Saturday 28 March 2015

Some ಮಾತು
ಇದೆಂತಾ ವಿಚಿತ್ರ?
ದೇಶದಲ್ಲಿ ಜನಸಂಖ್ಯಾ ಹೆಚ್ಚಳ ಅತಿಯಾಗಿದೆ. ಅದರ ನಿಯಂತ್ರಣಕ್ಕೆ ಹೊಸಹೊಸ ಯೋಜನೆಗಳ ಜಾರಿಗೂ ಯೋಚಿಸಲಾಗ್ತಿದೆ. ಆದರೆ ಜನಸಂಖ್ಯೆ ಇಷ್ಟೆಲ್ಲಾ ಹೆಚ್ಚಾದ್ರೂ ಎಲ್ಲೆಡೆ ಕೆಲಸಗಾರರ ಕೊರತೆ ಮಾತ್ರ ಎದ್ದು ಕಾಣ್ತಿದೆಯಲ್ಲ ಯಾಕೆ? ಪ್ರತಿಯೊಬ್ಬರಿಗೂ ವಿದ್ಯೆ ಅವಶ್ಯಕ ಅಂತಾರೆ. ಆದಕ್ಕಾಗಿ ಸಕರ್ಾರದಿಂದ ಬಹಳಷ್ಟು ಸೌಕರ್ಯಗಳೂ ಸಿಗುತ್ತಿವೆ. ಆದರೂ ಈ ಶಿಕ್ಷಣದಿಂದ ಪ್ರಜ್ಞಾವಂತರ ಸಂಖ್ಯೆ ಹೆಚ್ಚಾದಂತೆ ತೋರುತ್ತಿಲ್ಲ ಎಂಬುದೇ ಬಹಳಷ್ಟು ಜನರ ಅಭಿಪ್ರಾಯ, ಹೀಗೇಕೆ? ಬಡತನ ನಿವಾರಣೆಗಾಗಿ ಇಂದು ರೂಪಾಯಿಗೆ ಅಕ್ಕಿ ಕೊಡ್ತಾ ಇದ್ರೂ, ಅದರಲ್ಲಿ ಬಹಳಷ್ಟು ಕಾಳಸಂತೆಯಲ್ಲಿ ಬಿಕರಿಯಾಗ್ತಿವೆ. ಅದ್ನ ತಡಿಯೋಕಾಗ್ತಿಲ್ಲ ಏಕೆ? ಎಲ್ಲರೂ ಗ್ರಾಜುಯೇಟುಗಳಾಗಿ ಆಫೀಸ್ ಕೆಲಸವೇ ಬೇಕು, ಹೈಫೈ ಜೀವನವೇ ಬೇಕು. ಕುಲಕಸುಬು ಅಂತ ಏನ್ ಹೇಳ್ತೆವೊ ಆ ಮೂಲವೃತ್ತಿಯನ್ನು ಬೇಡವೇ ಬೇಡ ಅನ್ನುತ್ತಿದ್ದಾರಲ್ಲ ಯಾಕೆ? ಹೀಗೆ ಯೊಚಿಸುತ್ತಾ ಕುಂತರೆ ಇಂತಹ ಅನೇಕ ಪ್ರಶ್ನೆಗಳು ತಲೆ ಕೊರೆಯಲು ಆರಂಭಿಸ್ತಾವೆ. ಆದರೆ ಇವೆಲ್ಲಾ ಹಲವಾರು ವರ್ಷಗಳಿಂದ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ.
ಈಗ ನಮ್ಮ ಶಿರಸಿಯಂತ ನಗರದಲ್ಲಿಯೇ ಮರಹತ್ತಿ ಕಾಯಿ ಕೊಯ್ಯುವವ ಸರಿಯಾಗಿ ಸಿಕ್ತಿಲ್ಲ. ಮನೆಕೆಲಸ ಮಾಡುವ ಮಹಿಳೆ ಸಿಕ್ತಿಲ್ಲ. ಗುಡಿಗಾರಿಕೆ ಮಾಡುವವರು, ಕುಂಬಾರಿಕೆ ಮಾಡುವವರು, ಚಮ್ಮಾರಿಕೆಯವರು, ಕಳೆ ಕಿತ್ತು ಕ್ಲೀನ್ ಮಾಡುವವರು, ಹಮಾಲರು, ಗಾವಡಿಯವರು, ಕೃಷಿಯಲ್ಲಿ ತೊಡಗಿಸಿಕೊಂಡವರು, ನೇಕಾರರು, ಹೋಟೇಲ್ ಉದ್ಯಮದಲ್ಲಾದ್ರೆ ಅಡಿಗೆಯವರು, ಕ್ಲೀನರು, ಸಪ್ಲಾಯರು, ಫ್ಯಾಕ್ಟರಿಗಳಲ್ಲಿ ಹೆಲ್ಪಸರ್ು, ಮಾಕರ್ೆಟಿಂಗ್ ತಿರುಗೋಕೆ ಜನರು ಹೀಗೆ ನೂರಾರು ಕೆಲಸಗಳಿಗೆ ಕೆಲಸಗಾರರ ಕೊರತೆ ಬಹಳವೇ ಇದೆ. ಅಷ್ಟೇ ಯಾಕೆ ನಮ್ಮ ನಗರ ಸಭೆಯಲ್ಲಿಯೇ ಹಣ, ಕೆಲಸ ಎಲ್ಲಾ ಇದ್ದೂ ಕೆಲಸಕ್ಕೆ ಕಾಮರ್ಿಕರಿಲ್ಲ, ಕಸ ಎತ್ತಿಹಾಕುವವರಿಲ್ಲ ಎಂದು ನಗರಸಭಾ ಅಧ್ಯಕ್ಷರೇ ಹೇಳುತ್ತಿದ್ದಾರೆ. ಹಾಗಾದರೆ ಕೆಲಸಗಾರರೆಲ್ಲಾ ಎಲ್ಲಿ ಹೋದರು? ಜನರಿದ್ದಾರೆ, ಕೆಲಸವಿದೆ, ಕೆಲಸಗಾರರ ಕೊರತೆಯೂ ಬಹಳಿದೆ. ಇದೆಂತಾ ಸೂಜಿಗ??
ಎಲ್ಲರೂ ಅರಸನಾಗಿ ಆಳೋಕೆ ಬಯಸ್ತಾರೆ, ಆದ್ರೆ ಆಳಾಗಿ ದುಡಿಯೊರು ಯಾರು? ಎಲ್ಲರೂ ಕೆಲಸ ಮಾಡಿಸುವವರೇ ಆದರೆ, ಕೆಲಸ ಮಾಡುವವರು? ಎಲ್ಲರೂ ಡಿಗ್ರೀ ಹೋಲ್ಡರ್ಗಳೇ ಆಗಿ ಈ ಕೆಲಸ ನಮ್ಮದಲ್ಲ, ನಮ್ಮ ಓದಿಗೆ ಈ ಕೆಲಸ ಅವಮಾನಕಾರಿ ಎಂದೆಲ್ಲಾ ಬಿಂಕ ತೋರಿಸ್ತಾ ಇದ್ರೆ ಜೀವನ ನಡೆಯೋದಾದ್ರೂ ಹೇಗೆ? ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲರೂ ತಮ್ಮ ಕೆಲಸವನ್ನು ಸ್ವತ ತಾವೇ ಮಾಡುತ್ತಾರೆ. ಅವರೇ ಮನೆ ಸ್ವಚ್ಚಗೊಳಿಸುತ್ತಾರೆ, ಬಣ್ಣ ಬಳಿಯುತ್ತಾರೆ, ಕಾರ್ ತೊಳೆಯುತ್ತಾರೆ, ತಮ್ಮ ಉದ್ಯಾನವನವನ್ನೂ ಸಿಂಗರಿಸಿಕೊಳ್ಳಿತ್ತಾರೆ. ಅವರೇ ಮಾಲಿ, ಅವರೇ ಕೂಲಿ, ಅವರೇ ಹಮಾಲಿ ಹಾಗ ಅವರೇ ಯಜಮಾನರೂ ಸಹಾ. ಆ ಬಗ್ಗೆ ಅವರಿಗೆ ಮುಜುಗರವಿಲ್ಲ, ಬೇಸರವಿಲ್ಲ. ತಮ್ಮ ಕೈಲಾದ ಕೆಲಸ ತಾವೇ ಮಾಡಿ ಕಷ್ಟ ಎನಿಸಿದರೆ ಅದಕ್ಕೊಮದು ಯಂತ್ರ ತಯಾರಿಸುವ ಬಗ್ಗೆ ಯೊಚಿಸುತ್ತಾರೆ. ಹೊಸ ತಂತ್ರಜ್ಞಾನ, ಆಲೋಚನೆಗಳಿಗೆ ನಾಂದಿ ಹಾಡುತ್ತಾರೆ. ಆದರೆ ನಮಗಿಲ್ಲಿ ಹಾಗಾಗಲ್ಲ. ದುಡ್ಡು ಕೊಟ್ಟು ಕೆಲಸದವರ ಹತ್ತಿರವೇ ಮಾಡಿಸಬೇಕೆಂಬ ಖಯಾಲಿ ನಮಗೆ. ಆರಾಮು ಜೀವನ ಕೆಲಸದಲ್ಲಿದೆ ಎಂದು ಹುಡುಕುವ ನಾವು ಆರಾಮತನ ನಮ್ಮ ಮನದಲ್ಲಿದೆ ಎಂದು ತಿಳಿಯುವುದೇ ಇಲ್ಲ.
ಇನ್ನೊಂದು ಮುಖ್ಯವಿಚಾರವೆಂದರೆ ನಮ್ಮಲ್ಲಿ ಉಪದೇಶಗಳು ಮಾತ್ರ ದಂಡಿದಂಡಿಯಾಗಿ ಸಿಗ್ತವೆ. ಯಾರ್ ಕೇಳ್ತಾರೋ ಬಿಡ್ತಾರೋ, ಯಾರಿಗೆ ಬೇಕೋ ಬೇಡ್ವೋ ಕೊಡೋರಂತೂ ಧಾರಾಳವಾಗಿ ಕೊಡ್ತಾನೆ ಇರ್ತಾನೆ. ಯಾರ್ದು ಏನ್ ಹೋಗೊದಿದೆ? ನಮ್ಮಲ್ಲಿ ಸಮಯಕ್ಕಂತೂ ಕೊರತೆಯಿಲ್ಲ ಎಂಬ ಮನೋಭಾವ. ಯಾವುದೇ ಒಂದು ಕೆಲಸವನ್ನೂ ಇಷ್ಟ ಪಟ್ಟು ಮಾಡುವ ವರ್ಗವೇ ಕಡಿಮೆಯಾಗುತ್ತಿದೆ. ಓದು, ಅಂಕಗಳಿಸು, ಕ್ಯಾಂಪಸ್ಸಲ್ಲಿ ಸೆಲೆಕ್ಟ್ ಆಗು, ಇಲ್ಲದಿದ್ದರೆ ಇನ್ನೊಂದು ಕೋರ್ಸ್ ಮಾಡು, ಎಂ.ಎನ್.ಸಿ. ಯಲ್ಲಿ ನೌಕರಿ ಹಿಡಿ. ಸಿಗದಿದ್ದರೆ ರೆಫರೆನ್ಸೋ, ಲಂಚವೋ ಏನೋ ಒಂದು ಕೊಟ್ಟು ಕೆಲಸ ಹಿಡಿ. ಆಮೇಲೆ ತಿಂಗಳು ತಿಂಗಳು ಸಂಬಳ ಎಣಿಸ್ತಾ, ಮನೆಲಿ ಕುಂತು ಆರಾಮವಾಗಿದ್ದು, ಕೆಲಸ ಮಾಡೋಕೆ ಬೇಸರವಾಗಿ, ಕೆಲಸಗಾರ ಸಿಗೊಲ್ಲವೆಂದು ಶಪಿಸುತ್ತಾ ಜೀವನ ನೂಕುತ್ತಿರುವುದು ಬಹಳಷ್ಟು ಜನರ ಪರಿಸ್ಥಿತಿಯಾಗಿದೆ. ಪ್ಯಾಶನ್ಗಾಗಿ ಬದುಕುವವರಿಗಿಂತ ಫ್ಯಾಶನ್ ತೋರಿಸೋಕೆ ಇರುವವರೇ ಹೆಚ್ಚಿದ್ದಾರೆ. ಏನಾದ್ರೂ ಒಂದು ಗುರಿ ಇಟ್ಟುಕೊಂಡು ಜೀವಿಸುವವರಿಗಿಂತ ಬಂದದ್ದನ್ನು ಅನುಭವಿಸುತ್ತಾ ಕಾಲ ನೂಕೋಣ ಎನ್ನುವವರೇ ಅಧಿಕವಿದ್ದಾರೆ. ನನಗಂತೂ ಆ ರೀತಿ ಬದುಕೋಕೆ ಆಗಲ್ಲ. ಡಿಪ್ಲೋಮಾ ಇಲೆಕ್ಟ್ರಿಕಲ್ ಓದಿ, ಬಿ,ಟೆಕ್ ಮೆಕ್ಯಾನಿಕಲ್ ಮಾಡಿ, ಎಲ್ ಅಂಟ್ ಟಿ, ಕಿರ್ಲೊಸ್ಕರ್ ಗಳಂತಾ ಕಂಪನಿಯಲ್ಲಿ ಹಾರ್ಡ್ ವೇರ್ ಸೆಕ್ಷನ್ನಲ್ಲಿ ದುಡಿದು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕೆಲಸದ ಮಜಾವನ್ನೂ ಅನುಭವಿಸಿ, ಈ ಪತ್ರಿಕೋದ್ಯಮ ಎನ್ನುವ ಕ್ಷೇತ್ರಕ್ಕೆೆ ಬಂದು ಶಿರಸಿಯಲ್ಲಿ ಸ್ವಂತ ಪತ್ರಿಕೆ ಆರಂಭಿಸುವುದೆಂದರೆ ತಮಾಷೆಯಾ? ಇದೊಂತರಾ ನನ್ನ ಪ್ಯಾಷನ್. ನನ್ನ ಮುಂದಿನ ಗುರಿ ಸಾಧನೆಗೆ ಒಂದು ಮೆಟ್ಟಿಲಷ್ಟೆ..! ಯಾಕೋ ಮಾರ್ಚ್ ಬರ್ತಿದ್ದಂಗೆ ಇವೆಲ್ಲಾ ನೆನಪಾಯ್ತು. ಯಾಕಂದ್ರೆ ಈ ಯೋಚನೆ ಶುರುವಾದದ್ದೇ ಕಳೆದ ವರ್ಷದ ಮಾರ್ಚಲ್ಲಿ. ಅದಕ್ಕೆ ಸಹಾಯ ಮಾಡಿದವರು ಅನೇಕರು. ಯಾಕೋ ಸುಮ್ನೆ ನಿಮ್ಮ ಬಳಿ ಹೇಳಿಕೊಳ್ಳೋಣವೆನ್ನಿಸ್ತು.. ಕೊನೆಯದಾಗಿ ಪ್ರಶ್ನೆಗಳಾಗೇ ಉಳಿದವುಗಳಿಗೆ ಸಿಕ್ಕ ಪ್ರಶ್ನೆ ಇದೆಂತಾ ವಿಚಿತ್ರ?

No comments:

Post a Comment