Saturday 28 March 2015

SOME ಮಾತು
ಅಬ್ಬೋ!! ಲಬೋ ಲಬೋ ಎಬೋಲಾ
ಮಾನವನು ತಂತ್ರಜ್ಞಾನದಲ್ಲಿ ಬೆಳೆದಂತೆಲ್ಲಾ ನಮ್ ದುನಿಯಾ ಸಣ್ಣದಾಗ್ತಿದೆ. ನಾವು ಏನೆಲ್ಲಾ ಸಾಧಿಸಿದ್ದೀವಿ ಅಂತ ಹೆಮ್ಮೆ ಪಟ್ಟುಕೊಳ್ಳುವಷ್ಟರಲ್ಲಿ ಹೊಸ ಹೊಸ ಸಮಸ್ಯೆಗಳು, ರೋಗಗಳು ಹುಟ್ಟುತ್ತಿವೆ ಹಾಗೇ ತ್ವರಿತವಾಗಿ ಹಬ್ಬುತ್ತಿವೆ. ನಾವು ಶಿರಸಿಯಂತ ಪುಟ್ಟ ನಗರದಲ್ಲಿ ಆರಾಮವಾಗಿದ್ದೀವಿ ಅಂದುಕೊಳ್ಳುವ ಕಾಲ ಈಗಿಲ್ಲ. ನೆನ್ನೆ ಎಲ್ಲೋ ಆಫ್ರೀಕಾದಲ್ಲಿ ಹುಟ್ಟಿದ ಎಬೋಲಾ ಇಂದು ನಮ್ಮಲ್ಲಿ ಬಂದರೂ ಅಚ್ಚರಿಯೇನಿಲ್ಲ. ನಮ್ಮಲ್ಲಿ ಎಷ್ಟು ಜನಕ್ಕೆ 'ಎಬೋಲಾ' ಅನ್ನೋ ರೋಗದ ಬಗ್ಗೆ ಗೊತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಆ ಬಗ್ಗೆ ತಿಳುವಳಿಕೆ ಮಾತ್ರ ಇನ್ನೂ ನಮ್ಮಲ್ಲಿ ಸಂಪೂರ್ಣವಾಗಿ ದೊರಕಿಲ್ಲ ಅನ್ನೋದು ನನ್ನ ಅಭಿಪ್ರಾಯ.
ಹಾಗಿದ್ರೆ ಈ ಎಬೋಲಾ ಅಂದ್ರೆ ಏನು? ಇದರ ತೀವ್ರತೆ ಯಾಪ ಪರಿ ಇದೆ? ಇದು ನಮಗೆ ಹೇಗೆ ತೊಂದರೆದಾಯಕ ಅನ್ನೋ ಪ್ರಶ್ನೆ ನಮ್ಮಲ್ಲಿ ಅನೇಕರಿಗೆ ಕಾಡ್ತಿವೆ. ಈ ಎಬೋಲಾ ಅನ್ನೋದು ಆಫ್ರಿಕಾ ಖಂಡದ ಕಾಂಗೋ ಗಣರಾಜ್ಯದ ಒಂದು ನದಿಯ ಹೆಸರು. ಮೊಟ್ಟಮೊದಲಿಗೆ ಒಂದು ವಿಚಿತ್ರ ರೋಗ ಆ ನದಿಯ ದಂಡೆಯ ಮೇಲಿನ ಜನರಲ್ಲಿ 1976ರಲ್ಲಿ ಕಾಣಿಸಿಕೊಂಡಿತು. ಅದಕ್ಕೆ ಈ ರೋಗಕ್ಕೆ ಎಬೋಲಾ ಎಂದೇ ಹೆಸರಿಸಲಾಯಿತು. ಈ ರೋಗಕ್ಕೆ ಕಾರಣವಾಗುವ ವೈರಾಣುಗಳು ಅಲ್ಲಿನ ಮಳೆಕಾಡಿನ ಬಾವಲಿಯ ದೇಹದಲ್ಲಿ ಅವಿತಿರುತ್ತವೆ. ಯಾವಾಗಲಾದರೊಮ್ಮೆ ಅದು ಯಾವುದಾದರೂ ಪ್ರಾಣಿಗೆ ಕಚ್ಚಿದಾಗ ಆ ವೈರಾಣು ಇತರ ಪ್ರಾಣಿಗಳಿಗೆ ಹಬ್ಬುತ್ತದೆ. ಹೀಗೆ ಪಸರಿಸುತ್ತಾ ಬಂದ ವೈರಾಣು ಇಂದು ಮನುಷ್ಯರ ಮನೆಯವರೆಗೂ ಬಂದು ನಿಂತಿದೆ. ಅಷ್ಟೇ ಅಲ್ಲದೇ ತನ್ನ ಕರಾಳ ಬಾಹುಗಳನ್ನು ಮನುಕುಲದತ್ತಲೂ ಚಾಚಿವೆ.
ಪಶ್ಚಿಮ ಆಫ್ರಿಕಾ ದೇಶಗಳಾದ ಲೈಬೀರಿಯಾ, ಗಿನಿ, ಕಾಂಗೋ, ನೈಜೀರಿಯಾ, ಸಿಯೇರಾ ಲಿಯೋನ್ನಂತಹ ದೇಶಗಳಲ್ಲಿ ಈ ಎಬೋಲಾ ರೋಗವು ಭಾರಿ ಅನಾಹುತವನ್ನೇ ಎಸಗುತ್ತಿದೆ. ಈ ಮೊದಲೂ ಸಹಾ 1976ರಲ್ಲಿ, 1995ರಲ್ಲಿ, 2007ರಲ್ಲಿ ಈ ರೋಗವು ಕಾಣಿಸಿಕೊಂಡಿದ್ದರೂ ಸಹಾ ಇದಕ್ಕೆ ಸರಿಯಾದ ಚಿಕಿತ್ಸೆ ಮಾತ್ರ ಇಲ್ಲಿಯವರೆಗೂ ಸರಿಯಾಗಿ ದೊರಕುತ್ತಿಲ್ಲ ಹಾಗೂ ಈ ರೋಗದ ನಿಮರ್ೂಲನೆಯು ಸಾಧ್ಯವಾಗಿಲ್ಲ ಅಂದ್ರೆ ನಾವು ಬೇಕಾದ್ದನ್ನು ಬಿಟ್ಟು ಬೇರೆಡೆಗೆ ತುಡಿಯುತ್ತಿರುವುದು ಎದ್ದು ಕಾಣುತ್ತಿದೆ. ಈ ಎಬೋಲಾ ಕಾಯಿಲೆಗೆ ತುತ್ತಾಗಿರುವ ಸುಮಾರು ಸಾವಿರಾರು ಜನರು ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಿನಂಪ್ರತಿ ನರಳುತ್ತಿದ್ದಾರೆ. ಆದರೆ ಚಿಕಿತ್ಸೆ ಅನ್ನೋದು ನಾವಂದುಕೊಂಡಷ್ಟು ಸುಲಭವಿಲ್ಲ. ಅನಸ್ತೇಶಿಯಾ ಕೊಟ್ಟು ಸರ್ಜರಿ ಮಾಡಿದಷ್ಟು ರಿಸ್ಕೂ ಅಲ್ಲ. ಯಾಕಂದ್ರೆ ರೋಗಿಯನ್ನು ಯಾರೂ ಸಮೀಪಿಸುವ ಹಾಗಿಲ್ಲ. ರೋಗಿಯ ಸನಿಹ ಹೋಗುವವರು ದೇಹಕ್ಕೆಲ್ಲಾ ಕವರ್ ಮಾಡಿಕೊಂಡೇ ಹೋಗಬೇಕು. ಮಾತ್ರೆ ಆರೈಕೆ ಮುಗಿಸಿ ಹೊರಬಂದ ನಂತರ ದೇಹಕ್ಕೆ ಮಾಡಿಕೊಂಡಿದ್ದ ಕವಚಗಳನ್ನೂ ನಾಶಗೊಳಿಸಬೇಕು. ರೋಗಿಗೆ ರಕ್ತವಾಂತಿ, ರಕ್ತ ಭೇದಿ, ಅತಿಸಾರದಂತಹ ಕಾಯಿಲೆಗಳು ಹೆಚ್ಚಾಗದಂತೆ ನೋಡಿಕೊಂಡರೆ ಮಾತ್ರ ರೋಗಿ ಬದುಕುಳಿಯಲು ಸಾಧ್ಯ. ಇಲ್ಲವಾದರೆ ಶೇಕಡ 90ರಷ್ಟು ರೋಗಿಗಳು ಸಾಯುವ ಸಂಭವವೇ ಅಧಿಕ. ಅದು ಕೂಡಾ ಅಂತಿಂಥ ಸಾವಲ್ಲ, ಯಾತನಾಮಯ ಮರಣವದು. ದೇಹದ ಎಲ್ಲಾ ರಂಧ್ರಗಳಿಂದ, ಬೆವರು ಗ್ರಂಥಿಗಳಿಂದಲೂ ರಕ್ತದ್ರವ ಪಸರುತ್ತದೆ. ರೋಗಿಯ ರಕ್ತ, ಬೆವರು, ಜೊಲ್ಲು, ಕಣ್ಣೀರು, ಮಲ-ಮೂತ್ರ, ವೀರ್ಯ ಇಂತವೇನಾದ್ರೂ ನಮಗೆ ತಾಕಿದ್ರೆ ಎಬೋಲಾ ಹರಡುವುದು ಪಕ್ಕಾ! ಸೊಳ್ಳೆ ಕಚ್ಚುವುದರಿಂದ, ಗಾಳಿಯಲ್ಲಿ ಇವು ಹರಡಲಾರದು. ತಮ್ಮ ದಾರುಣ ಸ್ಥಿತಿಯಲ್ಲಿ ರೋಗಿಗಳೇ ತಮ್ಮ ಚಿಕಿತ್ಸೆ ಮಾಡಿಕೊಳ್ಳಬೇಕಾಗಿರುವುದ ಈ ರೋಗದ ಇನ್ನೊಂದು ದುರಂತ.
ಈ ಎಬೋಲಾ ವೈರಾಣು ಸೊಂಕು ತಗುಲಿದ ಎರಡು ದಿನ ಅಥವಾ ಹೆಚ್ಚೆಂದರೆ ಮೂರು ವಾರಗಳೊಳಗೆ ರೋಗಲಕ್ಷಣಗಳು ಕಾಣಿಸಲಾರಂಭಿಸುತ್ತವೆ. ಆಗ ಮೊದಲು ಗಂಟಲುನೋವು, ಸ್ನಾಯು ನೋವು, ತಲೆನೋವು ಆರಂಭವಾಗಿ ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯು ಹದಗೆಡುತ್ತದೆ. ನಂತರ ವಾಕರಿಕೆ, ರಕ್ತವಾಂತಿ, ರಕ್ತಭೇದಿ ಆರಂಭವಾಗಿ ದೇಹದೆಲ್ಲೆಡೆ ಜೀವದ್ರವ ಜಿನಗಲು ಆರಂಭವಾಗುತ್ತವೆ. ಹಾಗಂತ ಈಗಲೇ ಭಯಬೀಳಬೇಕಾಗಿಲ್ಲ. ಈ ಭೀಕರ ಎಬೋಲಾ ಕಾಯಿಲೆಗೆ ಆರಂಭದಲ್ಲಿಯೇ ಸರಿಯಾದ ಸರಳ ಶುಶ್ರೋಷೆ ಸಿಕ್ಕರೂ ರೋಗಿ ಬಚಾವಾಗಬಹುದು. ಅದೇನೆ ಇದ್ರೂ ಕಾಯಿಲೆ ಬಂದ ನಂತರ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರದಂತೆ ಮುನ್ನೆಚ್ಚರಿಕೆ ವಹಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಈ ರೋಗದ ಕುರಿತು ಪ್ರತಿಯೊಬ್ಬರಲ್ಲೂ ತಿಳುವಳಿಕೆ ಮೂಡಿಸುವುದೂ ಅಷ್ಟೇ ಮುಖ್ಯವಾಗಿದೆ. ಯಾಕಂದ್ರೆ ಇಂದು ಆಫ್ರಿಕಾದಲ್ಲಿರುವ ಈ ರೋಗ ನಾಳೆ ನಮ್ಮಲ್ಲೂ ಬರಬಾರದಂತೇನಿಲ್ಲ. ಮೊದಲೇ ಹೇಳಿದಂತೆ ನಾವು ಬೆಳೆಯುತ್ತಿದ್ದೇವೆ. ಜಗತ್ತು ಕಿರಿದಾಗುತ್ತಿದೆ.

No comments:

Post a Comment