Saturday 28 March 2015

SOME ಮಾತು
ಲವ್ ಅನ್ನೂ ಲವ್ ಮಾಡಿ
ಮೊದಲೆಲ್ಲಾ ಹೀಗಿರಲಿಲ್ಲ. ಲವ್, ಪ್ರೀತಿ, ಪ್ರೇಮ ಇತ್ಯಾದಿಗಳ ಬಗ್ಗೆ ಜಾಸ್ತಿ ಮಾತಾಡ್ತಾನೂ ಇರ್ಲಿಲ್ಲ. ತಲೆಕೆಡಿಸ್ಕೋತಾನೂ ಇದ್ದಿರಲಿಲ್ಲ. ಆದರೆ ಯಾಕೋ ಇತ್ತೀಚೆಗೆ ಇದರ ಹಾವಳಿ ಅತಿ ಎನಿಸಿ ಬಿಟ್ಟಂತಿದೆ. ಅದು ಯಾವಾಗ ಅಂದ್ರೆ ಈ ಹರೆಯದ ಹುಡುಗ ಹುಡುಗಿಯರು ಕಾಲೇಜಿನ ಪಾಠ ಓದೋದ ಬಿಟ್ಟು ಸಾಯುವುದು ಹೇಗೆ ಅನ್ನೋದ್ರ ಬಗ್ಗೆ ಕಪಲ್ ಆಗಿ ಕುಂತು ಮಾತಾಡೋಕೆ ಶುರು ಮಾಡಿದ್ರೋ ಆವಾಗಿಂದ! ಪ್ರೇಮಿಗಳ ಆತ್ಮಹತ್ಯೆ ಅನ್ನೋ ನ್ಯೂಸ್ ಓದದೆ ವಾರವೇ ಪೂರ್ತಿ ಆಗಲ್ಲವೆನೋ ಎನ್ನುವಷ್ಟರ ಮಟ್ಟಿಗೆ ಲವ್ವಮ್ಮನ ಕುತ್ತಿಗೆ ಮೇಲೆ ಪರಶುರಾಮನ ಆಯುಧ ಇಟ್ಕೊಂಡು ನಿಂತಿದಾರೆ ಆಧುನಿಕ ಅಮರ ಪ್ರೇಮಿಗಳು! ಗಡಿಗಳಲ್ಲಿ ಉದುರೋ ಸೈನಿಕರ ಬುಲೆಟ್ಟಿನಂತೆ ದೇಶದೊಳಗೆ ಪ್ರೇಮಿಗಳು ಅಂತ ಹೇಳಿಕೊಳ್ಳೊ ಎಷ್ಟೋ ಜನ ಹೊಗೆ ಹಾಕಿಸ್ಕೊಂಡು ನಿರಂತರವಾಗಿ ತಿಥಿ ಮಾಡಿಸೊಳ್ತಾ ಇದಾರೆ. ಕೆಲವರು ಭಗ್ನ ಪ್ರೇಮಿಗಳು, ಕೆಲವರು ನಗ್ನ ಪ್ರೇಮಿಗಳು. ಕೆಲವರು ತಾವೇ ಸಾಯ್ತಾರೆ, ಕೆಲವರು ಬೇರೆಯವರನ್ನು ಸಾಯಿಸ್ತಾರೆ. ಪಾಪ, ಈ ಎಲ್ಲಾ ಪಾಪಗಳೂ ಒಟ್ಟಿಗೆ ಹೋಗಿ ಸೇರೋದು 'ಲವ್ವು' ಅನ್ನೋ ಅಮಾಯಕಿ ಹತ್ರ!!
ಒಮ್ಮೊಮ್ಮೆ ಅನ್ಸತ್ತೆ ಈ ಲವ್ ಅಂತ ನಾವೇನು ಬಡಬಡಿಸ್ತೇವೋ.. ಅದಕ್ಕೊಂದು ಅಸ್ತಿತ್ವವೇ ಇಲ್ಲವೇನೋ ಅಂತ! ಅದು ಒಬ್ಬೊಬ್ಬರತ್ರ ಒಂದೊಂದು ತರ ಸೆಟಲ್ಮೆಂಟ್ ಮಾಡಿಕೊಂಡು ಇದ್ದುಬಿಡತ್ತೆ. ತಂದೆನೋ ತಾಯಿನೋ ಹತ್ರ ಇದ್ರೆ ಇದೇ ಪೇರೆಂಟ್ಸ್ ಲವ್ ಗೆ ಮಮತೆ ಅಂತಾರೆ. ಸ್ನೇಹಿತರ ಜೊತೆಗಿದ್ರೆ ಫ್ರೆಂಡ್ಸ್ ಲವ್ ಸ್ನೇಹ ಅನ್ನಿಸಿಕೊಳ್ಳತ್ತೆ. ಬ್ರದರ್ರೋ, ಸಿಸ್ಟರ್ರೋ ಜೊತೆಗೆ ಲವ್ವಿದ್ರೆ ಅದು ಕೇರಿಂಗ್ ಅನ್ನಿಸಿಕೊಳ್ಳತ್ತೆ. ಗುರು ಹಿರಿಯರಿಗೆ ನಮ್ಮ ಮೇಲೆ ಲವ್ ಆದ್ರೆ ಆಶೀರ್ವಾದ ಅಂತೇವೆ. ನಮಗೇ ಗುರುಹಿರಿಯರ ಮೇಲೆ ಲವ್ವಾದ್ರೆ ಗೌರವ ಅಂತೇವೆ. ಮದುವೆ ಆಗಿದ್ರೆ ಆಗ ಇದೇ ಲವ್ ಗೆ ಹೊಂದಾಣಿಕೆ ಅಂತೇವೆ. ನಮ್ಮ ಮೇಲೆನೇ ನಮಗೆ ಸ್ವಲ್ಪ ಲವ್ವಿದ್ರೆ ಆತ್ಮವಿಶ್ವಾಸ ಅಂತಾನೂ, ಜಾಸ್ತಿ ಲವ್ವಿದ್ರೆ ಸ್ವಾರ್ಥ ಅಂತಾನೂ ಹಣೆಪಟ್ಟಿ ಕಟ್ಟಿ ಬಿಡ್ತೇವೆ. ಇಷ್ಟೆಲ್ಲಾ ಜೀವನದಲ್ಲಿ ಕಾಂಪ್ರಮೈಸ್ ಆಗಿರೋ ಲವ್ ನಾ ನಾವು ಬೇರೆಯೇ ತೆರನಾಗಿ ನೋಡ್ತೆವೆ. ಲವ್ ಅನ್ನೂ ಲವ್ ಮಾಡೋ ಲವರ್ ಬೇಕಿತ್ತು ಅನ್ನಿಸೋದು, ಅನುಕಂಪ ಉಕ್ಕೋದು ಇಂಥಾ ಸಮಯದಲ್ಲಿಯೇ!
ಕೆಲವರು ಅಂದ್ಕೋಬಹುದು. ಈ ಪ್ರೀತಿ ಪ್ರೇಮದ ವಿಷಯದಲ್ಲೆಲ್ಲಾ ನಾ ತುಂಬಾ ಸ್ಟ್ರಿಕ್ಟು ಅಂತ! ಪಾಪ ಅವರಿಗೇನು ಗೊತ್ತು ಎರಡು ವಾಚು ಕಟ್ಟಿರುವವನಿಗಿಂತ ಒಂದು ವಾಚು ಕಟ್ಟಿದವನಿಗೇ ಕಾಂಫಿಡೆನ್ಸು ಜಾಸ್ತಿ ಅನ್ನೋದು! ಲವ್ ಫೇಲ್ಯೂರ್ ಆಯ್ತು, ಜೀವನದಲ್ಲಿ ಕೆಳಗೆ ಬಿದ್ದೆ ಅಂತ ಗೋಳಾಡುವವರು ಎಲ್ಲಿ ಬಿದ್ದಿದೀರ ಅಂತಾ ನೋಡದೆ, ಎಲ್ಲಿಂದ ಬೀಳೋಕೆ ಶುರುವಾಯ್ತು ಅನ್ನೋ ಬಗ್ಗೆ ಯೋಚಿಸಿ. ಶಾಂತಿ ಇಲ್ಲಾ ಅಂತ ಗೊಣಗ್ತಾ ಇರೋ ಬದ್ಲು ನಮ್ಮ ಗಮನ ಗುರಿಯತ್ತ ನೆಟ್ಟಿದ್ರೆ, ನಮ್ಮ ಮೇಲೆ ನಮಗೇ ಲವ್ವಿದ್ರೆ ಶಾಂತಿಗಿಂತ ಸುಂದರವಾದ ಕಾಂತಿ ಸಿಗ್ತಾಳೆ! ಕ್ಷೀಣಿಸಿದ ಸಮಯದಲ್ಲೂ ನಮಗೆ ಖುಷಿ ಸಿಕ್ಕಿದ್ರೆ ಅದು ವ್ಯರ್ಥವಲ್ಲ. ಲೈಫಲ್ಲಿ ಯಾವುದನ್ನೂ ವಿವರಿಸಿ ಹೇಳ್ತಾ ಹೋಗ್ಬಾರ್ದು. ಯಾರಿಗೂ ಬೇಕಾಗಿಲ್ಲ ಆ ವಿವರಣೆ. ಸ್ನೇಹಿತರಿಗೆ ಅಗತ್ಯವಿಲ್ಲ, ಶತೃಗಳು ನಂಬಲ್ಲ.
ಲವ್ ಅಂದ್ರೆ ಜೀವನ. ಲವ್ ಅಂದ್ರೆ ಪಾಠ. ಲವ್ ಅಂದ್ರೆ ತ್ಯಾಗ. ಲವ್ ಅಂದ್ರೆ ಕ್ಷಮೆ. ಲವ್ ಅಂದ್ರೆ ಸಿಟ್ಟು, ಲವ್ ಅಂದ್ರೆ ಸಮಾಧಾನ. ಹೀಗೆ ನಾನಾ ಮಜಲುಗಳಲ್ಲಿ ಪ್ರವಹಿಸೋ ಲವ್ ಒಂಥರಾ ಕರೆಂಟ್ ತರ. ಕಣ್ಣಿಗೆ ಕಾಣಲ್ಲ. ಆದ್ರೆ ಕೆಲವೊಮ್ಮೆ ಅದರ ಇರುವಿಕೆ ಗೊತ್ತಾಗತ್ತೆ. ಕೆಲವೊಮ್ಮೆ ಅದೇ ಜೀವನ. ಕೆಲವೊಮ್ಮೆ ಅದರಿಂದಲೇ ಮರಣ. ಲವ್ ಇದ್ದಲ್ಲಿ ಬಹಳಷ್ಟು ಬಾರಿ ಪ್ರಾಮಾಣಿಕತೆ ಇರತ್ತೆ. ಲವ್ ಇದ್ದಲ್ಲಿ ಹಣವೂ ಇರತ್ತೆ. ಲವ್ ಇದ್ದಲ್ಲಿ ಮರೆಯಲೇ ಬೇಕಾದಂತ ಕಹಿ ನೆನಪಿರತ್ತೆ. ಅದು ಗಾಯವನ್ನು ವಾಸಿಮಾಡಿದರೂ ಕಲೆಯನ್ನು ಹಾಗೇ ಉಳಿಸಿರತ್ತೆ. ಲವ್ ಅಲ್ಲಿ ಯಶಸ್ಸಿದೆ. ಒಂದೊಳ್ಳೆ ಪ್ರೀತಿಭರಿತ ಹಾರೈಕೆ ಅಸಾಧ್ಯವನ್ನೂ ಸಾಧಿಸುವತ್ತ ಪ್ರೇರೇಪಿಸುತ್ತೆ. ಕೊನೆಗೊಂದು ಮಾತು- ಲವ್ ಅಂದ್ರೆ ಬೇರೇನೂ ಅಲ್ಲ. ಕೇವಲ ಲೈಫ್. ನಮ್ಮ ಲೈಫ್. ಜೀವನದಲ್ಲಿ ಹಲವಾರು ವಿಷಯಗಳನ್ನು ಕಲಿತಿದ್ರೆ ಅದಕ್ಕೆ ಕಾರಣವೇ ಈ ಲವ್. ಅದು ನಮ್ಮ ಮೇಲಿನ ಪ್ರೀತಿಯಿರಬಹುದು, ಪರಿಸ್ಥಿತಿಯ ಅನಿವಾರ್ಯತೆಯಿರಬಹುದು. ಬೇರೆ ಬೇರೆ ಹೆಸರಿನಿಂದ ಆವೃತವಾಗಿದ್ರೂ ಅದು ಲವ್ವೇ..! ಅದ್ಕೆ ಹೇಳಿದ್ದು ಲವ್ ಅನ್ನೂ ಲವ್ ಮಾಡಿ. ಅದರ ರೂಪ ಬೇರೆಬೇರೆ ಇದ್ರೂ ಸಮಾಧಾನಿಸಿ ಸಮಸ್ಯೆಗೊಂದು ಗತಿಕಾಣಿಸಿ ಅಂತಾ! ಲವ್ ಯು..!

No comments:

Post a Comment