Saturday 28 March 2015

SOME ಮಾತು
ದೀಪಾವಳಿ ತರಲಿ ಬದಲಾವಣೆ- ಬಾಳಲಿ
ಮತ್ತೆ ದೀಪಾವಳಿ ಬಂದಿದೆ. ಮತ್ತದೇ ಹಳೇ ಪುರಾಣದ ಜೊತೆಗೆ ಅದೇ ಹಳೆ ಡೈಲಾಗು- "ಪಟಾಕಿ ಹೊಡಿಬೇಡಿ, ಮಾಲಿನ್ಯ ಮಾಡಬೇಡಿ, ಮನೆ ಮನೆಯೆದುರು ದೀಪ ಹಚ್ಚಿ, ಮನ-ಮನಗಳ ನಡುವೆ ಬೆಂಕಿ ಹಚ್ಚಬೇಡಿ.. " ಹಾಗೆ ಹೀಗೆ ಲೊಟ್ಟೆ ಲೊಸ್ಕು ಅಂತಾ ಹಬ್ಬದ ಮೂಡಲ್ಲಿರೋ ನಿಮಗೆ ನಿಜವಾಗ್ಲೂ ಈಗಂತೂ ನಾನು ಕೊರೆಯಲ್ಲ. ದೀಪಾವಳಿ ವರ್ಷಕ್ಕೊಮ್ಮೆ ಮಾತ್ರ ಆಚರಿಸ್ತೀವಿ. ಹಾಗೆ ಅದರ ಹಿನ್ನೆಲೆ ಉದ್ದೇಶವನ್ನೆಲ್ಲಾ ಹಬ್ಬದ ಜೊತೆಗೇ ಮರೆತು ಬಿಡ್ತೀವಿ. ದೀಪಾವಳಿ ಕೇವಲ ಒಂದು ಆಚರಣೆ, ಕೇವಲ ಒಂದು ಹಬ್ಬ ಅಂತ ಮಾತ್ರ ನೋಡದೆ ದೀಪಾವಳಿ ಒಂದು ಬದಲಾವಣೆಯ ಸಂಕೇತ, ಜೀವನ ಶೈಲಿಯನ್ನು ನಮಗಿಷ್ಟವಾಗೋತರ ಮಾರ್ಪಡಿಸಿಕೊಳ್ಳುವ ಒಂದು ಆರಂಭಿಕ ದಿನ ಅನ್ನೋ ತರ ಫೀಲ್ ಮಾಡಿ !!
ಮನದ ಕತ್ತಲೆಯನ್ನು, ಮನಸ್ಸಿನ ಬೇಸರವನ್ನು, ಜೀವನದ ದುಃಖವನ್ನು ಹೊಡೆದೊಡಿಸುವ ಒಂದು ದೀಪ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರತ್ತಂತೆ. ಅದನ್ನು ಹುಡುಕಿಕೊಳ್ಳುವುದರಲ್ಲೇ ಬಹುಪಾಲು ಜನರ ಆಯುಷ್ಯ ಮುಗಿದು ಹೋಗಿರುತ್ತೆ, ಹೀಗಂತ ಹೇಳ್ತಾ ಇದ್ರು ಒಬ್ಬರು ಜ್ಞಾನಿ. ವರ್ಷಕ್ಕೊಮ್ಮೆ ಹಬ್ಬವೆಂದೋ, ವಿಶೇಷ ದಿನವೆಂದೋ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಅಟ್ಟವನ್ನೆಲ್ಲಾ ಕ್ಲೀನ್ ಮಾಡಿ, ಧೂಳು ಹೊಡೆದು ಮತ್ತೆ ಅಲ್ಲಿದ್ದದ್ದನ್ನೆಲ್ಲಾ ಅಟ್ಟದ ಮೇಲೆಯೇ ಇಡ್ತೇವೆ. ಹೀಗೆ ಜೀವನವೆಂಬ ಅಟ್ಟದ ಮೇಲೆಯೆ ಹಲವಾರು ಜನ ತಮ್ಮ ಕನಸಿನ ಪೆಟ್ಟಿಗೆಯನ್ನೂ ಇಟ್ಟಿರುತ್ತಾರೆ, ಹಾಗೆಯೇ ಮರೆತೂ ಬಿಟ್ಟಿರುತ್ತಾರೆ. ಇನ್ನೇನು ಅದು ಗೆದ್ದಲು ಹಿಡಿದು ಮಕಾಡೆ ಮಲಗುತ್ತೇ ಅನ್ನುವಾಗ ಅದನ್ನು ಬಿಸಾಕಿ ಹೋಸ ಕನಸಿನ ಪೆಟ್ಟಿಗೆಯನ್ನು ಮತ್ತೆ ಹುಡುಕಿ ತಂದು ಅದೇ ಅಟ್ಟಕ್ಕೆ ಎಸೆಯುತ್ತಾರೆ. ಬಹುಪಾಲು ಜನರ ಗೋಳು ಇದೆ ಆಗಿದೆ.
ಹಬ್ಬಗಳನ್ನು ಆಚರಣೆಗಳನ್ನು ಕೇವಲ ಸಂಪ್ರದಾಯ, ಧರ್ಮ ಅಥವಾ ಒಂದು ಸಿದ್ಧ ಸೂತ್ರದಂತೆ ನೋಡದೆ ಅದರ ಹಿಂದಿರುವ ಆಧ್ಯಾತ್ಮ ಶಾಸ್ತ್ರ, ಅದರಿಂದ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕಲಿಯುವಿಕೆ ಏನು ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕಂತೆ! ಹೇಳೊದು ಸುಲಭ ಮಾಡೋದು ಕಷ್ಟ! ಅಂತ ಒಂದು ಸಿದ್ಧ ಸೂತ್ರವನ್ನು ಹೇಳಿಬಿಡಬಹುದು, ಆದರೆ ಗಮ್ಯವನ್ನು (ಹಿರೋಯಿನ್ ರಮ್ಯಾ ಅಲ್ಲ, ಗಮ್ಯ-ಪ್ರಾಪ್ತವಾಗತಕ್ಕಂತ) ಮನಸಲ್ಲಿಟ್ಟುಕೊಂಡು ಕಷ್ಟವನ್ನು ಮರೆಯುವುದು ಕೂಡಾ ಯಶಸ್ಸಿನ ರಹಸ್ಯಗಳಲ್ಲಿ ಒಂದು. ಹಾಗೆ ಆನಂದವೆಂದರೆ ಬರೀ ತಮ್ಮ ಕುಟುಂಬದವರೊಂದಿಗೋ, ಸ್ನೇಹಿತರೊಂದಿಗೋ ಸೇರಿ ಮಜಾ ಮಾಡುವುದಲ್ಲ. ಕೋಟಿ ಕೋಟಿ ಹಣ ಸಂಪಾದನೆಯಲ್ಲಿಲ್ಲ. ಯಾರಾದರೂ ಬಡ ಅಪರಿಚಿತರಿಗೆ ತೋರಿಕೆಗಲ್ಲದೆ ಸ್ವಚ್ಛ ಮನಸ್ಸಿನಿಂದ ಸಹಾಯ ಮಾಡಿ. ಬಡ ಕೂಲಿಯಾಳಿಗೆ ಅವನ ಕೂಲಿಗಿಂತ ಐದು ರೂಪಾಯಿ ಹೆಚ್ಚು ನೀಡಿ ಆಗ ಅವನ ಕಣ್ಣಲ್ಲಿ ಕಾಣುವ ಆನಂದ ನಮ್ಮ ಮನಸ್ಸಿನಲ್ಲಿ ಹೆಚ್ಚು ದಿನ ಇರಬಲ್ಲದು.
ಒಂದು ಕಾಲದಲ್ಲಿ ಸ್ಪೇನ್ ದೇಶದವರು ಪ್ರಪಂಚದಲ್ಲಿ ತಮ್ಮ ದೇಶವೇ ಕೊನೆ ಎಂದುಕೊಂಡಿದ್ದರು, ಆದರೆ ಮುಂದೊಂದು ದಿನ ಕೊಲಂಬಸ್ ಅಮೇರಿಕ ಕಂಡುಹಿಡಿದ ನಂತರವೇ ಗೊತ್ತಾದದ್ದು ಇನ್ನು ಮುಂದೆಯೂ ಬಹಳಷ್ಟು ಪ್ರಪಂಚವಿದೆ ಎಂದು. ಹೀಗೆ ನಿರಂತರ ಅನ್ವೇಷಣೆಯಲ್ಲಿ ಜೀವನದ ಸಾರ ಅಡಗಿದೆ. ಪ್ರಾಮಾಣಿಕ ಅಮಾಯಕತೆಯಲ್ಲಿಯೂ ಕಷ್ಟವನ್ನು ಸೋಲಿಸುವ ಛಲವಿರುತ್ತದೆ. ಜ್ಞಾನವೊಂದು ಚಾಕುವಿದ್ದಂತೆ, ತುಂಬಾ ಹರಿತ ಉಪಯೋಗಿಸುವಾಗ ಎಚ್ಚರಿಕೆ ಅಗತ್ಯ. ನಮ್ಮಲ್ಲಿ ಏನೂ ಇಲ್ಲ ಎಂದು ಕೊರಗುವವರ ಮೆದುಳಿನಲ್ಲಿಯೂ ಸಹಾ ಸಾವಿರ ಕೋಟಿ ನ್ಯೂರಾನುಗಳು ಇರ್ತವಂತೆ. ಹಾಗಿದ್ದೂ ನಾವು ಬಡವರು, ಅಶಕ್ತರು ಎಂದು ಗೋಗರೆಯುವವರಿಗೆ ಏನೆನ್ನೋಣ? ಕಷ್ಟಸುಖಗಳು ಯಾವಾಗಲೂ ಅಕ್ಕಪಕ್ಕದಲ್ಲೇ ಇರುತ್ವೆ, ಆದ್ರೂ ನಮಗೆ ಸುಖಾನೇ ಬೇಕು ಅಂದ್ರೆ ಕಷ್ಟಾನ ಎದುರಿಸೋಕು ಬದ್ಧರಾಗಿರಬೇಕು. ಸೌಂದರ್ಯ ಎನ್ನುವುದು ನೋಡುವ ಕಣ್ಣುಗಳಲ್ಲಿ ಇರತ್ತೋ ಅಥವಾ ಯೋಚಿಸುವ ಮನಸ್ಸಲ್ಲಿ ಇರುತ್ತೋ ಅಂತ ಒಮ್ಮೆ ಪ್ರಶ್ನೆ ಮಾಡಿಕೊಂಡ್ರೆ, ಮಲಗಿರುವ ಮೆದುಳೂ ಸಹಾ ಕಾರ್ಯನಿರತವಾಗುತ್ತದೆ.
ನಮ್ಮ ಪ್ರಪಂಚದಲ್ಲಿ ಯಾವುದು ಶಾಶ್ವತವೋ ಏನೊ ಗೊತ್ತಿಲ್ಲ. ಆದರೆ ಈ ಬದಲಾವಣೆ ಎನ್ನುವುದು ಮಾತ್ರ ಎಂದಿಗೂ ಶಾಶ್ವತವಾದದ್ದು. ಅದು ಯಾವುದನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ. ಇದೇ ಬದಲಾವಣೆ ರಾಯಲ್ ರೆಡ್ಡಿಯನ್ನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಕ್ಕೆ ಹಚ್ಚತ್ತೆ. ಪಾನಿಪೂರಿ ನಿಂಗಣ್ಣನಿಗೂ ಸೂಪರ್ ಲೊಟ್ಟೋ ಹೊಡೆಸತ್ತೆ! ಹೇಳ್ತಾ ಹೋದ್ರೆ ಇದೊಂತರಾ ತಟ್ಟೆ ಇಡ್ಲಿತರಾ, ಸ್ಟಾರ್ಟ್ ಯಾವ್ದು, ಎಂಡ್ ಯಾವ್ದು ಅಂತಾನೇ ಗೊತ್ತಾಗಲ್ಲಾ! ಜೀವನ ಅಂದ್ಮೇಲೆ ಕಷ್ಟ ಇರ್ಲೇ ಬೇಕು. ಕಷ್ಟ ಬಂದ್ಮೇಲೆ ಹೋರಾಟ ಮಾಡ್ಲೇ ಬೇಕು. ಅಡ್ಡದಾರಿ ಹಿಡಿದ್ರೆ ಅವಾ ಸತ್ತ! ಇರೋ ಒಂದು ಲೈಫ್ ಅಲ್ಲಿ ಎಲ್ಲಾನೂ ಅನುಭವಿಸಿದ್ರೇನೇ ಮಜಾ! ಕಷ್ಟವನ್ನೂ ಕಣ್ಮುಚ್ಚಿಕೊಂಡು ಸಂಭ್ರಮಿಸಿ. ಕೆಲಸವಿಲ್ಲದಿದ್ರೆ ದೋಸೆಲಿರೋ ತೂತು ಲೆಕ್ಕ ಹಾಕಿ, ಹುತ್ತದಲ್ಲಿರೋ ಗೆದ್ದಲಿಗೆ ತಿಂಡಿ ತಿನ್ಸಿ. ಚೌಧರಿ ಪಾರ್ಕ ಬಳಿ ಜಲ್ಲಿ ಕಲ್ಲುಕುಟ್ಟೋ ಶೇಖರಪ್ಪನಿಗೆ ಸಹಾಯ ಮಾಡಿ. ರಾಘವೇಂದ್ರ ಮಠದ ಎದುರಿಗೆ ಪುಡಿಗಾಸಿಕೆ ಕಾಯ್ತಾ ಇರೋ ಕಾಶವ್ವ, ಗಂಗವ್ವ, ಫಕೀರವ್ವ ಹತ್ರ ಸುದ್ಧಿ ಹೇಳಿ! ಲೈಫಲ್ಲಿ ಇಂತಿಂತದೇ ಮಾಡ್ಬೇಕು ಅಂತಾ ನಮ್ಗೆಯಾರಾದ್ರೂ ಹುಟ್ಟೂವಾಗ್ಲೇ ಬರೆದು ಕಳಿಸಿದ್ದು ನೆನಪಿರ್ತದಾ? ಬೇರೆಯವರಿಗೆ ತೊಂದರೆಯಾಗದಂತೆ ಬದುಕಿದ್ರೆ ಆಯ್ತಪಾ! ಸುಮ್ನೇ ಭವಿಷ್ಯವನ್ನು ಯೋಚಿಸ್ತಾ ಲೈಫಲ್ಲಿ ಸೆಟಲ್ ಆಗ್ತೀನಿ ಅಂದವರು ಎಲ್ರೂ ನೆಮ್ಮದಿಯಾಗೇನಿಲ್ಲ. ಅವರವರ ಕಷ್ಟ ಅವರವರಿಗೆ. ನಿಮ್ಮ ಇಷ್ಟ ಬಂದಂಗೆ ಬದುಕಿ. ಜೀವನದಲ್ಲಿ ಪ್ರತಿದಿನವೂ ಜ್ಞಾನದ ದೀಪಾವಳಿ ಬರ್ತಾ ಇರ್ತದೆ. ನಾವು ಸೆಲೆಬ್ರೇಟ್ ಮಾಡ್ಬೇಕು ಅಷ್ಟೆ!
ಮತ್ತೊಮ್ಮೆ ಮಗದೊಮ್ಮೆ ಇದನ್ನು ಓದಿದವರಿಗೆ ಹಾಗೂ ಬದಲಾವಣೆ ಬಯಸುವವರಿಗೆಲ್ಲಾ ಹ್ಯಾಪಿ ದೀಪಾವಳಿ!

No comments:

Post a Comment