Saturday 28 March 2015

ಯಾಣದ ತುದಿಮುಟ್ಟುವ ಪ್ರಯಾಸದ ಪಯಣ
ಕಳೆದ ವಾರಗಳಲ್ಲಿ ಭೀಮನವಾರಿ ಗುಡ್ಡ ಮತ್ತು ಬೆಣ್ಣೆಹೊಳೆಯ ಸಮಗ್ರ ಚಿತ್ರ, ಬರಹ ಮತ್ತು ಇಂಟರ್ನೆಟ್ ಬಳಕೆದಾರರಿಗೆ 360 ಡಿಗ್ರಿ ವೀಕ್ಷಣೆಯ ವಿಹಂಗಮ ದೃಶ್ಯವನ್ನು ಒದಗಿಸಿ ಈ ವಾರ ವಿಶ್ವವಿಖ್ಯಾತ ತಾಣ- ಯಾಣದ ಕಡೆ ಪ್ರಯಾಣ ಮುಮದುವರೆಸಿದ್ವಿ. ಆದರೆ ಯಾಣದ ಬಗ್ಗೆ ಬರೆದು ಪ್ರಕಟಿಸೋದು ವಿಷಯವೇ ಅಲ್ಲ. ಏಕೆಂದರೆ ಸಾಮಾನ್ಯವಾಗಿ ಬಹುಪಾಲು ಜನರು ಯಾಣವನ್ನು ನೊಡಿದವರೇ! ಯಾಣದ ಸುತ್ತಾ ಮುತ್ತಾ, ಹೊಳೆಕಡೆ ಹೋದವರೇ!. ಯಾಣದ ಮಹಿಮೆ, ಅಲ್ಲಿಯ ಇತಿಹಾಸ, ಕಥೆ, ಯಾಣಕ್ಕೆ ಹೆಸರು ಬಂದ ಬಗೆ ಮುಂತಾದವುಗಳ ಬಗ್ಗೆ ಯಾಣದಲ್ಲಿನ ದೇವಸ್ಥಾನದ ಅರ್ಚಕರಾದ ದಾಮೋದರ ಹೆಗಡೆಯವರು ಸವಿಸ್ತಾರವಾಗಿ ವರ್ಣಿಸುತ್ತಾರೆ. ಇನ್ನೂ ಸೃಷ್ಟಿಯ ವೈಚಿತ್ರ್ಯಕ್ಕೆ ಸಾಕ್ಷಿಯಾಗಿ ಸಂಶೋಧಕರಿಗೆ ಎದೆಯೊಡ್ಡಿ ನಿಂತಿರುವ ಭೈರವೇಶ್ವರ ಮತ್ತು ಮೋಹಿನಿ ಶಿಖರಗಳು, ಶಿಖರದ ಮೇಲೆ ಬೆಳೆದು ಬೇರು ಬಿಡುತ್ತಿರುವ ಮರಗಳು, ದೊಡ್ಡ ದೊಡ್ಡ ಜೇನುಗೂಡುಗಳು, ಕಾಲುದಾರಿಗಳು, ಬಾವಲಿಗಳು, ಪಾತರಗಿತ್ತಿಗಳು ಇತ್ಯಾದಿಗಳ ಬಗ್ಗೆ ವಿಕಿಪೀಡಿಯಾದಿಂದ ಹಿಡಿದು ನೆನ್ನೆಮೊನ್ನೆ ಗರ್ಲ್ ಫ್ರೆಂಡ್ ಜೊತೆ ಟ್ರಿಪ್ಪು ಹೋದ ಹುಡುಗರ ಫೇಸ್ ಬುಕ್ ವಾಲುಗಳಲ್ಲಿಯವರೆಗೂ ಅನೇಕ ವಿಷಯಗಳ ಮಾಹಿತಿಗಳು ಲಭ್ಯವಾಗುತ್ತವೆ. ಇನ್ನೂ ಶಿರಸಿಯಿಂದ 41ಕಿಲೋಮೀಟರ್ ದೂರವಿರುವ ಯಾಣಕ್ಕೆ ಹೋಗುವ ಮಾರ್ಗ, ಮಧ್ಯದಲ್ಲಿ ಸಿಗುವ ಕಿತ್ತೋದ ರಸ್ತೆಗಳು, ಯಾಣದ ಹತ್ತಿರದ ಅಂಗಡಿಗಳಲ್ಲಿನ ದುಬಾರಿ ರೇಟು, ಅನೈತಿಕ ಚಟುವಟಿಕೆಗೆ, ಎಣ್ಣೆ ಹೊಡೆಯಲು ಪ್ರಶಸ್ತವಾಗಿರುವ ಜಾಗದ ಬಗ್ಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಬರೆಯೋಣವೆಂದ್ರೆ ಅದು ನಮಗೆಲ್ಲರಿಗೂ ಗೊತ್ತಿರೋ ಓಪನ್ ಸೀಕ್ರೆಟ್. ಆದ್ದರಿಂದ ಬರೆದದ್ದನ್ನೇ ಬರೆದು, ತಿಳಿದದ್ದನ್ನೇ ತಿಳಿಸಿ ಬೋರ್ ಹೊಡೆಸೋದ್ರಲ್ಲಿ ಮಜಾ ಇಲ್ಲಾ.
ಯಾಣದ ಸುತ್ತಮುತ್ತಲಿನ ಕಾಡಿನಲ್ಲಿ ಇಂತಹುದೇ 61 ಶಿಖರಗಳಿವೆ ಅಂತ ಗೊತ್ತಿದೆ. ಆದರೆ ನೋಡಿದವರು ಮಾತ್ರ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಆ ಬಗ್ಗೆ ಅಲ್ಲಿನ ಸ್ಥಳಿಯರಿಗೆ ಕೇಳಿದರೂ ಕೂಡಾ ನಮಗೆ ಸಿಗುವುದು ಅಸ್ಪಷ್ಟ ಉತ್ತರ. ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಿದ್ದಾರೋ ಅಥವಾ ನಿಜವಾಗಿಯೂ ಅವರಿಗ್ಯಾರಿಗೂ ಅದರ ವಿಷಯ ಗೊತ್ತೇ ಇಲ್ವೋ ಅನ್ನೋದು ಕೂಡಾ ಗೊತ್ತಾಗೊಲ್ಲ. ನೀವು ಯಾಣದಲ್ಲಿ ಪ್ರದಕ್ಷಿಣೆ ಹಾಕಿರ್ತೀರಿ. ಆದರೆ ಯಾಣದ ದೊಡ್ಡ ಶಿಖರವಾದ ಭೈರವೇಶ್ವರ ಶಿಖರದ ತುದಿಯನ್ನು ಯಾರಾದರೂ ತಲುಪಿದ್ದೀರಾ? ಹೋಗಲಿ ಅದರ ಸಮೀಪವಾದರೂ ಹೋಗುವ ಧೈರ್ಯ ಮಾಡಿದ್ದೀರಾ? ಯಾಣದ ಪ್ರದಕ್ಷಿಣಾ ಮಾರ್ಗದಲ್ಲಿ ಒಂದು ಕಾಲುದಾರಿಯಿದೆ. ಅದರ ಮುಖಾಂತರ ಮೇಲೆ ಹತ್ತಬಹುದಾದ ಮಾರ್ಗವೊಂದಿದೆ. ಆದರದು ನಿಜಕ್ಕೂ ದುರ್ಗಮ. ಅದನ್ನು ಸಾಹಸ ಅನ್ನುವುದಕ್ಕಿಂತಲೂ ದುಸ್ಸಾಹಸ ಅನ್ನುವುದೇ ಸರಿ! ಶಿಖರದ ಮೇಲೇರುತ್ತಿದ್ದಂತೆ ಕೈಕಾಲಿಗೆ ಚುಚ್ಚುವ ಕಲ್ಲುಗಳನ್ನು ಸಹಿಸುವುದೂ ಕಷ್ಟವೇ! ಅದ್ಯಾವುದನ್ನೂ ಲೆಕ್ಕಿಸದೇ ಮೇಲೇರುವಾಗ ಎಷ್ಟೋ ಕಡೆ ಬಳ್ಳಿಗಳೇ ನಮಗೆ ಹತ್ತಿಳಿಯಲು ಆಸರೆ ಒದಗಿಸೋದು. ಮರಗಳೆಲ್ಲಾ ನಮಗಿಂತ ಕೆಳಗೆ ಕುಬ್ಜವಾಗಿ ಹಸಿರು ಸಮುದ್ರದಂತೆ ಕಾಣುತ್ತವೆ. ಆಗ ತಾನೆ ಹುಟ್ಟುತ್ತಿರುವಂತೆ ತೋರುವ ಬೆಳ್ಳನೆಯ ಬೆಣಚು ಕಲ್ಲುಗಳು ಸುಂದರ ಮೋಹಿನಿಯಂತೆ ಚೆಂದವಾಗಿ ಕಂಡರೂ ಭಯಂಕರ ತೊಂದರೆ ಕೊಡುತ್ತದೆ.
ಒಂದು ಲೆವೆಲ್ಗೆ ಬಂದ್ವಿ ಎಂದು ಸಪಾಟಾದ ಜಾಗಕ್ಕೆ ಬಂದ್ರೆ ಅಲ್ಲಿ ಯಾವುದೋ ಪ್ರಾಣಿಯ ವಾಸಸ್ಥಾನದಂತಹ ಗುಹೆಯೊಂದಿದೆ. ಪ್ರಾಣಿಯು ರಾತ್ರಿಯ ಸಮಯದಲ್ಲಿ ಬಂದು ಉಳಿದ ಕುರುಹಾಗಿ ಅದರ ಗುರುತುಗಳು ಗೋಚರಿಸುತ್ತದೆ. ಒಳಗೆ ಒಂದು ಕಡೆ ಸ್ವಾಮಿ ಸಂತರು ತಪಸ್ಸಿಗೆ ಕುಂತಿದ್ದರೇನೋ ಎಂದು ಭಾಸವಾಗುವ ಸ್ಥಳವೊಂದಿದೆ. ಜೊತೆಗೆ ಅಲ್ಲಿಯೇ ಹಿಂದೆ ಚಿತ್ರದುರ್ಗದ ಒಬವ್ವನ ಕಿಂಡಿಯನ್ನು ನೆನಪಿಸುವ ಜಾಗವೂ ಇದೆ. ಶಿಖರದ ಒಳಭಾಗದಲ್ಲೂ ನೀರಿನ ಗುಂಡಿಯೊಂದಿದ್ದು ಈಗಲೂ ಅಲ್ಲಿ ನೀರು ಒಸರುತ್ತಿದ್ದು, ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಗ್ಗೆ ಪುರಾವೆ ಒದಗಿಸುತ್ತವೆ. ಅಲ್ಲಿಂದ ಇನ್ನೂ ಮೇಲಕ್ಕೇರುತ್ತಿದ್ದ ಹಾಗೆ ಕೈ ನಮ್ಮ ಕಾಲುಗಳು ಪದ ಹೇಳುತ್ತಿದ್ದರೆ ಮನ ಮಾತ್ರ ಇನ್ನೂ ಅನ್ವೇಷಣೆಯನ್ನು ಬಯಸುತ್ತಾ ಸಾಗುತ್ತಿತ್ತು. ಮೇಲ್ಗಡೆ ಅಲ್ಲಲ್ಲಿ ಬಿರುಕುಬಿಟ್ಟ ಗೋಡೆಗಳು, ಅಂತಹ ಎತ್ತರದಲ್ಲೂ ಹಚ್ಚಹಸುರಾಗಿದ್ದ ದಪ್ಪ ದಪ್ಪನೆಯ ಪಾಚಿಗಳು, ಅಲ್ಲಲ್ಲಿ ಬೆಳೆದಿದ್ದ ಬೃಹತ್ ಅಣಬೆಗಳು ನಮಗೆ ಅವತಾರ್ ಮೂವಿಯ ಅನ್ಯಗ್ರಹವನ್ನು ನೆನಪಿಸುತ್ತಿತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಮೈಮೇಲೆಯೆ ಎಳೆದುಕೊಳ್ಳುವ ಭಾರೀ ಅನ್ವೇಷಣೆಯದು. ವಿಶ್ರಮಿಸಿಕೊಳ್ಳುತ್ತಾ, ನಿಧಾನವಾಗಿ ನಮ್ಮ ಬ್ಯಾಗುಗಳನ್ನು, ಕ್ಯಾಮರಗಳನ್ನು ತೆಗೆದುಕೊಂಡು ಮೇಲೇರುತ್ತಾ ಸಾಗಿದೆವು. ಮೇಲೆ ಹೋಗುತ್ತಿದ್ದಂತೆ ಬ್ಯಾಗು ಒಯ್ಯುವುದೂ ಅಸಾಧ್ಯವಾದ್ದರಿಂದ ಬ್ಯಾಗನ್ನು ಅಲ್ಲೇ ಬಿಟ್ಟು ಕೇವಲ ಕ್ಯಾಮರ ಮತ್ತು ಟ್ರೈಪಾಡ್ ಮಾತ್ರವೇ ಹಿಡಿದು ಮೇಲೇರುತ್ತಿದ್ದರೂ ಅದೇ ಭಾರವಾದಂತೆ ಅನ್ನಿಸುತ್ತಿತ್ತು. ಇನ್ನು ಹಗ್ಗ ಮತ್ತು ಇನ್ನಿತರ ರಕ್ಷಣಾ ವಸ್ತುಗಳಿಲ್ಲದೆ ಮೇಲೇರಲು ಸಾಧ್ಯವೇ ಇಲ್ಲ, ಎನ್ನುವಷ್ಟು ಮೇಲೇರುವಷ್ಟರಲ್ಲಿ ಕಾಣಿಸಿತು ಇನ್ನೊಂದು ಶಿಖರ. ಕೆಳಗಿನಿಂದ ಕಾಣದ, ದಟ್ಟ ಕಾಡಿನಲ್ಲಿ ಮರೆಯಾಗಿರುವಂತಹ ಇನ್ನೊಂದು ಅತ್ಯದ್ಭುತ ಶಿಖರವದು. ಅದುವೇ ಸಹ್ಯಾದ್ರಿ ಶಿಖರ.
ಸಹ್ಯಾದ್ರಿ ಶಿಖರವೂ ಮೋಹಿನಿ ಶಿಖರದ ಸೋದರನಂತಿದೆ. ಆದರೆ ಅದನ್ನು ನೋಡಲು ಮಾತ್ರ ಹರಸಾಹಸ ಬೇಕೇಬೇಕು. ಅದನ್ನು ನೋಡುತ್ತಲೇ ಪಟ್ಟ ಕಷ್ಟಗಳೆಲ್ಲಾ ಮರೆತು ಮೈಂಡ್ ರಿಲಾಕ್ಸ್ ಆಗತ್ತೆ. ಎಲ್ಲಾ ನೋಡಿ ಮುಗಿಸಿ ಮತ್ತೆ ಇಳಿಬೇಕಾದ್ರೆಯೇ ನಮಗೆ ನಿಜವಾದ ಸವಾಲುಗಳು ಎದುರಾಗೋದು. ಜಂಪ್ ಮಾಡೋಕಾಗೊಲ್ಲ, ಇಳಿಯಲು ಕಾಲು ಸಿಗಲ್ಲ, ತುಂಬಾ ತಾಳ್ಮೆಯಿಂದ ಕಲ್ಲಿನ ಗೊಡೆಯ ಮೇಲೆಯೇ ಕಾಲಿಟ್ಟು ಇಳಿಯುವುದು ಅನಿವಾರ್ಯ. ಎಲ್ಲರಿಗೂ ಹೋಗೋಕಾಗದ ಆ ತಪ್ಪಲಿನ 360 ಡಿಗ್ರಿ ಸುಂದರ ದೃಶ್ಯ ನೋಡಬೇಕಾದ್ರೆ http://sirsi.info/yana-a-wonderful-place/ ಲಿಂಕ್ ಉಪಯೋಗಿಸಿ ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ನೋಡಿ.
ಯಾಣದ ನಂತರ ಅಲ್ಲಿಯೇ ಹರಿವ ವಿಭೂತಿ ಹೊಳೆಯಲ್ಲಿ ವಿಶ್ರಮಿಸಿಕೊಂಡು, ಹೊಳೆಯ ಸುತ್ತಮುತ್ತಲಿನ ಉಂಬಳಗಳಿಗೆ ನಮ್ಮ ರಕ್ತವನ್ನು ದಾನಮಾಡಿ ಅಲ್ಲಿಂದ ಸುಮಾರು ಐದಾರು ಕಿಲೋಮೀಟರ್ ಕ್ರಮಿಸಿದರೆ ಸಿಗೊದು ವಿಭೂತಿ ಜಲಪಾತ. ಈ ಸಮಯದಲ್ಲಿ ಅಂತಹ ನೀರು ಇಲ್ಲ ಹಾಗೂ ಅಷ್ಟೇನೂ ಮನಮೋಹಕವಾಗಿಲ್ಲದಿದ್ದರೂ ನಾವು ಕಷ್ಟಪಟ್ಟು ಜಲಪಾತದ ಮಧ್ಯಭಾಗದಲ್ಲಿ ಹೋಗಿ ಮೇಲೆ ಮತ್ತು ಕೆಳಗೆ ಎರಡೂ ಕಡೆ ನೀರುಬೀಳುತ್ತಿರುವ ಸುಂದರ ಚಿತ್ರ ಸೆರೆಹಿಡಿದು ಕೊಡುತ್ತಿದ್ದೇವೆ. ಆಸಕ್ತರು ಈ ಕೆಳಗಿನ ವೆಬ್ ಲಿಂಕಲ್ಲಿ ನೋಡಬಹುದು.
http://sirsi.info/vibhuti-falls-karnataka/
ಕೊನೆಯದಾಗಿ ಒಂದು ಎಚ್ಚರಿಕೆ ಏನಂದ್ರೆ ಪಡ್ಡೆ ಹುಡುಗರು, ಉತ್ಸಾಹದಲ್ಲಿ ದುಡುಕಿ ಇಂತಹ ಅನ್ವೇಷಣೆಯಲ್ಲಿ ತೊಡಗಿಕೊಂಡರೆ ಅದು ಜೀವಕ್ಕೇ ದುಬಾರಿಯಾಗೋ ಸಂಭವವೇ ಜಾಸ್ತಿ. ಸಾಧ್ಯವಾದಷ್ಟು ಈಗ ಇರೋ ತರಹವೇ ಯಾಣವನ್ನು ನೋಡಿ ಆನಂದಿಸಿ. ಮುನ್ನೆಚ್ಚರಿಕೆ ಇಲ್ಲದೇ ಯಾವುದೇ ಸಾಹಸಕ್ಕೂ ಕೈ ಹಾಕಬೇಡಿ.


No comments:

Post a Comment