Saturday 28 March 2015

Some ಮಾತು

ಹೆಚ್ಚಾಗದಿರಲಿ 'ಎಚ್1ಎನ್1' 

"ಅಯ್ಯೋ ಎಚ್1ಎನ್1 ಬಂದಿದೆ", "ಹಂದಿ ಜ್ವರ ಬಂದಿದೆ". "ಅಲ್ಲಿ ಇಷ್ಟು ಜನ ಹೊಗೆ ಹಾಕಿಸ್ಕೊಂಡ್ರು, ಇಲ್ಲಿ ಇಷ್ಟು ಜನ ಬಿದಿರು ಮೋಟಾರ್ ಹತ್ತಿದ್ರು" ಅಂತ ಎಲ್ಲಾರು ಮಾತಾಡ್ಕೊತಾ ಇರೋದನ್ನ ನಾವೆಲ್ಲಾ ಕೇಳಿಸ್ಕೊತಾನೆ ಇದೀವಿ. ಎಚ್1ಎನ್1 ಒಂದು ಜ್ವರ ಅಂತ ಹಲವರಿಗೆ ಗೊತ್ತು. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಮಾತ್ರ ಇಲ್ಲ. ಹಂದಿಜ್ವರವೆಂದು ಆಡು ಭಾಷೆಯಲ್ಲಿ ಕರೆಯಲ್ಪಡುವ ಈ ಜ್ವರ ಹಂದಿಗಳಿಗೆ ಮಾತ್ರ ಬರುವ ಶ್ವಾಸಕೋಶದ ಕಾಯಿಲೆಯಾಗಿತ್ತು. ಆದರೆ 2009ರಲ್ಲಿ ಅಮೇರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸಿನ ಸ್ಯಾನ್ ಆಂಟೋನಿಯೋದಲ್ಲಿ ಎಚ್1ಎನ್1 ವೈರಾಣು ಸೋಂಕು ತಗುಲಿದ ಪ್ರಕರಣ ವರದಿಯಾದವು. ಅಲ್ಲಿ ಸ್ವಲ್ಲ ಹರಡಿ ಹಲವು ಬಲಿ ಪಡೆದು ನಿಯಂತ್ರಣಕ್ಕೆ ಬಂದಿದ್ದ ಈ ಕಾಯಿಲೆ ಇದೀಗ ಧುತ್ತನೆ ಮತ್ತೆ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಈ ರೋಗಕ್ಕೆ ನಮ್ಮ ದೇಶವೊಂದರಲ್ಲೇ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಾದವರು ಲಕ್ಷಾಂತರ. ಈ ವಿಷಯದಲ್ಲಂತೂ ಶತಕೋಟ್ಯಾಂತರ ಜನರಿರೋ ನಮ್ಮ ದೇಶದಲ್ಲಿ ಕೇವಲ ಲಕ್ಷ ಮಾತ್ರಾನಾ ಅಂತ ಅಲಕ್ಷ್ಯ ಮಾಡುವಂತೆಯೇ ಇಲ್ಲ. ಏಕೆಂದರೆ ಇಷ್ಟೆಲ್ಲಾ ಸಾವು-ನೋವುಗಳು ಸಂಭವಿಸಿದ್ದು ಕೇವಲ ಎರಡು ತಿಂಗಳ ಅವಧಿಯಲ್ಲಿ! ಹಂದಿಜ್ವರಕ್ಕೆ ಸಾಮಾನ್ಯ ಜ್ವರದಂತೆ ಒಂದು ಕ್ರೋಸಿನ್ನೋ, ಡೋಲೋ650 ಮಾತ್ರೆಗಳನ್ನೋ ತಗೊಂಡು ಒಂದು ರಾತ್ರಿ ಮುಚ್ಚಾಕ್ಕೊಂಡ್ ಮಲಗಿದ್ರೆ ಜ್ವರ ಬಿಟ್ಟೊಗತ್ತೆ ಅನ್ನೋ ಹಾಗೆಯೂ ಇಲ್ಲ. ಹೀಗೆ ಮಾಡಿಯೇ ಈ ಹೆಮ್ಮಾರಿಯ ಉಪಟಳಕ್ಕೆ ಸಿಲುಕಿ ಬಹಳಷ್ಟು ಜನರು ಫೋಟೋ ಪ್ರೇಮ್ ಆಗಿದಾರೆ. ಹಾಗಂತ ಜಾಸ್ತಿ ದಿಗಿಲು ಬೀಳೋ ಅಗತ್ಯವೂ ಇಲ್ಲ. ಎಚ್1ಎನ್1 ಜ್ವರವೂ ಒಂದು ವೈರಸ್ ಆಗಿದ್ದು ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗ್ತಾರೆ ಭಯ ಬೇಡ.

ಈ ರೋಗದ ಲಕ್ಷಣಗಳು ಹೇಗಿರ್ತವೆ ಅಂದ್ರೆ- ತೀವ್ರ ಸ್ವರೂಪದ ಜ್ವರ ನಮ್ಮನ್ನು ಅಮರ್ಕೊಳ್ತಾವೆ. ಅತಿಯಾದ ವಾಂತಿ-ಭೇದಿ ನಮ್ ದೇಹದ ಶಕ್ತಿನೆಲ್ಲ ಕಿತ್ಕೊಳ್ತಾವೆ. ಮೈಕೈ ಎಲ್ಲಾ ವಿಪರೀತ ನೋವಕ್ಕೆ ಆರಂಭಿಸುತ್ತವೆ. ನೆಗಡಿ ಶುರುವಾಗತ್ತೆ, ಗಂಟಲ ಕೆರೆತ ಅತಿಯಾಗತ್ತೆ. ಕೆಮ್ಮು ಜಾಸ್ತಿಯಾಗಿ ಹಳದಿ ಕಫ ಬರೋಕೆ ಸ್ಟಾಟರ್ಾಗತ್ತೆ. ಉಸಿರಾಟಕ್ಕೂ ತೊಂದರೆ ಪಡಬೇಕಾಗತ್ತೆ. ಈ ತರಹದ ಲಕ್ಷಣಗಳು ನಿಮ್ಮಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ನೆರೆಹೊರೆಯ ಜನರಲ್ಲಿ ಎಲ್ಲಾದರೂ ಕಂಡುಬಂದರೆ ತ್ವರಿತವಾಗಿ ಚಿಕಿತ್ಸೆ ಕೊಡಿಸಲೇ ಬೇಕು. ಯಾಕೆಂದ್ರೆ ಈ ಜ್ವರವನ್ನು ಸಮರ್ಪಕವಾಗಿ ನಿಯಂತ್ರಣ ಮಾಡುವಲ್ಲಿ ನಾಗರೀಕರಾದ ನಮ್ಮ ಜವಾಬ್ದಾರಿಯೇ ಹೆಚ್ಚಾಗಿದೆ.
ಇಷ್ಟೊತ್ತಿಗಾಗಲೇ ನಮ್ಮ ನಿಮ್ಮಲ್ಲೇ ಯಾರಿಗಾದ್ರೂ ಮೇಲಿನ ಲಕ್ಷಣಗಳು ಕಂಡು ಬಂತು ಅಂದ್ಕೊಳಿ, ಹೆದರಿಕೊಳ್ಳೊದೇನು ಬೇಡ. ಮಾನಸಿಕವಾಗಿ ನಾವು ಧೈರ್ಯದಿಂದ ಇದ್ದಷ್ಟೂ ನಮ್ಮ ಶತೃಗಳು ದುರ್ಬಲರಾಗಿಯೇ ಇರ್ತಾರೆ. ಅದೇ ರೀತಿ ಈ ವೈರಾಣುಗಳೂ ಹೊರತಲ್ಲ. ಚಿಕಿತ್ಸೆಗೂ ಮುನ್ನವೇ ಧೈರ್ಯದಿಂದ ಕೆಲವೊಂದು ಅವಶ್ಯ ಕ್ರಿಯೆಗಳನ್ನು ಮಾಡುತ್ತಾ, ಕೆಲವು ಅನುಸರಿಸಬೇಕಾದವುಗಳು ಏನೆಂದ್ರೆ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಕಾಗದಗಳಿಂದ ಮುಚ್ಚಿಟ್ಟುಕೊಳ್ಳುವುದರಿಂದ ಈ ವೈರಾಣುಗಳು ಇತರರಿಗೆ ಸುಲಭವಾಗಿ ಹರಡುವುದಿಲ್ಲ. ಗಾಳಿಯಿಂದಲೇ ಬಹಳಷ್ಟು ಜನರಿಗೆ ಪಸರಿಸುವ ಈ ಕೀಟಾಣುಗಳನ್ನು ಪ್ರಾಥಮಿಕ ಹಂತದಲ್ಲಿಯೇ ಹರಡದಂತೆ ತಡೆಗಟ್ಟುವುದು ಮುಖ್ಯ. ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಲೇ ಬೇಕು. ಚೆನ್ನಾಗಿ ನಿದ್ರಿಸಿ, ದೇಹವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡರೆ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ನೀರನ್ನು ಹೆಚ್ಚಾಗಿ ಕುಡಿಯುತ್ತಾ ಇದ್ದರೆ ಯಾವಾಗಲೂ ಒಳ್ಳೆಯದು. ಪೌಷ್ಟಿಕಾಂಶ ಭರಿತ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ತನ್ನಿಂತಾನೆ ಹೆಚ್ಚಾಗುತ್ತೆ. ಈಗ ಎಲ್ಲಾ ಕಡೆ ಮದುವೆ, ಮುಂಜಿ, ಉತ್ಸವ, ಜಾತ್ರೆಗಳದ್ದೇ ಸೀಜನ್ನು! ಅದರಲ್ಲೂ ನಮ್ಮ ಶಿರಸಿಯಲ್ಲಿಗ ಹೋಳಿಯ ಬೇಡರವೇಷದ ಸಂಭ್ರಮ. ಎಂತಾ ಜ್ವರವಿದ್ದೂ ಇನ್ನೇನು ಟಿಕೇಟು ತೊಗೋಬೇಕು ಅನ್ನೋ ಸ್ಥಿತಿಲಿದ್ರೂ ಬೇಡರವೇಷ ನೋಡ್ಲೆ ಬೇಕು ಅಂತ ನಮಗೆಲ್ಲಾ ಅನ್ನಿಸುವುದು ಕೂಡಾ ಸಹಜ. ಅಂತ ಸಮಯದಲ್ಲಿ ಮಾಸ್ಕ್ ಹಾಕಿಕೊಂಡು ಹೋಗುವುದರಿಂದ ಸ್ವಲ್ಪ ಕಿರಿಕಿರಿಯಾದ್ರೂ ಆರೋಗ್ಯಕ್ಕೆ ಒಳ್ಳೆಯದು.

ಈಗ ಟೈಮ್ ಹೆಂಗಿದೆ ಅಂದ್ರೆ ಹಸ್ತಲಾಘವ ಮಾಡೋದಾಗಲಿ, ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವುದಾಗಲಿ ಮಾಡದೇ ಸನಾತನ ಸಂಸ್ಕೃತಿಯಂತೆ ದೂರ ನಿಂತು ಕೈ ಮುಗಿದು 'ನಮಸ್ಕಾರ' ಮಾಡುವುದೇ ಉತ್ತಮ. ಯಾರ್ ಬಾಡಿಲೀ ಯಾವ್ ವೈರಸ್ ಇರುತ್ತೋ ಯಾರಿಗೊತ್ತು? ಹಾಗೆಯೇ ಸ್ವಯಂ ವೈದ್ಯರಾಗದೆ ಡಾಕ್ಟರ್ಗಳ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಲೇಬಾರದು. ಅನಾವಶ್ಯಕವಾಗಿ ಜನಸಾಂದ್ರತೆ ಇರೋ ಕಡೆ ಹೋಗೋದು, ರಜಾ ದಿನ ಅಂತಾ ಅತಿಯಾಗಿ ಟೂರ್ ಮಾಡೋದು ಹಿಂಗೆಲ್ಲಾ ಮಾಡ್ತಾ ಇದ್ರೆ ಎಚ್1ಎನ್1 ಆವರಿಸಿಕೊಳ್ಳೋದು ಪಕ್ಕಾ! ಅಂತಾರೆ ತಜ್ಞರು.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಕಾರ್ಯಕರ್ತರು ಹೀಗೆ ಯಾರಲ್ಲಿ ಬೇಕಾದರೂ ವಿಚಾರಿಸಿ. ಅವರು ಅವಶ್ಯ ಮಾಹಿತಿಗಳನ್ನು ಕೊಡ್ತಾರೆ. ನಮ್ಮ ಉತ್ತರಕನ್ನಡ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ನಮ್ಮ ಜಿಲ್ಲೆಯ ಜನರಿಗಾಗಿ ಈ ವೈರಾಣು ಮತ್ತು ಜ್ವರದ ಕುರಿತಾಗಿ ಮಾಹಿತಿ ಕೊಡುವಲ್ಲಿ ಬಹಳವಾಗಿಯೇ ಶ್ರಮಿಸುತ್ತಿದೆ. ನಾವೆಲ್ಲಾ ಮಾಹಿತಿ ತಿಳಿದುಕೊಂಡು ಒಗ್ಗಟ್ಟಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಮತ್ತು ನಮ್ಮ ತಿಳುವಳಿಕೆಯಿಂದ ಜವಾಬ್ದಾರಿ ಅರಿತು ನಡೆದುಕೊಂಡ್ರೆ ಎಂತಾ ವೈರಸ್ ಬಂದ್ರೂ ಮಕಾಡೆ ಮಲಗಿಕೊಳ್ತದೆ.

No comments:

Post a Comment