Saturday 28 March 2015



ನಮ್ಮ ಶಿರಸಿಯ ಜನರಿಗೆ ಶ್ರೀ ಮಾರಿಕಾಂಬೆಯ ಮೇಲೆ ಹೆಮ್ಮೆಯಿಲ್ಲವೆ?
ಶ್ರೀ ಮಾರಿಕಾಂಬೆ ನಮ್ಮ ಆರಾಧ್ಯ ದೇವತೆ. ಶಿರಸಿಗರ ಪಾಲಿನ ಹೆಮ್ಮೆಯ ಸಿರಿ. ಶ್ರೀ ಮಾರಿಕಾಂಬಾ ದೇಗುಲ ನಮ್ಮದೆಂದು ಖುಷಿಯಿಂದ ಹೇಳಿಕೊಳ್ಳುತ್ತೇವೆ. 320 ವರ್ಷಗಳ ಇತಿಹಾಸವಿರುವ ಈ ಭವ್ಯ ದೇಗುಲ ನಮ್ಮದೆಂದು ನಾವೇ ಖುಷಿಪಡುತ್ತೇವೆ. ಆದರೆ ದೊಡ್ಡ ಹೆಸರು ಮಾಡುವ ಒಂದು ಚಿಕ್ಕ ಕೆಲಸ ಮಾಡಲು ನಮ್ಮವರಿಂದ ಆಗುತ್ತಿಲ್ಲವೆಂಬುದು ನಿಜಕ್ಕೂ ಬೇಸರದ ಸಂಗತಿ.
ಅಂಚೆ ಚೀಟಿ ಯಾರಿಗೆ ಗೊತ್ತಿಲ್ಲ ಹೇಳಿ. ತರಹೇವಾರಿ ಅಂಚೆ ಚೀಟಿಗಳು ನಮ್ಮಲ್ಲಿವೆ. ಅಂಚೆ ಚೀಟಿಯಲ್ಲಿ ಬರುವ ಚಿತ್ರ ಸುಮ್ಮನೇ ಯಾರೋ ಬಿಡಿಸಿದ್ದಲ್ಲ ಅಥವಾ ಸುಂದರವಾಗಿದೆಯೆಂದು ಸರಕಾರದವರು ಛಾಪಿಸಿದ್ದಲ್ಲ. ಅಂಚೆಚೀಟಿಯ ಮೇಲೆ ಚಿತ್ರ ಬರಬೇಕಿದ್ದರೂ ಅದಕ್ಕೆ ಸಂಬಂಧಪಟ್ಟ ಅದರದ್ದೇ ಆದ ಸಮಿತಿಯಿದೆ. ಅದಕ್ಕೇ ಪ್ರತ್ಯೇಕ ಮಾನದಂಡವಿದೆ. ಹೀಗೆ ಒಮ್ಮೆ ಅಂಚೆ ಚೀಟಿಯಲ್ಲಿ ಚಿತ್ರ ಬರಬೇಕೆಂದರೂ ಅದರಲ್ಲಿ ಏನಾದರೂ ವಿಶೇಷತೆಯಿರಲೇಬೇಕು. ಜೊತೆಗೆ ಅದೊಂದು ಗೌರವದ ವಿಷಯ. ನಮ್ಮ ಭಾರತೀಯ ಪೋಸ್ಟಲ್ ಡಿಪಾರ್ಟಮೆಂಟಿನವರು ಈಗಾಗಲೆ ಭಾರತದಲ್ಲಿರುವ ಐತಿಹಾಸಿಕ ಸ್ಥಳಗಳು, ಪ್ರಾಣಿ ಪಕ್ಷಿಗಳು, ಹೂವುಗಳು, ಪುಣ್ಯ ಕ್ಷೇತ್ರಗಳು ಮತ್ತು ವಿವಿಧ ವ್ಯಕ್ತಿತ್ವಗಳ ಮೇಲೆ ಸಾವಿರಾರು ಅಂಚೆಚೀಟಿಗಳನ್ನು, ದೇಶದ ಎಲ್ಲಾ ರಾಜ್ಯಗಳ ವಿಶೇಷತೆಗಳನ್ನು ಬಿಂಬಿಸುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ನಮ್ಮ ಕರ್ನಾಟಕ ರಾಜ್ಯಕ್ಕೆ ಸಹಾ ಸಂಬಂಧಪಟ್ಟಂತಹ ಕೆಲವೇ ಕೆಲವೊಂದು ಘಟನೆಗಳಿಗೆ ಮೀಸಲಾದ, ಸೀಮಿತ ಸ್ಥಳಗಳಿಗೆ ಸಂಬಂಧಪಟ್ಟು ಅಂಚೆಚೀಟಿಯನ್ನು ಮಾಡಿದ್ದಾರೆ. ಆದರೆ ಆಗಬೇಕಾದದ್ದು ಇನ್ನೂ ಬಹಳ ಪ್ರೇಕ್ಷಣೀಯ ಸ್ಥಳಗಳಿವೆ, ವ್ಯಕ್ತಿತ್ವಗಳಿದ್ದಾರೆ. ಆದರೆ ಅದರ ಬಗ್ಗೆ ಗಮನ ಹರಿಸಬೇಕಾದವರು ಶಿರಸಿಯವರಾದ ನಾವೇ ಅಲ್ಲವೇ?
ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಂಚೆ ಚೀಟಿಯ ಹಿರಿಯ ಸಂಗ್ರಾಹಕರಾದ ಶ್ರೀ ನರಸಿಂಹಮೂರ್ತಿಯವರು ನಿರಾಶೆಯಿಂದ ಹೇಳ್ತಾರೆ, "ಸ್ಥಳಗಳ ವಿಷಯಗಳನ್ನು ತೆಗೆದುಕೊಂಡರೆ ಅಂತವುಗಳಲ್ಲಿ ಶಿರಸಿ ಶಹರದಲ್ಲಿರುವ ಪುರಾತನ ಶ್ರೀ ಮಾರಿಕಾಂಬಾ ದೇಗುಲವೂ ಒಂದು. ಇಂತಹ ಈ ದೇವಾಲಯದಲ್ಲಿ ಸಾವಿರಾರು ಭಕ್ತರು ದಿನಂಪ್ರತಿ ಭೇಟಿ ನೀಡುತ್ತಾರೆ. ಇಂತಹ ಪ್ರಸಿದ್ಧ ಸ್ಥಳವನ್ನು ಅಂಚೆಚೀಟಿಯಲ್ಲಿ ಬರುವಂತೆ ಮಾಡಲು ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸಂಸದರು, ಶಾಸಕರ ಹತ್ತಿರ ವಿನಂತಿ ಮಾಡಿಕೊಂಡಿದ್ದರೂ ಸಹಾ ಅಂಚೆ ಚೀಟಿ ಹೊರ ತರಲು ಹೆಚ್ಚಿನ ಗಮನ ಹರಿಸಲಿಲ್ಲ. ಆದ್ದರಿಂದ ದಯವಿಟ್ಟು ಇನ್ನು ಮುಂದಾದರೂ ನಮ್ಮ ಸಂಸ್ಕೃತಿಗೆ ತಕ್ಕದಾದ ಇಂತಹ ಒಂದು ಭವ್ಯವಾದ ಪರಂಪರೆಯುಳ್ಳ ಶ್ರೀ ಮಾರಿಕಾಂಬಾ ದೇವಸ್ಥಾನದ ಹಿನ್ನೆಲೆಯುಳ್ಳ ಒಂದು ಅಂಚೆಚೀಟಿಯನ್ನು ಭಾರತ ಸರಕಾರ ಆದಷ್ಟು ಬೇಗ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪ್ರಯತ್ನ ಮಾಡಬೇಕು."
ಪಕ್ಕದ ತಮಿಳುನಾಡಿನ ಜನರಿಂದ ಇಂತಹ ವಿಷಯಗಳನ್ನು ನಾವಿಂದು ಕಲಿಯಬೇಕಿದೆ. ತಮಿಳುನಾಡಿದ ಬಹುತೇಕ ಎಲ್ಲಾ ಚರ್ಚುಗಳು, ದೇವಾಲಯಗಳನ್ನು ಅಲ್ಲಿಯ ಜನರು ಈಗಾಗಲೇ ದೇಶ-ವಿದೇಶದ ಜನರು ಗುರುತಿಸುವಂತೆ ಮಾಡಿದ್ದಾರೆ. ಆದರೆ ನಾವು? ಬೇಲೂರು, ಹಳೇಬೀಡು, ಜೋಗ, ಹಂಪಿ, ಶ್ರವಣಬೆಳಗೊಳದ ಗೊಮ್ಮಟೇಶ್ವರ ಹಾಗೆಯೆ ಮೊನ್ನೆ ಮೊನ್ನೆ ಗದಗಕ್ಕೆ ಸಂಬಂಧಪಟ್ಟಂತೆ ಒಂದು ಅಂಚೆ ಚೀಟಿ ಬಿಡುಗಡೆ ಮಾಡಿಸಿದ್ದು ಬಿಟ್ಟರೆ ಇಲ್ಲಿನ ನೂರಾರು ವಿಶೇಷತೆಗಳು ಹೊರಜಗತ್ತಿಗೆ ಗೊತ್ತೇ ಇಲ್ಲ. ಯಾಕೆಂದರೆ ಅದನ್ನು ನಾವು ಎಲ್ಲಿಯೂ ಎಲ್ಲರಿಗೂ ತಿಳಿಯುವ ತರ ಮಾಡೇ ಇಲ್ಲ! ಜೈನ ದೇವಾಲಯಗಳು, ಅಮೃತಸರದ ಗೋಲ್ಡನ್ ಟೆಂಪಲ್, ತಮಿಳುನಾಡಿನ ಸುಮಾರು ಎಲ್ಲಾ ಪ್ರಮುಖ ದೇವಾಲಯಗಳೂ ಅಂಚೆ ಚೀಟಿಯಲ್ಲಿ ಮುದ್ರಣಗೊಂಡಿರುವಾಗ ನಮ್ಮಲ್ಲಿ ಮಾತ್ರ ಏಕೆ ಆಸಕ್ತಿ ಮತ್ತು ಒತ್ತಡದ ಕೊರತೆಯಿದೆ?
ಕೆಲವರು ಕೇಳ್ತಾರೆ ಈಗ ಅಂಚೆ ಚೀಟಿ ಮೇಲೆ ಚಿತ್ರ ಬರುವುದರಿಂದ ಏನು ಪ್ರಯೋಜನ ಅಂತ? ಹಾಗೆ ಮಾಡುವುದು ಯಾರೊಬ್ಬರ ಸ್ವಹಿತದಿಂದಲ್ಲ. ಇಲ್ಲಿ ಯಾವ ಸ್ವಾರ್ಥವೂ ಅಡಕವಾಗಿಲ್ಲ. ಬದಲಿಗೆ ನಮ್ಮ ಪ್ರದೇಶದ ಬಗ್ಗೆ ಹೊರಗಿನ ಪ್ರಪಂಚಕ್ಕೆ ಪ್ರಚಾರವಾಗುತ್ತದೆ. ನಮ್ಮ ದೇಶದ ಜನರಿಗೆ ನಮ್ಮ ಸಂಸ್ಕೃತಿಯ ಅನಾವರಣವಾಗುತ್ತದೆ. ಮುಂದಿನ ಪೀಳಿಘೆಗೆ ಒಂದು ಮಾಹಿತಿಯಾಗುತ್ತದೆ. ಪ್ರವಾಸೋಧ್ಯಮಕ್ಕೆ ಅನುಕೂಲಕರವಾಗುತ್ತದೆ. ಶಿರಸಿಯಂತಹ ಒಂದು ಅಭಿವೃದ್ಧಿ ಹೊಂದುತ್ತಿರುವ ನಗರದ ಬಗ್ಗೆ ವಿಶ್ವಮಟ್ಟದಲ್ಲಿ ಹೆಸರು ಬರುತ್ತದೆ. ನಾಳೆ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಬೇಕಾದಂತಹ ದೇವಸ್ಥಾನ ನಮ್ಮದು. ಬರೀ ಚಿತ್ರವೊಂದು ಅಂಚೆ ಚೀಟಿಯಲ್ಲಿ ಬರುವುದರಿಂದ ಅದರ ಬಗ್ಗೆ ಲಕ್ಷಾಂತರ ಆಸಕ್ತರು ಅಧ್ಯಯನ ಮಾಡುತ್ತಾರೆ. ನಮ್ಮ ದೇವಸ್ಥಾನದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಮುಂದಿನ ಪೀಳಿಗೆಯವರಿಗೆ ದಿಕ್ಸೂಚಿಯಾಗುತ್ತದೆ. ನಮ್ಮ ಹಳೆಯ ಸಂಸ್ಕೃತಿಗೆ ಮತ್ತು ಕಲೆಗೆ ನಾವು ಕೊಡುವ ಗೌರವವಾಗುತ್ತದೆ. ಅವಶ್ಯವಿರುವ ಕೆಲಸ. ನಮ್ಮ ಊರಿಗೆ ಇಷ್ಟೆಲ್ಲಾ ಅನುಕೂಲಗಳಿರುವಾಗ ನಮ್ಮ ಜನಪ್ರತಿನಿಧಿಗಳು ಅದರ ಬಗ್ಗೆ ಗಮನ ಕೊಡಬೇಕಾಗಿದೆ. ನಮ್ಮ ನಾಗರೀಕರು ಕೂಡಾ ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒತ್ತಾಯಿಸುವ ಜರೂರತ್ತಿದೆ. ಮಾಧ್ಯಮ ಮಿತ್ರರೂ ಕೂಡಾ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೈ ಜೊಡಿಸಿದರೆ ನಮ್ಮ ಶಿರಸಿಯ ಹೆಮ್ಮೆಯ ಶ್ರೀ ಮಾರಿಕಾಂಬೆ ಮತ್ತು ದೇವಾಲಯ ಅಂಚೆ ಚೀಟಿಯಲ್ಲಿ ಪ್ರಕಟಗೊಂಡು ದೇಶ-ವಿದೇಶಗಳವರೆಗೆ ನಮ್ಮ ಶಿರಸಿಯ ಘಮ ಪಸರಿಸುವುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿಯಿದ್ದರೆ ಈ ಕೂಡಲೇ ನಮ್ಮ ಅಂಚೆ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಿ. ನಮ್ಮ ಚಿಕ್ಕ ಪತ್ರ ಮುಂದಿನ ದೊಡ್ಡ ಪೀಳಿಗೆಯವರಿಗೆ ಅಧ್ಯಯನಕ್ಕೆ ವಿಷಯವಾಗಬಹುದು.


No comments:

Post a Comment