Saturday 28 March 2015

ಸ್ವಾತಂತ್ರ್ಯ ಎಲ್ಲಿದೆ?

ಕಳೆೆದ ವಾರ ದೇಶದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ನಾವೆಲ್ಲಾ ವಿಜೃಂಭಣೆಯಿಂದ ಆಚರಿಸಿದ್ವಿ! ಅದೇನು ಅದ್ಧೂರಿ, ಅದೇನು ಕಾರ್ಯಕ್ರಮ, ಅಬ್ಬಬ್ಬ.. ಅದ್ಭುತ ಅನ್ನುವಂತಹ ಭಾಷಣಗಳು, ಕಿವಿಗಡಚಿಕ್ಕುವ ಚಪ್ಪಾಳೆ, ಬ್ಯಾಂಡ್ ಬಜಂತ್ರಿಗಳ ಆರ್ಭಟ ಇವುಗಳ ಮಧ್ಯೆ ದೇಶದ ಜನಸಂಖ್ಯೆಯ ಸುಮಾರು ಇಪ್ಪತ್ತು ಶೇಕಡಾದಷ್ಟು ಜನರು ಅರ್ಧ ದಿನ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯವಾದೆವು ಅಂದುಕೊಂಡ್ರು. ಉಳಿದವರಲ್ಲನೇಕರು ರಜಾ ಸಿಕ್ಕಿದ ಖುಷಿಯಲ್ಲಿ ಟ್ರಿಪ್ಪು, ಶಾಪಿಂಗು, ರಿಲೇಟಿವ್ಸ್, ಫ್ರೆಂಡ್ಸ್ ಮನೆಗಳಿಗೆ ವಿಸಿಟ್ಸ್, ಫಿಲಂ, ಮಾಲ್ ಹೀಗೆ ಎಂಜಾಯ್ಮೆಂಟಿನಲ್ಲೇ ದಿನವಿಡಿ ಕಳೆದರು.
ಇವುಗಳ ಮಧ್ಯೆ ಅದೇ ದಿನ ದೇಶದ ಶೇಕಡಾ ಅರ್ಧಕ್ಕೂ ಜಾಸ್ತಿ ಜನ ಈ ಸ್ವಾತಂತ್ರ್ಯದ ಖುಷಿ, ರಜಾ ಇತ್ಯಾದಿ ಯಾವುದರ ಪರಿವೆಯಿಲ್ಲದೇ ದುಡಿಯುತ್ತಿದ್ದರು. ಅದರಲ್ಲಿ ಗಡಿ ಕಾಯುವ ಯೋಧರು, ದೇಶ ಕಾಯೋ ಪೊಲೀಸರು, ಆರೋಗ್ಯ ಕ್ಷೇತ್ರದವರು, ವ್ಯಾಪಾರಿಗಳು, ತಮ್ಮ ಹೊಟ್ಟೆಪಾಡಿಗೆ ದುಡಿಯುತ್ತಿದ್ದ ದಿನಗೂಲಿ ನೌಕರರು ಇವರೆಲ್ರೂ ಬಂದ್ರೂ ಅವರ ಬವಣೆಗಳು, ಜೀವಿಸುತ್ತಿರೋ ಲೈಫ್ ಸ್ಟೈಲ್ ಮಾತ್ರ ವಿಭಿನ್ನ. ಆದರೆ ದಿನಗೂಲಿ ಕೆಲಸಗಾರರನ್ನು ಬಿಟ್ರೆ ಉಳಿದೆಲ್ಲರಿಗೂ ತಮ್ಮ ಕಾರ್ಯಕ್ಕೆ ಸ್ವಲ್ಪವಾದ್ರೂ ತಕ್ಕಷ್ಟು ಆದಾಯವಿದೆ. ಆದರೆ ದಿನಗೂಲಿ ಕೆಲಸಗಾರರ ಸ್ಥಿತಿ ಹಾಗಲ್ಲ. ಬವಣೆ ಹೆಚ್ಚು ಬದುಕು ಕಷ್ಟ ಅನ್ನುವಂತ ಸ್ಥಿತಿ ಅವರದ್ದು.
ಇದೇ ಸ್ವಾತಂತ್ರ್ಯೋತ್ಸವದ ದಿನ ಶಿರಸಿಯ ಸಾಮ್ರಾಟ್ ಹೋಟೆಲ್ ಎದುರುಗಡೆ ಸ್ಮಶಾನದ ಬಳಿ ಕಂಡುಬಂದ ಜೆಲ್ಲಿ ಕುಟ್ಟೋ ಈ ಇಳಿವಯಸ್ಸಿನ ಜನರ ಕಷ್ಟ ನಿಜಕ್ಕೂ ಖೇಧಕರ. ರಿಟೈಡ್ ಏಜ್ ಆಗಿದ್ರೂ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇವರಿಗಿದೆ. ಇಲ್ಲಿನವರಿಗೆ ಕಲ್ಲು ಕುಟ್ಟೋದೆ ಕೆಲಸ. ಒಬ್ಬೊಬ್ಬರದೂ ಒಂದೊಂದು ಹಿನ್ನೆಲೆ, ಒಂದೊಂದು ಕಷ್ಟ. ಈ ದಿನಗೂಲಿ ನೌಕರರಿಗೆ ಮಾಡಿದ ಕೆಲಸಕ್ಕೆ ತಕ್ಕಷ್ಟು ಸಂಬಳ. ದಪ್ಪ ದಪ್ಪ ಕಲ್ಲುಗಳನ್ನು ಸುತ್ತಿಗೆ ಇಂದ ಕುಟ್ಟಿ ಪುಡಿಗಟ್ಟಿ ಜೆಲ್ಲಿ ಮಾಡುವುದೇ ಇವರ ಕೆಲಸ. ಬಿಸಿಲು, ಮಳೆ, ಛಳಿ ಯಾವುದಕ್ಕೂ ಬೆದರದೇ ಬಯಲಿನಲ್ಲಿ ಕಲ್ಲು ಕುಟ್ಟಬೇಕು. ಕುಟ್ಟಿದ ಜೆಲ್ಲಿಗೆ ಡಬ್ಬವೊಂದಕ್ಕೆ 20 ರೂಪಾಯಿಯಂತೆ ದೊರೆಯುತ್ತದೆ. ದಿನಕ್ಕೆ, ಎಂಟೋ ಹತ್ತೋ ಡಬ್ಬಿ ತುಂಬಿಸೋದ್ರೊಳಗೇ ಇವರ ಸೊಂಟ, ಕೈ ಎಲ್ಲಾ ಪದ ಹಾಡ್ತಿರ್ತದೆ, ಅವಕ್ಕಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಬೆಳಿಗ್ಗೆ 9.30ಕ್ಕೆ ಬಂದ್ರೆ ಸಾಯಂಕಾಲ ಆರೂವರೆ- ಏಳರವರೆಗೆ ಕುಟ್ಟೋದೆ ಕೆಲಸ ಇವರಿಗೆ. ವಯಸ್ಸಾತು, ಸಾಕಾಗಿದೆ ಈ ಕೆಲ್ಸ. ಆದರೂ ಕೆಲಸ ಮಾಡ್ಲೇಬೇಕು. ಕಳೆದ 40 ವರ್ಷದಿಂದ ಇದೇ ಕೆಲಸ ಮಾಡ್ತಾ ಇದೀನಿ, ಆಗ ಓದಿಲ್ಲ, ಮನೇಲೂ ಓದ್ಸಿಲ್ಲ. ಮನೆ ನಿರ್ವಹಣೆಗೆ ನಾನಿಲ್ಲಿ ದುಡಿಯಲೇ ಬೇಕು. ಬೇರೆ ಕೆಲಸವೂ ನಂಗೆ ಗೊತ್ತಿಲ್ಲ, ರಾತ್ರಿಯಿಡಿ ಕೈಕಾಲು ನೋವು, ಸೊಂಟ ನೋವು ಎಲ್ಲಾ ಇದೆ. ಹಾಗಂತ ಸುಮ್ನೇ ಕುಂತ್ರೆ ಉಪ್ವಾಸ ಇರ್ಬೇಕಾಗತ್ತೆ ಅಂತ ಹೇಳ್ತಾರೆ ಮರಾಠಿಕೊಪ್ಪದ 65 ವರ್ಷ ವಯಸ್ಸಿನ ಉಮಜ್ಜಿ.
ಅದೇ ರೀತಿ ಗಣೇಶನಗರದ 65ರ ಹನುಮಂತಪ್ಪನದು ಬೇರೆದೇ ಕತೆ. ಮೊದಲು ಗಾವಡಿ ಕೆಲಸ ಮಾಡ್ತಾ ಇದ್ದವರು ಈಗ ಮರಳಿಗೆ ಬರ ಬಂದನಂತರ ಕೆಲಸವಿಲ್ಲದೇ ಈ ಕೆಲಸಕ್ಕೆ ಬರಬೇಕಾಯ್ತು. ತಮ್ಮ ಗಂಡಂದಿರ ದುಡಿಮೆ ಸಾಕಾಗದೆ, ಮಕ್ಕಳ ಜೀವನೋಪಯಕ್ಕೆ ಹಣವಿಲ್ಲದೆ ಈ ಕೆಲಸಕ್ಕೆ ಬಂದ ರೇಣುಕ, ರತ್ನ, ಪಾರ್ವತಿ ಮುಂತಾದವರದೂ ಒಂದೊಂದು ಗೋಳು. ಇವರ ಜಾಗ ಬೇರೆಬೇರೆ ಆಗುತ್ತಿದ್ದರೂ ಕೆಲಸ ಮಾತ್ರ ಒಂದೇ! ಮಳೆ ಬಂದ್ರೂ ಕಷ್ಟ, ಬಿಸಿಲು ಬಂದ್ರೂ ಕಷ್ಟ ಎಂಬಂತ ಸ್ಥಿತಿಯಲ್ಲಿರುವ ಇವರಿಗೆ ಸುತ್ತಿಗೆಯೇ ಆಸ್ತಿ!
ಮೇಲಿನವರದು ಕೇವಲ ಉದಾಹರಣೆ ಮಾತ್ರ. ಇಂತಹ ಕೊಟ್ಯಾಂತರ ಜನರು ನಮ್ಮಲ್ಲಿನ್ನೂ ಇದ್ದಾರೆ. ಬಡತನ ನಿಮರ್ೂಲನೆ ಅನ್ನೋದು ಬರೀ ಭಾಷಣಕ್ಕಷ್ಟೇ ಸೀಮಿತವಾಗಿದೆ ಅನ್ನಿಸ್ತಿದೆ. ನಾವು ಮನೆ ಕಟ್ಟಿ ಆರಾಮವಾಗಿ ಪವಡಿಸಿಕೊಂಡು ಮೈಚೆಲ್ಲಿದಾಗ ಈ ವೈಭೋಗಕ್ಕೆ ಇಂತಹ ಹಲವರ ಪರಿಶ್ರಮವೂ ಇದೆ ಎಂದು ಕಿಂಚಿತ್ ನೆನಪಾದ್ರೂ ಸಾಕು, ಇವರ ಕಷ್ಟಕ್ಕೂ ಒಂದು ಸಾರ್ಥಕತೆ ದೊರಕಬಹುದು ಅಲ್ವೇ?


No comments:

Post a Comment