Saturday 28 March 2015

ಮನ್ಮಥನಾಮ ಸಂವತ್ಸರ ಯುಗಾದಿ

ಯಾಂತ್ರಿಕ ಜೀವನದಿಂದ ಬೇಸತ್ತಿರುವ ಮನಸ್ಸನ್ನು ಪ್ರಫುಲ್ಲವಾಗಿಡಲು ಸ್ವಲ್ಪ ಬದಲಾವಣೆ, ಚೂರು ಹೊಸತನ ಸಿಕ್ಕರೂ ಸಾಕು. ಏನೋ ಒಂದು ತರಹದ ಉಲ್ಲಾಸ, ಉತ್ಸಾಹ. ಸ್ವಲ್ಪ ಸಮಾಧಾನಿಸಿ ಹೊರಗೆ ನೋಡಿ! ಎಲೆ ಕಳಚಿಕೊಂಡು ಮರಗಳು ಚಿಗುರಲು ಆರಂಭಿಸಿವೆ. ಓಡುತ್ತಿರುವ ಮೋಡ ಏನೋ ಸಂಚಲನ ಸೃಷ್ಟಿಸುವಂತೆ ಭಾಸವಾಗುತ್ತಿದೆ. ಕೋಗಿಲೆಯ ಕೂಗು ವಿಶೇಷವಾಗಿ ಕೇಳುತ್ತಿವೆ. ಏನೋ ಒಂದು ರೀತಿಯ ಅದ್ಭುತ ತಳಮಳದ ಮಧ್ಯೆಯೇ ಹೊಸತನ್ನು ಸ್ವಾಗತಿಸಲು ಪ್ರಕೃತಿಯೇ ನಿಂತಂತಿದೆ. ಆರಂಭ ಶುಭದೊಂದಿಗೆ ಶುರುವಾದರೆ ಎಂಥಾ ಕಷ್ಟದ ಸವಾಲುಗಳನ್ನು ಕೂಡಾ ಎದುರಿಸುವ ಆತ್ಮವಿಶ್ವಾಸ ತನ್ನಿಂತಾನೇ ಬರುತ್ತದೆ. ಈಗ ಅಂತಹುದೇ ಆರಂಭ ಮತ್ತೆ ಬಂದಿದೆ. ಅಂದರೆ ಹಳೆಯ ದುಃಖಗಳನ್ನು ಮರೆತು ಸುಖಗಳನ್ನು ನೆನೆಯುತ್ತಾ ಹೊಸತನ್ನು ಹಬ್ಬದ ಮೂಲಕ ಸ್ವಾಗತಿಸೋಣ. ಭಾರತವು ಹಬ್ಬಗಳ ತವರು. ಇಲ್ಲಿ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ಕಾರಣಗಳು, ಆಚರಿಸುವ ವಿಧಾನಗಳು, ಅದರ ಹಿಂದಿರುವ ವೈಜ್ಞಾನಿಕ ಸತ್ಯ ಸಂಗತಿಗಳು ಅಡಕವಾಗಿದೆ. ನಮ್ಮ ಪೂರ್ವಿಕರಿಗೆ ಖಗೋಳ ಗಣಿತದ ಬಗ್ಗೆಯೂ ಅಪಾರ ಪಾಂಡಿತ್ಯ. ಹೀಗೆ ಭೂಮಿ, ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಮಂಡಲದ ಚಲನವಲನ, ವೇದಾಂಗ ಜ್ಯೋತಿಷ್ಯದ ಬಗ್ಗೆ ಸುಧೀರ್ಘ ಆಳ ಅಧ್ಯಯನದಿಂದ ಹಿಂದೂ ಪಂಚಾಂಗದ ಚಂದ್ರಮಾನ ರೀತಿಯಾಗಿ ಚೈತ್ರಮಾಸದ ಮೊದಲ ದಿನ ಅಂದರೆ ಪ್ರಚಲಿತ ಜಾಗತಿಕ ಕ್ಯಾಲೆಂಡರ್ ಪ್ರಕಾರ ಮಾರ್ಚ್ 21ರಂದು ನಮಗೆಲ್ಲಾ ಹೊಸವರ್ಷ ಆರಂಭವಾಗುತ್ತದೆ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಮೊದಲಿನಿಂದಲೂ ರೂಢಿಯಲ್ಲಿದೆ.

ಹೊಸವರ್ಷ ಅಂದರೆ ಯುಗದ ಆರಂಭ. ಅದೇ ಯುಗಾದಿ ಕನ್ನಡಿಗರೆಲ್ಲರಿಗೂ ಇದು ಬಹಳ ಮುಖ್ಯವಾದ ಹಬ್ಬ. ಮನೆಮನೆಯಲ್ಲೂ ಸಡಗರ ಸಂಭ್ರಮ. ಎಲ್ಲೆಲ್ಲೂ ಹಸಿರು ತೋರಣಗಳ ಅಲಂಕಾರ. ಪಂಚಾಂಗ ಪೂಜೆ ನಂತರ ಬೇವು-ಬೆಲ್ಲದ ಮಿಶ್ರಣವನ್ನು ಹಂಚಿ ತಿನ್ನುವ ಸಂಪ್ರದಾಯ. ಮುಂಬರುವ ಸುಖ-ದು:ಖಗಳನ್ನೂ ಸಮನಾಗಿ ಸ್ವೀಕರಿಸುತ್ತೇನೆ ಎನ್ನುವ ವಾಗ್ದಾನದ ಸಂಕೇತ.

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರತಮೇಹನಿ
ಶುಕ್ಲಪಕ್ಷೇ ಸಮಗ್ರಂ ತು ತದಾ ಸೂರ್ಯೋದಯೇ ಸತಿ

ಅಂದರೆ ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಠಿ ಪ್ರಾರಂಭಿಸಿದನಂತೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು. ಹಿಂದೂ ಜನಾಂಗಕ್ಕೆ ಯುಗಾದಿಯಂದು ಹೊಸವರ್ಷ ಪ್ರಾರಂಭವಾಗುತ್ತದೆ. ಹೊಸ ಪಂಚಾಂಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರುಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು;ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಇನ್ನು ಹಬ್ಬದ ಆಚರಣೆಯೂ ವಿಶೇಷವಾಗಿಯೇ ಇರುತ್ತದೆ. ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ- ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರಪ್ರದೇಶದಲ್ಲಿ ಹುಣಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ಕರ್ನಾಟಕದಲ್ಲಿಯೇ ಹಲವು ಕಡೆ ಹಲವು ತೆರನಾಗಿ ಆಚರಿಸುತ್ತಾರೆ. ಮಲೆನಾಡು ಕರಾವಳಿ ಭಾಗದಲ್ಲಿ ವಿಶೇಷ ಪೂಜೆಯ ಜೊತೆಗೆ ಶೋಭಾಯಾತ್ರೆ ಮುಖಾಂತರ ವಿವಿಧ ರೂಪಕಗಳ ಮೂಲಕ ಧರ್ಮ ಜಾಗೃತಿ, ಏಕತೆಯ ಪ್ರತೀಕ ಸಾರುವ ಸಂದೇಶ ತಿಳಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಯುಗಾದಿಯನ್ನು ಆಟ ಆಡಿ ಮೋಜಿನೊಂದಿಗೆ ಆಚರಿಸುವುದನ್ನು ಕಾಣಬಹುದು. ಆದರೆ ಇವೆಲ್ಲದರ ಹಿಂದೆ ಸಂಘಟಿತರಾಗುವ, ಒಂದೆಡೆ ಸೇರುವ ಭಾಂದವ್ಯ ಬೆಳೆಸುವ ಉದ್ದೇಶ ಇದ್ದಂತೆ ತೋರುತ್ತದೆ. ಈ ಯುಗಾದಿಯ ವಿಶೇಷ ದಿನದಂದು ಉಷಾಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತಾ, ದೇವರ ಮನೆ ಮತ್ತು ಮನೆಯ ಮುಖ್ಯದ್ವಾರಗಳಲ್ಲಿ ರಂಗವಲ್ಲಿ ಮತ್ತು ಮಾವಿನ ಎಲೆ, ಹೂವಿನ ತೋರಣಗಳಿಂದ ಸಿಂಗರಿಸಿ, ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಹೊಸ ವರ್ಷದ ಪಂಚಾಂಗವನ್ನು ದೇವರ ಸಮೀಪ ಇಟ್ಟು ಪೂಜಿಸಿ, ಸನ್ಮಿತ್ರರು ಇರುವ ಸಭೆಯಲ್ಲಿ ಪುರೋಹಿತರು ಪಟಿಸುವ ಪಂಚಾಂಗ ಶ್ರವಣವನ್ನು ಆಲಿಸಬೇಕು. ಆಗ ನೂರು ವರ್ಷಗಳ ಆಯುಷ್ಯ, ದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆಂದು ಸೇವಿಸಬೇಕು. ಇದು ಪ್ರತೀತಿ. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೆಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಇದು ವಾಸ್ತವ.

ಹಬ್ಬ ಅಂದಮೇಲೆ ಊಟಕ್ಕೆ ಕೂಡಾ ಪ್ರಾಮುಖ್ಯತೆ ಇರಲೇಬೇಕು. ಇನ್ನು ಯುಗಾದಿಯ ವಿಶೇಷ ಭಕ್ಷ್ಯಗಳಲ್ಲಿ ಒಬ್ಬಟ್ಟು ಅಥವಾ ಹೋಳಿಗೆಗೆ ಅಗ್ರಸ್ಥಾನ. ಕಾಯಿ ಒಬ್ಬಟ್ಟು, ಬೇಳೆ ಒಬ್ಬಟ್ಟು, ಸಕ್ಕರೆ ಒಬ್ಬಟ್ಟು, ಮಂಡಿಗೆ ಒಬ್ಬಟ್ಟು ಇತ್ಯಾದಿಗಳನ್ನು ವಿಶೇಷವಾಗಿ ಮಾಡಿ ಬಡಿಸುವರು ಎಲ್ಲಾ ಮನೆ ಮಂದಿಗೆ..!

ಒಟ್ಟಾರೆ ಎಲ್ಲರೂ ಖುಷಿಯಿಂದ ಆಚರಿಸುವ ಯುಗಾದಿ ಹಬ್ಬವು ಇಂದು ಮತ್ತೊಮ್ಮೆ ಬಂದಿದೆ. ಜೀವನದಲ್ಲಿ ಕಷ್ಟ ಸುಖ ಇದ್ದದ್ದೇ, ಹೊಸ ವರ್ಷವನ್ನು ಹೊಸ ಧ್ಯೇಯದಿಂದ ಸ್ವಾಗತಿಸಿ, ಬಂದಿದ್ದನ್ನು ಸ್ಥೈರ್ಯವಾಗಿ ಎದುರಿಸಿ, ಎಂದೂ ನಿಲ್ಲದ ಈ ಸಮಯಕ್ಕೆ ಒಂದು ಸಲಾಮು ಹಾಕುತ್ತಾ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ ಎನ್ನುವ ಬೇಂದ್ರೆ ಕವಿವಾಣಿಯಂತೆ, ಹೊಸತನ್ನು ಹೊಸತಗಿ ಸ್ವಾಗತಿಸುತ್ತಾ ನಮ್ಮೆಲ್ಲರ ಜೀವನ ರಸಮಯವಾಗಿ ಹೆಚ್ಚೆಚ್ಚು ಖುಷಿಯ ಸಿಂಪರಣೆಯಾಗಲಿ, ಎಲ್ಲರ ಮೊಗದಲ್ಲೂ ಇದೇ ಸಂಭ್ರಮ ಮಿನುಗುತ್ತಿರಲಿ ಎಂದು ಆಶಿಸುತ್ತಾ
ಎಲ್ಲರಿಗೂ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..!!

No comments:

Post a Comment