Saturday 28 March 2015



SOME ಮಾತು
ಬಿಕರಿಗಿವೆ ಹಳೇಯ ನೆನಪುಗಳು !
ನಮ್ಮಲ್ಲಿ ಎಷ್ಟೋ ಜನ ಹೇಳಬಹುದು ಈಗ ನಾವು ಸುಧಾರಿಸಿದ್ದೇವೆ. ಅಚ್ಛೇ ದಿನ ಬಂದಿದೆ, ಭಾರತ ಪ್ರಕಾಶಿಸುತ್ತಿದೆ ಹೀಗೆ ಏನೇನೋ! ಜಾಗತಿಕವಾಗಿ ನಾವು ಬದಲಾಗುತ್ತಿದ್ದೇವೆ, ಬದಲಾಗಿದ್ದೇವೆ. ನಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗುತ್ತಿವೆ. ಜೊತೆಗೆ ಬೇರೆ ಬೇರೆ ಸಮಸ್ಯೆಗಳು, ರಾಜಕೀಯ ಕಾರಣಗಳಿಂದ ನಮಗೆ ಹಳೇ ಕಾಲವೇ ಚೆಂದವೆಂದು ಹೇಳಿಕೊಳ್ಳುವವರಿಗೆ ಇವತ್ತಿನ ಈ Some ಮಾತು ಇಷ್ಟವಾಗಬಹುದು.
ನಮ್ಮ ಈ Sirsi Siri - ಶಿರಸಿ ಸಿರಿ ಓದುಗರಲ್ಲಿ ಬಹಳಷ್ಟು ಜನರು 1949 ರಿಂದ 1989ರ ನಡುವೆ ಜನಿಸಿದವರು ಅಥವಾ ಒಂದೆರಡ್ಮೂರು ವರುಷ ಆಚೀಚೆಯವರು. ನಮಗೆೆ ಈಗಿರೋ ಟೆನ್ಶನ್ನು, ಒತ್ತಡ ಎಲ್ಲಾ ಒತ್ತಟ್ಟಿಗಿಟ್ಟು, ಲೈಟ್ ಆಗಿ ಒಮ್ಮೆ ನಮ್ಮ ಫ್ಲಾಶ್ ಬ್ಯಾಕಿಗೆ ಹೋಗಿ ಬರೋಣ. ಮೊದಲಿನ ನಮ್ಮ ಜೀವನ ಹೇಗಿತ್ತು ಅಂತೊಮ್ಮೆ ಹೋಲಿಕೆ ಮಾಡೋಣ, ನಾವು ಎಷ್ಟು ಅದೃಷ್ಟವಂತರೆಂದು ಖುಷಿಪಡೋಣ. ಕಾರಣಗಳು ಹಲವು ಸಿಕ್ತವೆ. ನಾವಾಗ ಈಗಿನ ತರ ಶಾಲೆಗೆ ಹೋಗುವಾಗ ಮಣ ಭಾರದ ಪುಸ್ತಕಗಳನ್ನು ಹೊತ್ತು ತಿರುಗುತ್ತಿರಲಿಲ್ಲ. ನಾವಾಗ ಆಟವಾಡುವಾಗ ಆಗಲಿ, ಸೈಕಲ್ ತುಳಿಯುವಾಗಾಗಲಿ, ಬೈಕ್ ಓಡಿಸುವಾಗ ಆಗಲಿ ಹೆಲ್ಮೇಟ್ ಧರಿಸುತ್ತಿರಲಿಲ್ಲ, (ಈಗಲೂ ಧರಿಸಲ್ಲ, ಅನ್ನುವವರಿಗೆ ಹೆಲ್ಮೇಟ್ ಖಡ್ಡಾಯವೆಂಬ ಸಕಕಾರಿ ಆದೇಶ ಗೊತ್ತಿಲ್ಲ ಎಂದರ್ಥ), ಪ್ಯಾಡು, ಗಾರ್ಡುಗಳನ್ನೆಲ್ಲಾ ಹಾಕಿದವರೇ ಅಲ್ಲ. ಆಗ ಶಾಲೆ ಮುಗಿದ ನಂತರ ಊರೆಲ್ಲಾ ಆಟವಾಡಿ ಮನೆಗೆ ಬರೋದೆ ಕತ್ತಲಾದ ಮೇಲಾಗ್ತಿತ್ತು. ಜಂಗಲ್ ಬುಕ್, ಅಲ್ಲಾದೀನ್ ಫೇವರಿಟ್ ಕಾರ್ಟೂನಾಗಿದ್ರೂ ಮಕ್ಕಳ್ಯಾರೂ ಅದಕ್ಕೆ ಅಡಿಕ್ಟ್ ಆಗಿರಲಿಲ್ಲ. ಹಿರಿಯರೂ ಅಷ್ಟೇ ದೂರದರ್ಶನ, ವಾರಕ್ಕೊಮ್ಮೆ ಬರ್ತಾ ಇದ್ದ ರಾಮಾಯಣ, ಮಹಾಭಾರತ ತಪ್ಪದೇ ನೋಡ್ತಾ ಇದ್ರೂ ಈಗಿನ ತರ ಟೀವಿ, ಕಂಪ್ಯೂಟರ್ ಮುಂದೆಯೇ ದಿನವಿಡೀ ಇರ್ತಾ ಇರ್ಲಿಲ್ಲ. ಆಗ ನಾವು ಆಟವಾಡ್ತಾ ಇದ್ದದ್ದು ನಮ್ಮ ಸ್ನೇಹಿತರ ಜೊತೆ ಮೈದಾನದಲ್ಲಿಯೇ ಹೊರತು ಈಗಿನ ತರ ಇಂಟರ್ನೆಟ್ ಗೆಳೆಯ/ಗೆಳತಿಯರೊಡನೆ ಆಟವನ್ನು ಬೇರೆಯವರ ಜೀವನದೊಂದಿಗೆ ಆಡುತ್ತಿರಲಿಲ್ಲ. ಆಗೆಲ್ಲ ನಮಗೆ ಬಾಯಾರಿದರೆ ನಲ್ಲಿ ನೀರಿಗೇ ಬೊಗಸೆಯೊಡ್ಡಿ ನೀರು ಕುಡಿಯುತ್ತಿದ್ದೆವೆಯೇ ಹೊರತು. ಈಗಿನ ಹಾಗೆ ಮಿನೆರಲ್ ವಾಟರ್ ಬಾಟಲಿಯೇಬೇಕೆಂದು ಹೇಳುತ್ತಿರಲಿಲ್ಲ. ಒಂದೇ ಜ್ಯೂಸನ್ನು ಸ್ನೇಹಿತರೊಡನೆ ಒಟ್ಟಿಗೆ ಕುಡಿದರೂ ಎಂಜಲೆಂದು ಅಸಹ್ಯಪಡುತ್ತಿರಲಿಲ್ಲ, ಮತ್ತೆ ಯಾವುದೇ ರೋಗವೂ ಬರುತ್ತಿರಲಿಲ್ಲ. ಆಗ ಮನೆಯಲೆಲ್ಲಾ ಒಟ್ಟಿಗೆ ಕುಂತು ಊಟ ಮಾಡ್ತಿದ್ವಿ, ಭಜನೆ ಮಾಡ್ತಿದ್ವಿ, ಆಟ ಆಡ್ತಿದ್ವಿ. ಈಗಿನ ತರ ಒಬ್ಬೊನ್ನರ ಒಂದೊಂದು ಸಮಯಕ್ಕೆ ಟೀವಿ, ನೋಡ್ತಾ ಊಟ ಮಾಡ್ತಾ ಇರ್ಲಿಲ್ಲ.
ತಟ್ಟೆ ತುಂಬಾ ಸಿಹಿ ತಿನಿಸು, ದಂಡಿ ದಂಡಿ ಅನ್ನ ಉಂಡರೂ ನಮಗಾಗ ಮೈ ಬರುತ್ತಿರಲಿಲ್ಲ. ಆಗ ನಾವು ಡಯಟ್ ಎಲ್ಲಾ ಮಾಡಿದವರೇ ಅಲ್ಲ. ಆರೋಗ್ಯ ಚೆನ್ನಾಗಿರಲಿ ಎಂದು ಜಾಸ್ತಿ ಕಾಳಜಿ ಮಾಡಿದವರೂ ಅಲ್ಲ! ನಮ್ಮ ಆಟಿಕೆಗಳನ್ನು ನಾವೇ ತಯಾರಿಸಿಕೊಂಡು ಆಡುತ್ತಿದ್ದೆವು. ಈಗಿನ ತರ ತರಹೇವಾರಿ ಆಟಿಕೆಗಳು ನಮಗೆಲ್ಲಿ ಸಿಕ್ತಿತ್ತು? ಈಗಿನ ಹಾಗೆ ಪ್ರತಿಯೊಂದಕ್ಕೂ ದುಡ್ಡೇ ಬೇಕೆಂದು ಹಣದ ಹಿಂದೆ ನಾವು ಓಡ್ತಾ ಇದ್ದಿರಲಿಲ್ಲ. ಮಾತಾಡಬೇಕೆಂದ್ರೆ ಮುಖಾಮುಖಿ ಭೇಟಿಯೇ ಆಗ್ತಿದ್ವಿ, ಈಗಿನ ಹಾಗೆ ಮೊಬೈಲ್, e-mailನಲ್ಲಿಯೇ ವಿಚಾರಿಸಿಕೊಳ್ತಾ ಇರ್ಲಿಲ್ಲ. ನಮಗೆ ಹುಷಾರಿಲ್ಲವೆಂದ್ರೆ ನಾವು ವೈದ್ಯರ ಹತ್ರ ಹೋಗ್ತಾ ಇರ್ಲಿಲ್ಲ, ವೈದ್ಯರೇ ನಮ್ಮ ಮನೆಗೆ ಬಂದು ತಪಾಸಿಸುತ್ತಿದ್ದರು. ಆಗೆಲ್ಲಾ ನಮ್ಮ ಭಾವನೆಗಳನ್ನು ಈಗಿನ ಹಾಗೆ ಎಲ್ಲರೊಂದಿಗೆ ಗ್ರೂಪ್ ಚಾಟ್ನಲ್ಲಿ ಹಂಚಿಕೊಳ್ತಾ ಇರ್ಲಿಲ್ಲ. ಆಗಿನ ಪತ್ರ ವಿನಿಮಯ, ಗ್ರೀಟಿಂಗ್ ಶುಭಾಶಯ ಈಗಿನ ಕಂಪ್ಯೂಟರ್ ಚಿತ್ರಗಳು ಖಂಡಿತ ಕೊಡಲಾರವು. ಆಗೆಲ್ಲ ನಮ್ಮತ್ರ ಸೆಲ್ಫೋನ್, ಡಿವಿಡಿ, ಪ್ಲೇ ಸ್ಟೇಷನ್, ಎಕ್ಸ್ ಬಾಕ್ಸ್, ವಿಡಿಯೋ ಗೇಮ್, ಪರ್ಸನಲ್ ಕಂಪ್ಯೂಟರ್, ಇಂಟರ್ನೆಟ್, ಚಾಟ್ ಎಲ್ಲಾ ಇರದಿದ್ರೂ ಆತ್ಮೀಯ ಮಿತ್ರರು ಹಲವರಿದ್ರು. ಆಗ ನಮ್ಮ ಸ್ನೇಹಿತರ, ಬಂಧುಗಳ ಮನೆಗೆ ಹೋಗಬೇಕೆಂದ್ರೆ ಕರೆ ಮಾಡಿಯೇ ಹೋಗಬೇಕೆಂದಿರಲಿಲ್ಲ. ಇರ್ತಾರೋ, ಇಲ್ವೋ ಅಂತಾ ಕೇಳೋ ಪರಿಸ್ಥಿತಿಯೇ ಇರಲಿಲ್ಲ. ಯಾರಾದರೊಬ್ಬರು ಮನೆಲಿ ಇದ್ದೇ ಇರ್ತಿದ್ರು, ನಮ್ಮನ್ನು ಆತ್ಮೀಯವಾಗಿ ಮಾತನಾಡಿಸ್ತಿದ್ರು.
ಆಗೆಲ್ಲಾ ಈಗಿನ ತರ ಏನೂ ಇರದಿದ್ರೂ ನೆಮ್ಮದಿಯಿತ್ತು. ಭವಿಷ್ಯವ ನೆನೆದು ಮೊದಲೇ ಇನ್ಶುರೆನ್ಸ್ ಪಾಲಿಸಿ ಮಾಡಿಸಿಡ್ತಾ ಇರಲಿಲ್ಲ, ಆಗೆಲ್ಲಾ ಇದ್ದ ಕಪ್ಪು ಬಿಳುಪು ಚಿತ್ರಪಟಗಳಲ್ಲೇ ಬಣ್ಣಬಣ್ಣದ ನೆನಪುಗಳಿರ್ತಿದ್ವು ಗ್ರಾಮಾಫೋನ್ ಮತ್ತು ಹಳೇ ಕುಟ್ಟೋ ರೇಡಿಯೋದಲ್ಲಿ ಬರ್ತಿದ್ದ ಹಾಡನ್ನೇ ಖುಷಿಖುಷಿಯಾಗಿ ಗುನುಗುತಿದ್ವಿ. ಆಗಿನ ಎತ್ತಿನಗಾಡಿ, ಜಟಕಾಬಂಡಿ ಮತ್ತು ಅಪರೂಪಕ್ಕೆ ಏತರ್ಾ ಇದ್ದ ಕೆಂಪು ಬಿಳಿ ಸರ್ಕಾರಿ ಬಸ್ಸಿನಲ್ಲೇ ಈಗಿನ ಮಲ್ಟಿ ಆಕ್ಸಲ್ ಏರ್ ಬಸ್, ವಿಐಪಿ ಕ್ಲಾಸ್ ಫ್ಲೈಟ್ಗಿಂತ ಜಾಸ್ತಿ ನೆಮ್ಮದಿಯಿತ್ತು. ಆಗ ನಮ್ಮ ಬಳಿಯಿದ್ದ ಕಡಿಮೆ ಅನುಕೂಲತೆಗಳಲ್ಲೇ ಜಾಸ್ತಿ ನೆಮ್ಮದಿಯಿತ್ತು. ಆಗಿನ ನಮ್ಮ ಮನೆಕೆಲಸದಲ್ಲೇ ಈಗ ಮಾಡುವ ಜಿಮ್ ಗಿಂತಾ ಜಾಸ್ತಿ ವ್ಯಾಯಾಮ ಸಿಗುತಿತ್ತು. ಆಗಿನ ನೀರು ಮಜ್ಜಿಗೆಯೇ ಈಗಿನ ತಂಪುಪಾನಿಯಕ್ಕಿಂತ ಹೆಚ್ಚು ತಂಪಾಗಿರುತ್ತಿತ್ತು. ಆಗ ರೋಡುಗಳಲ್ಲಿ ಕಾಣುತ್ತಿದ್ದದ್ದೇ ಕೆಲವು ಕಾರುಗಳು ಆದರೀಗ ಎಲ್ಲೆಡೆಯೂ ಕಾಣೋದು ಬರೀ ಕಾರು ಮತ್ತು ಬಾರುಗಳೇ! ಆಗೆಲ್ಲಾ ಮರಗಿಡಗಳು ಕೊಡ್ತಾ ಇದ್ದ ಆ ಹರ್ಷ ಈಗಿನ ಭವ್ಯ ಗಗನಚುಂಬಿ ಕಟ್ಟಡಗಳೂ ಕೊಡಲಾರವು. ಆಗಿನ ನಮ್ಮ ಶಾಲಾ ಮೇಷ್ಟ್ರುಗಳ ಹೊಡೆತಕ್ಕಿಂತ ಈಗಿನ ಜೀವನದ ಹೊಡೆತಗಳು ಭಯಾನಕವಾಗಿವೆ. ಆಗೆಲ್ಲಾ ಚಡ್ಡಿ ಹುಡುಗರ ಅಥವಾ ಪುರುಷರ ಉಡುಪಾಗಿತ್ತು. ಈಗ ಮಹಾನಗರದ ರೋಡುಗಳಲ್ಲೆಲ್ಲಾ ಬರೀ ಚೆಡ್ಡಿ ಫಿಗರ್ಸುಗಳೇ ಕಾಣಿಸ್ತ್ತವೆ. ಆಗ ನಮ್ಮ ಯುವತಿಯರಿಗೆ ಕಾಡಿಗೆಯ ಕಪ್ಪೇ ಮೇಕಪ್ಪು. ಈಗಿನವರು ಮೇಕಪ್ಪಿನ ಚಿಪ್ಪಿನಲ್ಲಿಯೇ ಅವಿತಿದ್ದು, ಆಗಾಗ ಬ್ಯೂಟಿ ಪಾರ್ಲರಿಗೆ ಹೋಗಿ ಮಾಡಿಸ್ಕೋತಾರೆ ಫೇಶಿಯಲ್ಲು, ಐ ಬ್ರೋ ಮತ್ತು ಇನ್ನೂ ಜಾಸ್ತಿ ಚೆಕಪ್ಪು.
ಅಯ್ಯೋ ಇನ್ನೂ ಹೇಳ್ತಾ ಹೋದ್ರೆ ಒಂಥರಾ ಮಧುರ ಯಾತನೆ ಕಿತ್ಗೊಂಡ್ ಬರುತ್ತೆ. ಫ್ಲಾಶ್ ಬ್ಯಾಕಿಂದ ಆಚೆಬನ್ನಿ. ನಾವು ಆಗಿನ ಮತ್ತು ಈಗಿನ ಎರಡೂ ಕಾಲಘಟ್ಟ ನೋಡಿದವರು. ಈ ಬಿಜಿ ಲೈಫ್ ಅಲ್ಲಿ ಸದ್ಯಕ್ಕೆ ಹಳೇಯ ನೆನಪುಗಳನ್ನು ಕೆದಕಕ್ಕೆ ಟೈಮ್ ಇಲ್ಲದವರು, ಯಾವಾಗ್ಲಾದ್ರೂ ಒಬ್ರೆ ಕುಂತು ಯೋಚಿಸಿ ಮೈಂಡ್ ಒಂಥರಾ ಫ್ರೆಷ್ ಅನ್ಸತ್ತೆ!!

No comments:

Post a Comment