾಪ...
ದೀಪದ ಬುಡದಲ್ಲಿ ಕತ್ತಲೆ.. ಕತ್ತಲೆಯ ಮೇಲೊಂದು ದೀಪ..
ನನ್ನ ಬಾಳಿನ ಕತ್ತಲೆಗೆ ನೀನಾಗುವೆಯ ದೀಪ.. ನಂದದಾ ದೀಪ..
ಹುಡುಕುತಿದೆ ಮನವು ಬೆಳಕು ಕರೆದ ಎಡೆಗೆ..
ಕಿಡಿಗೇಡಿ ಬುದ್ದಿಗೆ ನನಬಾಳು ಒಡೆದ ಗಡಿಗೆ..
ದುಡುಕಿದ ಮನಕೆ ಬೇಕೊಂದು ಭಾವ
ಮಡಿದ ಮನಸಿಗೆ ಕೊಡುವೆಯಾ ಜೀವ..!!

ಹಾಳಾದ ಮನಸು ಈ ಲೆವೆಲ್ ಗೆ ಕವನ ಗೀಚ್ಕೊಂಡು, ಬದಬಡಾಯಿಸಿಕೊಂಡು ಬಿದ್ದಿದೆ ಅಂದ್ರೆ ಯಾವ್ ರೇಂಜ್ ಅಲ್ಲಿ ದು:ಖ ಆಗಿರಬಹುದು ಅಂತ ನಿಮಗ್ಯಾರಿಗೂ ಊಹೆಗೂ ಮೀರದ ಅಂಶ ಅದರಲ್ಲಿ ಅಡಕವಾಗಿದೆ..!! ಹೀಗೆ ಬೀದೀಲಿ ಬಿದ್ದಿದ್ದು ಯಾವುದೋ ಲವ್ ಫೇಲ್ಯೂರ್ ಯುವಕನಲ್ಲ.. ಜಿಗುಪ್ಸೆಗೊಂಡ ಕುಡುಕನೂ ಅಲ್ಲಾ.. ಹುಚ್ಚನೂ ಅಲ್ಲ... ಗ್ರಾಜುಯೇಟ್ ಭಿಕ್ಷುಕನೂ ಅಲ್ಲ...!!
ಸಮಾಜದಿಂದ ತಿರಸ್ಕೃತಗೊಂಡ ಒಂದು ಹೆಣ್ಣು ಮಗಳು ಅಂದ್ರೆ ನಂಬೋದು ತುಸು ಕಷ್ಟವೇ..!! ಆಕೆ ಹುಚ್ಚಿಯಲ್ಲ.. ಆದರೆ ಸಮಾಜದ ಕೆಲವು ಕಾಮುಕರಿಂದ ಸಾಮೂಹಿಕ ಅತ್ಯಾಚಾರಗೊಂಡು, ಮರ್ಯಾದೆಗೆ ಹೆದರಿ ಮನೆಯವರ ಸಾಮೂಹಿಕ ಆತ್ಮಹತ್ಯೆ ಕಂಡು, ಅತ್ತ ಸಾಯಲು ಆಗದ ಬದುಕಲು ಬಾರದ ಪರಿಸ್ಥಿತಿಯಲ್ಲಿರುವ ಒಬ್ಬ ಅಮಾಯಕಳ ಕೂಗು ಯಾರಿಗೂ ಕೆಳದಿದ್ದದ್ದು, ಸಮಾಜದ ದುರಂತ..!!
ಹುಚ್ಚಿ-ಅರೆಹುಚ್ಚಿ ಎಂದು ನಾಮಪಟ್ಟಿ ಅಂಟಿಸಿಕೊಂಡು ನಿರಂತರ ಶೋಷಣೆಗೆ ಒಳಗಾಗುತ್ತಿರುವ ಅವಳ ಬಾಳಿನಲ್ಲಿ ದೀಪ ಹಚ್ಚೋರು ಬಂದೆ ಇಲ್ಲಾ... ಬಂದೋರೆಲ್ಲ ಬೆಂಕಿ ಇಟ್ಟು ಹೊಂಟೋದರು.. ಮಾಧ್ಯಮದವರಿಂದ ಹಿಡಿದು ರಾಜಕಾರಣಿಗಳ ವರೆಗೂ ಎಲ್ಲರೂ ಅವಳ ಹೆಸರಿಡಿದು ತಮ್ಮ ಬೆಲೆ ಹೆಚ್ಚಿಸಿಕೊಂಡರು ಅಷ್ಟೇ..!! ಯಾವೊಬ್ಬನ ಅನುಕಂಪದ ಅಲೆಯು ಅವಳ ಬಾಳಲ್ಲಿ ನವಿರಾಗಿ ಬರಲಿಲ್ಲ..ಮುಂದೊಂದು ದಿನ ಡಾಕ್ಟರ್ ಆಗಬೇಕೆನ್ನುವ ಅವಳ ಹಂಬಲ ಬರಿ ಡೈರಿಯಲ್ಲೇ ಉಳಿದಿತ್ತು... !!
ಹೀಗೆ ನಿರಂತರ ಶೋಷಣೆಗೆ ಒಳಗಾದ ಅವಳ ಜೀವ ಕೂಡ ಅವಳಿದ್ದ ಹುಚ್ಚಾಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಕೊನೆಯಾದದ್ದು ಮಾತ್ರ ಸಮಾಜದ ವ್ಯಂಗ್ಯಕ್ಕೆ ಹಿಡಿದ ಕತ್ತಲೆ..!!
ಅತ್ತ ಪ್ರತಿಭಟನೆಯ ಕಾವು ಜೋರಾಗಿತ್ತು ಇತ್ತ ಅವಳ ಶವವು ನಗುತಿತ್ತು..!! ಸತ್ತವಳಿಗಾಗಿ ಕೈಯಲ್ಲಿ ಮೊಂಬತ್ತಿ ಹಿಡಿದು ಸಾಗುತಿತ್ತು ಜನರ ಮೆರವಣಿಗೆ.. ಮೋಂಬತ್ತಿಯ ದೀಪದ ಕಾವಿಗೆ ಕರಗುತ್ತಿತ್ತು ಮೇಣದ ಹಣತೆ..!! ದೀಪದ ಬುಡದಲ್ಲಿ ಕತ್ತಲೆ... ಸಾಬೀತಾಯಿತು ಮತ್ತದೇ ಮತ್ತಲ್ಲೇ ..!! ಇದ್ದಾಗ ನಕ್ಕರು.. ಸತ್ತಾಗ ಅತ್ತರು.. ಅವರಿಗೆ ಕಾಣಲೇ ಇಲ್ಲ ಸುರಿಯುತಿದ್ದ ಅವಳ ಕೆಂಪು ನೆತ್ತರು.. !!
 

No comments:

Post a Comment