Saturday 28 March 2015

ಫ್ಲಾಪೀ ಕಥೆಗಳು

ಆತ Flop Stories ಪಟ್ಟಿ ಮಾಡುತಿದ್ದ,
ಅದು ಕೆಲವರಿಗೆ ಇಷ್ಟವಾದರೆ
ಹಲವರಿಗೆ ಅರ್ಥವಾಗುತ್ತಿರಲಿಲ್ಲ..!
ಇವತ್ತೇ ಕೊನೆ, ಇನ್ಮುಂದೆ ಫ್ಲಾಪೀ ಕಥೆ ಬರೆಯೊಲ್ಲವೆಂದು ನಿರ್ಧರಿಸುವಷ್ಟರಲ್ಲಿ ಸಂಖ್ಯೆ Century ಹೊಡೆದಿತ್ತು..,
ಈಗ ಆ ಶತಕವನ್ನು ಸಂಭ್ರಮಿಸಬೇಕೋ ಅಥವಾ ಅಷ್ಟೊಂದು ಫ್ಲಾಪಿಗೆ ದುಃಖ ಪಡಬೇಕೋ ಗೊತ್ತಾಗದಿದ್ದರೂ ಹೊಸ ಸಾಹಸಕ್ಕೆ ಅಣಿಯಾದ..!!
ಬದಲಾವಣೆ ಶಾಶ್ವತ.....


ಬಾಸ್ ಹಣ ಕೊಡುತ್ತಾರೆಂದು ಆತ ಕಾದೇ ಕಾದ,
ಆದರೆ ಬಾಸ್ ಹಣದ ಜೊತೆ ಆತನ
ನಂಬಿಕೆಯನ್ನೂ ಕಸಿದಿದ್ದ


ರಾಮನವಮಿ ಪ್ರಯುಕ್ತ ಊರ ತುಂಬಾ ಪಾನಕ, ಕೋಸಂಬರಿಗಳ
ಭರ್ಜರಿ ವಿತರಣೆ ನಡೆಯುತ್ತಿತ್ತು..!
ಆದರೆ ಆ ಪೆಂಡಾಲ್ ಕೆಳಗಣ ಅಸಲಿಯತ್ ವಿಚಾರ ಮಾತ್ರ ಎಲೆಕ್ಷನ್ ಪ್ರಯುಕ್ತ ಪುಢಾರಿಗಳ ಮತಭೇಟೆಯಾಗಿತ್ತು..!!


ಮಾರ್ವಾಡಿ ಮಹಿಳೆಯೋರ್ವಳು ಮುಖ, ತಲೆ ಮೇಲೆಲ್ಲ ಸೆರಗು ಮುಚ್ಚಿ,
ಹೊಟ್ಟೆ, ಸೊಂಟವ ತೋರಿಸುತ್ತಾ
ಬೀದೀಲಿ ಹೋಗುತಿದ್ದಳು..!
ಇದನ್ನು ನೋಡುತಿದ್ದ ಯುವಕನೋರ್ವ,
ಸಿಗರೇಟು ಸುಡುತ್ತಾ,
ಕಾಸುಕೊಟ್ಟು ಮೃತ್ಯುವಿಗೆ ಆಹ್ವಾನಿಸುತ್ತಿದ್ದ..!!


ಆಕೆಗೋ ಅವನೆಂದರೆ ಪ್ರಾಣ,
ಅವನಿಗೆ ಅವಳೊಂದು ಇರಿಟೇಟಿಂಗ್ ಹುಡುಗಿ..!
ಬದಲಾದ ಕಾಲಘಟ್ಟದಲ್ಲಿ,
ಅವನಿಗೆ ಅವಳ ಮೇಲೆ ಒಲವಾಗಿದೆ,
ಆದರೆ ಈಗವಳಿಗೆ ಅವನೆಂದರೆ ಅಷ್ಟಕ್ಕಷ್ಟೆ..!!


ವೃದ್ಧಾಪ್ಯದಲ್ಲಿ ಒಳರೋಗಿಗಳಾಗಿದ್ದ
ತಂದೆ-ತಾಯಿಯ ಕಂಡು ಮೂದಲಿಸುತ್ತಿದ್ದ
ಮಕ್ಕಳು,
ತಾರುಣ್ಯದಲ್ಲಿಯೇ ಮಾನಸಿಕವಾಗಿ
ರೋಗಿಗಳಾಗಿದ್ದರು..!
ಮುಂದೊಂದು ದಿನ ತಮಗೂ
ಇದೇ ಪರಿಸ್ಥಿತಿ ಬರುತ್ತದೆ ಎನ್ನುವ
ಪರಿಕಲ್ಪನೆ ಇಲ್ಲದೇ ಮೆರೆಯುತ್ತಿದ್ದರು..!!


ಕತ್ತಲು ಕವಿದಿತ್ತು..
ಜಗವು ಮಲಗಿತ್ತು..
ಕಾಮನಾಟ ಭುಗಿಲೆದ್ದಿತ್ತು..
ಹೊಸ ಪ್ರಪಂಚ ಹುಟ್ಟಿತ್ತು..!!


೫೦ಕೆಜಿ ತೂಕದ ತರುಣಿಯನ್ನು ಅನಾಯಾಸವಾಗಿ ಎತ್ತುತ್ತಿದ್ದವಗೆ,
೧೫ ಕೆಜಿ ಸಿಲಿಂಡರ್ ಭಾರವಾಗಿತ್ತು..!
ಪ್ರೇಯಸಿಯ ಮಾತೇ ವೇದವಾಗಿದ್ದ ಅವನಿಗೆ
ತಾಯಿಯ ಕಣ್ಣೀರೂ ಗೌಣವಾಗಿತ್ತು..!!


ಭೂಗ್ರಹದ ವಿಜ್ಞಾನಿಗಳ ತಂಡವೊಂದು
ಏಲಿಯನ್ ಗಳ ಬಗ್ಗೆ ರಿಸರ್ಚ್ ನಡೆಸಲು
ಅನ್ಯಗ್ರಹಕ್ಕೆ ತೆರಳಿತು..!
ಮಾನವರನ್ನು ನೋಡಿದ
ಅನ್ಯಗ್ರಹ ಜೀವಿಗಳು,
ಯಾವುದೋ ಏಲಿಯನ್ ಗಳು
ಬಂದವೆಂದು
ಬೆರಗುಗಣ್ಣಿಂದ ನೋಡಿದವು..!!


ಕಾವಿ ತೊಟ್ಟವ ಕುಣಿಯುತ್ತಿದ್ದ..
ಖಾದಿ ತೊಟ್ಟವ ಅಳಿಸುತ್ತಿದ್ದ..
ಜನ ಸಾಮಾನ್ಯ ಬಳಲುತ್ತಿದ್ದ..
ಹುಚ್ಚನಾದವ ಮಾತ್ರ ಸುಖವಾಗಿದ್ದ..!!


ಅವಳ ಬಾಹ್ಯ ಸೌಂದರ್ಯಕ್ಕೆ
ಮನಸೋತವ ಡೈವೊರ್ಸ್ ಮಾಡಿದ..!
ಹೃದಯ ಶ್ರೀಮಂತಿಕೆಗೆ ಬೆಲೆಕೊಟ್ಟವ
ಸುಖವಾಗಿ ಬಾಳಿದ..!!


ತೆರೆಯ ಮೇಲೆ ಕಲರ್ಫುಲ್ ಆಗಿದ್ದ ಆ ನಾಟಕದವರ ಜೀವನ,
ತೆರೆಯ ಹಿಂದೆ ಬಣ್ಣ ಕಳೆದುಕೊಂಡು ನೋವಿನ ಲೇಪನದಿಂದ ಆವೃತವಾಗಿತ್ತು..!!


ಜಾತ್ರೆ ಪೇಟೆಯ ಖರೀದಿಯಲ್ಲಿದ್ದಾಗ,
ಮೋಜು-ಮಸ್ತಿಯ ಭರದಲ್ಲಿದ್ದಾಗ,
ಆ ಐನೂರರ ನೋಟೂ ಚಿಕ್ಕ ಹುಳುವಿನಂತೆ ತೋರುತ್ತಿತ್ತು..!
ಚಿಕ್ಕ ಹುಡುಗಿ ಮಗು ಹಿಡಿದುಕೊಂಡು ಭಿಕ್ಷೆ ಬೇಡುವಾಗ,
ತಳ್ಳೋಗಾಡಿಲಿ ಕುಂತ ಅಂಗವಿಕಲ ದೀನನಾಗಿ ಕೈ ಚಾಚುವಾಗ,
ಹತ್ತು ರೂಪಾಯಿ ಕೂಡಾ ದೈತ್ಯ ಜೀವಿಯಂತೆ ಫೀಲಾಗಿತ್ತು..!!


ಹಡಗು ತುಂಬಲು ಹೋದವ
ಬಂದ..!
ಹೊಟ್ಟೆ ತುಂಬಲು ಹೋದವ
ಇನ್ನೂ ತುಂಬಿಸುತ್ತಲೇ ಇದ್ದಾನೆ..!!
(ಅಜ್ಜಿ ಹೇಳಿದ್ದು)



ಪೂಜಾಚರಣೆಯಲ್ಲೇ ದೇವರನ್ನು
ಕಾಣುತ್ತಿದ್ದವ ದೀನನಾದ, ಸಂಕೊಲೆಗಳಲ್ಲಿ ಅಧೀನನಾದ..!
ಕೆಲಸವನ್ನೇ ದೇವರೆಂದು
ಅದರಲ್ಲೇ ತೊಡಗಿಸಿಕೊಂಡವ
ಸಾಧುವಾದ, ಸಾಧನೆಗೈದ..!!


ಆತನಿಗೆ ಬೆಂಕಿಯ ಜೊತೆ ಸರಸವಾಡುವುದು ಹುಟ್ಟುಗುಣ..
ಅದಕ್ಕೇ ಆಗಾಗ ಹೆಣ್ಣುಮಕ್ಕಳ
ಸಂಗ ಮಾಡಿ,
ಅವರ ಕೋಪಕ್ಕೆ ಬಲಿಯಾಗಿ,
ಜೀವನವನ್ನೇ ಸುಟ್ಟುಕೊಳ್ಳುತ್ತಿದ್ದಾನೆ..!!


ಬಿಸಿಲಲ್ಲಿ ಬೀದಿ ಬೀದಿ ಅಲೆದು 
ತರಕಾರಿ ಮಾರುತ್ತಿದ್ದವ ಖುಷಿಯಾಗಿದ್ದ,
ನೆಮ್ಮದಿಯಾಗಿದ್ದ...!
ಆಫೀಸಿನ ಎಸಿ ರೂಮಲ್ಲಿ ಕುಂತು
ಕಂತೆ ಕಂತೆ ನೋಟು
ಎಣಿಸುತ್ತಿದ್ದವ ಭಯದಲ್ಲಿದ್ದ, ನೆಮ್ಮದಿಯನ್ನೇ ಕಳಕೊಂಡಿದ್ದ..!!


ತಾರುಣ್ಯದಿಂದಲೂ ಆಕೆಗೆ ಕನ್ನಡಿಯೆಂದರೆ ಪಂಚಪ್ರಾಣ...
ಆದರೆ ಇತ್ತೀಚೆಗೆ ಯಾಕೋ ಕನ್ನಡಿಯನ್ನ ತುಂಬಾ ದ್ವೇಷಿಸುತ್ತಿದ್ದಾಳೆ..!!


ಆತ ಸುಮ್ಮನಿದ್ದ; ಈತ ಬೈದ,,! 
ಆತ ಸುಮ್ಮನಿದ್ದ; ಈತ ಹೊಡೆದ..! 
ಆತ ತಿರುಗಿಬಿದ್ದ; ಈತ ಮುದುರಿಕೊಂಡ..!!


'ಕಳ್ಳರಿದ್ದಾರೆ ಎಚ್ಚರಿಕೆ' ಎಂದು ಪೊಲೀಸರು ಹಾಕಿದ್ದ ನಾಮಫಲಕವನ್ನೇ ಕಳ್ಳರು ಕದ್ದೊಯ್ದಿದ್ದರು... !!


ಲೈಫ್ ಅಲ್ಲಿ ಸೆಟಲ್ ಆದಮೇಲೆ ಮದುವೆ ಆಗುತ್ತೇನೆ, ಅಂದುಕೊಂಡವನಿಗೆ ಈಗ ೪೫ ವರ್ಷ.. 
ಅತ್ಲಾಗೆ ಲೈಫೂ ಸೆಟಲ್ ಇಲ್ಲ..!
ಇತ್ಲಾಗೆ ಹೆಣ್ಣೂ ಸಿಕ್ತಿಲ್ಲ...!!


ಎಲ್ಲಾ ದಿನಗಳಂತೆ ಸಾಧಾರಣ ದಿನವಾಗಿದ್ದ ಆತನಿಗೆ
ಹಲವರು ಅವನ ದಿನವನ್ನು ವಿಶೇಷವಾಗಿಸಿದರು...
ಅವನ ನೆನಪನ್ನು ಶೇಷವಾಗಿಸಿದರು..!!


ಚಚ್ಚಿ ಚುಟುಕ ಅಲ್ಲ ಚಚ್ಚಿ ರೋಧನೆ
ಬಸ್ಸಲ್ಲೆ ಕಾಣಿಸಿದೆ..
ಪಕ್ಕದಲ್ಲೆ ಪವಡಿಸಿದೆ..
ಮಾತಿಲ್ಲ ಕತೆಯಿಲ್ಲ..
ನೀನ್ಯಾರೊ ಗೊತ್ತಿಲ್ಲ..
ಆ ನಿನ್ನ ಸೌಂದರ್ಯವೂ
ಡಿಯೋಡ್ರೆಂಟ್ ನ ಆ ಘಮವೂ
ಎರಡೂ ಸೇರಿ ತೇಲಾಡಿತು ನನ ಮನವು..
ನಿದ್ದೆಗಣ್ಣಲ್ಲಿ ನೀ ನನ್ನ ಹೆಗಲಿಗೊರಗಿ,
ನನ್ನ ನಿದ್ದೆಯೆಲ್ಲ ಹೊಗೆಯಾಗಿ,
ಬೆಳಗಿನವರೆಗೂ ತೂಕಡಿಸಿದೆ ರೋಮಾಂಚನದಲಿ..
ಅರ್ಧ ನಿದ್ದೆಲಿ...
ನಿದಿರೆ ಯಾವಾಗಲೋ ಬಂದಿತ್ತು..
ಬಸ್ ಊರು ತಲುಪಿತ್ತು..
ಕಂಡಕ್ಟರ್ ಎಬ್ಬಿಸಿದ...
ಪಕ್ಕದಲಿ ಅವಳಿಲ್ಲ..
ಮಿಂಚಂತೆ ಬಂದವಳು
ಸವಿಗನಸ ತಂದವಳು
ಹೇಳದೇ ಮರೆಯಾದವಳು
ಯಾರವಳು ಯಾರವಳು??



No comments:

Post a Comment